ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ: ಸಿದ್ದರಾಮಯ್ಯ

3 years ago

#protect #Constitution #us #Siddaramaiah

ಮೈಸೂರು: ಪ್ರತಿಯೊಬ್ಬ ಅಧಿಕಾರಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ವಿದ್ಯಾವಂತರಾದ ಅಧಿಕಾರಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯನ್ನು ಕರ್ತವ್ಯ ನಿರ್ವಹಿಸುವ ಮೂಲಕ ಜಾತ್ಯಾತೀತ ಹಾಗೂ ಸಮಾನ ಸಮಾಜವನ್ನು ನಿರ್ಮಿಸಬಹುದಾಗಿದೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಅಧಿಕಾರಿಗಳು ಕೈಗೊಳ್ಳಬೇಕು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ (ಕೆಎಎಸ್) ಶತಮಾನೋತ್ವವದಲ್ಲಿ ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಕಾನೂನು ಹಾಗೂ ನೀತಿಗಳನ್ನು ನಿರೂಪಿಸಿದರೆ, ಅವುಗಳನ್ನು ಜಾರಿಗೊಳಿಸುವುದು ಅಧಿಕಾರಿಗಳು. ಅಧಿಕಾರಿಗಳು, ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸರ್ಕಾರದ ಅಧಿಕಾರಿ ಹಾಗೂ ನೌಕರರು ಬಡವರ ವಿರೋಧಿ, ಜನವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಬಾರದು. ಜಾತಿ ಧರ್ಮಗಳ ಕಲಹದಲ್ಲಿಯೂ ಇರಬಾರದು. ಧರ್ಮಕ್ಕೂ, ಆಡಳಿತಕ್ಕೂ ಸಂಬಂಧವಿಲ್ಲ ಎಂದು ಕಿವಿಮಾತು ಹೇಳಿದರು.

ಅಲ್ಲದೆ, ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಅಥವಾ ಧರ್ಮ ಕಲಹಗಳಲ್ಲಿ ತೊಡಗಿಕೊಳ್ಳಬಾರದು. ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ದೇಶವನ್ನು ರಕ್ಷಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಒಬ್ಬ ವ್ಯಕ್ತಿ ಒಬ್ಬ ಮತ ಎಂದಿದೆ ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮಾನತೆ ಇಲ್ಲ. ಹೀಗೆ ಮುಂದುವರೆದರೆ , ಅಸಮಾನತೆಗೆ ಒಳಗಾದ ಜನರು ಸ್ವಾತಂತ್ರ್ಯಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆ ಇದೆ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಇದು ಎಲ್ಲ ನಾಗರಿಕರ ಕರ್ತವ್ಯ. ಇದನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಸುಧಾರಣೆ ತರಬಹುದಾಗಿದೆ. ಈಗ ಶಿಕ್ಷಣ ಅಭಿವೃದ್ಧಿಗೊಳ್ಳುತ್ತಿದೆ. ವಿದ್ಯಾವಂತರು ಜಾತ್ಯಾತೀತೆ, ವೈಚಾರಿಕತೆಯನ್ನು ಪಾಲಿಸಬೇಕು ಎಂದು ಅವರು ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ಯಾರಂಟಿ ಬಗ್ಗೆಯೂ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೊಳಿಸುವ ಭರವಸೆಯನ್ನು ನೀಡಿದೆ. ಈಗಾಗಲೇ 3 ಗ್ಯಾರಂಟಿ ಜಾರಿಯಾಗಿವೆ. ಆಗಸ್ಟ್ 24 ರಂದು 4 ನೇ ಗ್ಯಾರಂಟಿ ಹಾಗೂ 5ನೇ ಗ್ಯಾರಂಟಿ ಡಿಸೆಂಬರ್ ಅಥವಾ ಜನವರಿ 2024 ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ್ಯ ಭಾರತದ ಫಲವನ್ನು ಜನರಿಗೆ ತಲುಪಿಸುವ ಮೂಲಕ ಸಾಮಾಜಿಕ ಸುಧಾರಣೆಯನ್ನು ತರಬಹುದಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಇ.ವಿ. ರಮಣರೆಡ್ಡಿ, ಕೆ.ಎ.ಎಸ್. ಅಧಿಕಾರಿಗಳ ಸಂಘದ ಅಧ್ಯಕ್ಷ ರವಿ ತಿರ್ಲಾಪೂರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply