ಕೆಎಎಸ್ ಅಧಿಕಾರಿಗಳು ಜನರ ಸಮಸ್ಯೆ, ಆಶೋತ್ತರಗಳಿಗೆ ಸ್ಪಂದಿಸಬೇಕು: ಕೃಷ್ಣ ಬೈರೇಗೌಡ

3 years ago

#KAS #officers #respond #people #problems #aspirations #KrishnaByregowda

ಆಡಳಿತ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ, ಆ ಮಾದರಿಯನ್ನು ಉಳಿಸಿಕೊಳ್ಳಬೇಕು
ಉತ್ತಮ ಆಡಳಿತ ನೀಡುವುದೇ ಸರ್ಕಾರದ ಗುರಿಯಾಗಿದ್ದು, ಕೆಎಎಸ್ ಅಧಿಕಾರಿಗಳು ಕೈಜೋಡಿಸಬೇಕು
ಮೈಸೂರು ಸಂಸ್ಥಾನ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನೆದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಕಾನೂನು ಯೋಜನೆಗಳನ್ನು ರಚಿಸುವುದು ಸರ್ಕಾರದ ಕೆಲಸ. ಆದರೆ, ಅದನ್ನು ಜನರಿಗೆ ತಲುಪಿಸುವವರು ಅಧಿಕಾರಿಗಳು. ಅಧಿಕಾರಿಗಳು ಸರ್ಕಾರದ ಬೆನ್ನೆಲುಬಿದ್ದಂತೆ. ಇಂತಹ ಮಹತ್ವದ ಸ್ಥಾನದಲ್ಲಿರುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಆಶೋತ್ತರಗಳಿಗೆ ತಕ್ಕಂತೆ ಸರ್ಕಾರದ ಜೊತೆಗೂಡಿ ನಡೆಯಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ (ಕೆಎಎಸ್) ಶತಮಾನೋತ್ವವದಲ್ಲಿ ಸಂಘದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಜನರಿಗೆ ಉತ್ತಮ ಆಡಳಿತ ಹಾಗೂ ಎಲ್ಲರಿಗೂ ನ್ಯಾಯ ನೀಡುವುದು ನಮ್ಮ ಗುರಿ. ಆದರೆ, ಅಧಿಕಾರಿಗಳ ಸಹಕಾರ ಇಲ್ಲದೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜನರ ಜೊತೆಗಿನ ಸ್ಪಂದನೆಗೆ ಅಧಿಕಾರಿಗಳು ನಮ್ಮ ಜೊತೆ ಕೈಜೋಡಿಸಬೇಕು. ಆಗ ಮಾತ್ರ ಜನಾದೇಶಕ್ಕೆ ಅರ್ಥ ಬರುತ್ತದೆ, ಆಡಳಿತವೂ ಜನಪರವಾಗಿ ಸುಧಾರಣೆಯಾಗುತ್ತದೆ” ಎಂದರು.

ಉತ್ತಮ ಆಡಳಿತದ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಆ ಮೇಲ್ಪಂಕ್ತಿಯನ್ನು ಹಾಗೇ ಉಳಿಸಿಕೊಳ್ಳಲು ಅಧಿಕಾರಿಗಳು ಸಹಕರಿಸಬೇಕು. ಜನರಿಗೆ ಭ್ರಷ್ಟಾಚಾರ ಮುಕ್ತ ಸೇವೆ ನೀಡಬೇಕು. ಆಡಳಿತ ಮಾತ್ರವಲ್ಲದೆ, ವಿಜ್ಞಾನ-ತಂತ್ರಜ್ಞಾನದಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಅಧಿಕಾರಿಗಳು ಬದಲಾದ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಆಡಳಿತ ಸೇವೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕು, ಅಧಿಕಾರಿ ವರ್ಗ ಶಾಶ್ವತ ಸರ್ಕಾರವಾಗಿದ್ದು, ವರಕೊಟ್ಟ ಜನರನ್ನು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಮೈಸೂರು ಸಂಸ್ಥಾನವನ್ನು ನೆನೆದ ಸಚಿವ: ಕೆಎಎಸ್ ಅಧಿಕಾರಿಗಳ ಸಂಘವನ್ನು ಕಟ್ಟಿದ್ದೇ ಮೈಸೂರು ಸಂಸ್ಥಾನ ಹಾಗೂ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಮೈಸೂರು ಸಂಸ್ಥಾನ ಇಡೀ ದೇಶಕ್ಕೆ ಮಾದರಿ ಆಡಳಿತ ನೀಡಿತ್ತು. ಅನೇಕ ರಾಜಮನೆತನಗಳು ಸ್ವಾರ್ಥಪರ ಚಿಂತನೆಯಲ್ಲಿದ್ದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸಮಾನ ಸಮ-ಸಮಾಜ ನಿರ್ಮಾಣದ ಚಿಂತನೆಯಲ್ಲಿದ್ದರು. ಎಲ್ಲಾ ವಿಭಾಗದಲ್ಲೂ ರಾಜ್ಯದ ಅಭಿವೃದ್ಧಿ ಹಾಗೂ ನವೀನ ಆಡಳಿತಕ್ಕೆ ಅಡಿಪಾಯ ಹಾಕಿದ್ದರು. ಇದೇ ಕಾರಣಕ್ಕೆ ಇತರೆ ಸಂಸ್ಥಾನಗಳನ್ನು ಟೀಕಿಸುತ್ತಿದ್ದ ಮಹಾತ್ಮ ಗಾಂಧಿ ಹಾಗೂ ಜವಹರ್ ಲಾಲ್ ನೆಹರೂ ಸಹ ಮೈಸೂರು ಸಂಸ್ಥಾನವನ್ನು ಮೆಚ್ಚಿಕೊಂಡಿದ್ದರು” ಎಂದು ಇತಿಹಾಸವನ್ನು ಮೆಲುಕು ಹಾಕಿದರು.

ಮೈಸೂರು ಮಹಾರಾಜರಿಂದ ಸ್ಥಾಪನೆಯಾದ ಕೆಎಎಸ್ ಅಧಿಕಾರಿಗಳ ಸಂಘ ಇಂದು ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ನೂರು ವರ್ಷಗಳ ಸಂಭ್ರಮ ಯಾವುದೇ ಸಂಘಕ್ಕೆ ಮಹತ್ವವಾದದ್ದು. ಇದು ಅವಿಸ್ಮರಣೀಯ ದಿನ, ಅಧಿಕಾರಿಗಳಿಗೆ ಮಾತ್ರವಲ್ಲ ರಾಜ್ಯಕ್ಕೆ ಹೆಮ್ಮೆಯ ದಿನ. ಕೆಸಿ ರೆಡ್ಡಿ ಕಾಲದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದವರೆಗೆ ಕೆಎಎಸ್ ಅಧಿಕಾರಿಗಳ ಸೇವೆಯೂ ಅಭಿನಂದನಾರ್ಹ. ಹೀಗಾಗಿ ನಿಮ್ಮ ಬೇಡಿಕೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಆಶ್ವಾಸನೆ ನೀಡಿದರು.

ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಇ.ವಿ. ರಮಣರೆಡ್ಡಿ, ಕೆ.ಎ.ಎಸ್. ಅಧಿಕಾರಿಗಳ ಸಂಘದ ಅಧ್ಯಕ್ಷ ರವಿ ತಿರ್ಲಾಪೂರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply