ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇತ್ಯಾದಿ ನಾಯಕರ ಬೂಟ್ ಪಾಲೀಶ್ ಮಾಡಿ, ವೈದ್ಯಕೀಯ ಮಹಾವಿದ್ಯಾಲಯದಕ್ಕೆ ಅನುದಾನ ಕೋರಲು ಮುಂದಾಗಿದ್ದ ಬಾಗಲಕೋಟೆ ಕರವೇ ಸೇನಾನಿಗಳ ತಂಡವಿದು. ಪೊಲೀಸರು ಬಂಧಿಸಿಟ್ಟಿದ್ದರೂ ನಮ್ಮ ನಾಯಕರು ಕಿಂಚಿತ್ತೂ ಅಧೀರರಾಗಿಲ್ಲ, ಆಗುವುದೂ ಇಲ್ಲ ಎಂದು ಕರವೇ ಹೇಳಿದೆ.
ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೇರಿದಂತೆ ಹಲವು ಬಿಜೆಪಿ ಮುಖಂಡರ ಬಾಗಲಕೋಟೆ ಭೇಟಿ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ಈ ಎಲ್ಲ ಮುಖಂಡರ ಬೂಟ್ ಪಾಲೀಶ್ ಮಾಡಿ ಬಾಗಲಕೋಟೆಗೆ ಮಂಜೂರಾಗಿರುವ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಣಿಗೆ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಬಾಗಲಕೋಟೆ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ ಬದ್ನೂರ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಕರವೇ ಸಾಮಾಜಿಕ ಜಾಲತಾಣ ಮುಖ್ಯಸ್ಥ ದಿನೇಶ್ ಕುಮಾರ್ ಎಸ್.ಸಿ., ವಾಸ್ತವವಾಗಿ ವಿರೋಧಪಕ್ಷಗಳು ಮಾಡಬೇಕಾದ ಕೆಲಸವನ್ನು ನಮ್ಮ ಬಾಗಲಕೋಟೆ ಕರವೇ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಅವರ ನೇತೃತ್ವದಲ್ಲಿ ಮಾಡುತ್ತಿದೆ. ಹೇಳಿಕೇಳಿ ರಮೇಶ ಅವರು ಬಾಗಲಕೋಟೆಯ ಪ್ರಸಿದ್ಧ ವಕೀಲರೂ ಹೌದು. ಹೀಗಾಗಿ ಅವರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು 2015ರಲ್ಲಿ. ಅಲ್ಲಿಂದೀಚೆಗೆ ಯಾವುದೇ ಅನುದಾನ ನೀಡಲಾಗಿಲ್ಲ. ಮೂರು ಸರ್ಕಾರಗಳ ಅವಧಿಯಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಅನುದಾನಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಲೇ ಬಂದಿದೆ. ಈಗಿನ ಸರ್ಕಾರದ ಮೇಲೂ ಒತ್ತಡ ಹೇರುವ ಸಲುವಾಗಿ ಚಳವಳಿ ಸಂಘಟಿಸಿದ್ದು ಈಗ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಕಣ್ಣು ಕೆಂಪಗಾಗಿಸಿದೆ. ಚಳವಳಿಯನ್ನು ಹತ್ತಿಕ್ಕುವ ಸಲುವಾಗಿ ಚರಂತಿಮಠ ಎಲ್ಲ ಬಗೆಯ ಯತ್ನಗಳನ್ನೂ ಮಾಡುತ್ತಿದ್ದಾರೆ. ಈ ಚರಂತಿಮಠ ಅವರಿಗೇ ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವುದು ಬೇಕಾಗಿಲ್ಲ. ಖಾಸಗಿ ಮೆಡಿಕಲ್ ಮಾಫಿಯಾದ ಭಾಗವಾಗಿರುವವರು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವುದನ್ನು ಹೇಗೆ ಒಪ್ಪಲು ಸಾಧ್ಯ ಹೇಳಿ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ವಾರ ಮೆಡಿಕಲ್ ಕಾಲೇಜು ಅನುದಾನಕ್ಕೆಂದು ಕರವೇ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೂಟ್ ಪಾಲೀಶ್ ಅಭಿಯಾನ ನಡೆಸಿತು. ಅಧಿಕಾರಿಗಳ, ಸಾರ್ವಜನಿಕರ ಬೂಟ್ ಪಾಲೀಶ್ ಮಾಡಿ ಸಂಗ್ರಹಗೊಂಡ ಹಣವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿತು. ಇದರಿಂದ ಮುಜುಗರಕ್ಕೆ ಒಳಗಾದ ಶಾಸಕ ಚರಂತಿಮಠ ಅನುದಾನ ತರಲು ಶ್ರಮಪಡಬೇಕಿತ್ತು. ಆದರೆ ಈತ ಪತ್ರಿಕಾ ಹೇಳಿಕೆ ನೀಡಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಕಲೆಕ್ಷನ್ ಆಗಲ್ಲ, ಊರು ತುಂಬಾ ಬೂಟ್ ಪಾಲೀಶ್ ಮಾಡಿ, ಹಣ ಹೆಚ್ಚು ಸಿಗುತ್ತದೆ ಎಂಬ ದುರಹಂಕಾರದ ಹೇಳಿಕೆ ನೀಡಿದ್ದ. ಶಾಸಕನ ಸವಾಲನ್ನು ಸ್ವೀಕರಿಸಿ, ಕರವೇ ಬಾಗಲಕೋಟೆ ಜಿಲ್ಲಾ ಘಟಕ ಬಾಗಲಕೋಟೆ ನಗರದಲ್ಲಿ ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ಬೃಹತ್ ‘ಬೂಟ್ ಪಾಲೀಶ್ ಅಭಿಯಾನ’ ನಡೆಸಿಯೇಬಿಟ್ಟಿತು ಎಂದಿದ್ದಾರೆ.
ಬಾಗಲಕೋಟೆ ನಗರದ ಜನತೆ ಈ ಅಭಿಯಾನವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಉದ್ಯಮಿಗಳು, ವ್ಯಾಪಾರಸ್ಥರಿಂದ ಹಿಡಿದು ಕೂಲಿ ಕಾರ್ಮಿಕರು, ಭಿಕ್ಷುಕರವರೆಗೆ ಎಲ್ಲರೂ ಪಾದರಕ್ಷೆ ಪಾಲೀಶ್ ಮಾಡಿಸಿಕೊಂಡು ಹಣ ನೀಡಿದರು. ಈ ಅಭಿಯಾನದಲ್ಲಿ ಪಕ್ಕದ ಗದಗ, ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ ಜಿಲ್ಲೆಗಳ ಕರವೇ ಮುಖಂಡರು, ರಾಜ್ಯ ಮುಖಂಡರೂ ಪಾಲ್ಗೊಂಡು ಬಾಗಲಕೋಟೆ ಘಟಕದೊಂದಿಗೆ ನಾವೆಲ್ಲ ಇದ್ದೇವೆ ಎಂದು ಸಾರಿದರು. ಶಾಸಕನಿಗೆ ಇದಕ್ಕಿಂತ ದೊಡ್ಡ ಮುಖಭಂಗ ಇನ್ನೊಂದಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂದು ಯಡಿಯೂರಪ್ಪ, ಪ್ರಹ್ಲಾದ್ ಜೋಷಿಯವರ ಕಾರ್ಯಕ್ರಮವೊಂದನ್ನು ಬಾಗಲಕೋಟೆಯಲ್ಲಿ ಆಯೋಜಿಸಲಾಗಿತ್ತು. ಈ ನಾಯಕರ ಬೂಟ್ ಪಾಲೀಶ್ ಮಾಡಿ ಮೆಡಿಕಲ್ ಕಾಲೇಜಿಗೆ ಅನುದಾನ ಕೇಳುವುದಾಗಿ ರಮೇಶ ಬದ್ನೂರ ಘೋಷಿಸಿದ್ದರು. ತಮ್ಮ ನಾಯಕರ ಎದುರು ಇನ್ನಷ್ಟು ಮುಖಭಂಗವಾಗುವುದನ್ನು ತಪ್ಪಿಸಲು ಶಾಸಕ ಚರಂತಿಮಠ ಪೊಲೀಸರನ್ನು ಬಳಸಿಕೊಂಡು ರಮೇಶ್ ಬದ್ನೂರ ಮತ್ತು ಕರವೇ ಜಿಲ್ಲಾ ಮುಖಂಡರನ್ನು ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಂಥ ಪೊಲೀಸು, ಬಂಧನ, ಜೈಲು ಇತ್ಯಾದಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತೂ ಬೆದರುವುದಿಲ್ಲ. ಮಂಜೂರಾಗಿರುವ ಮೆಡಿಕಲ್ ಕಾಲೇಜಿಗೆ ಅನುದಾನ ಕೇಳುವುದು ಅಪರಾಧವಲ್ಲ. ಇದಕ್ಕಾಗಿ ಪ್ರತಿಭಟಿಸುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು ಎಂದು ಅವರು ಹೇಳಿದ್ದಾರೆ.
ಶಾಸಕ ವೀರಣ್ಣ ಚರಂತಿಮಠ ಈಗಾಗಲೇ ತಮ್ಮ ಬಾಲಂಗೋಚಿಗಳ ಮೂಲಕ ಕರವೇ ಮುಖಂಡರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಮುಖಂಡರು ದಿನಕ್ಕೊಂದು ಪತ್ರಿಕಾಗೋಷ್ಠಿ ನಡೆಸಿ ಮುಖ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಬಾಗಲಕೋಟೆಯ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಕರವೇ ಕಾರ್ಯಕರ್ತರ ಕೂದಲು ಕೊಂಕಿದರೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಅಗತ್ಯ ಬಿದ್ದರೆ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಲಕ್ಷಾಂತರ ಕಾರ್ಯಕರ್ತರು ಬಾಗಲಕೋಟೆ ನಗರದಲ್ಲಿ ಸಮಾವೇಶಗೊಂಡು ನಿರ್ಣಾಯಕ ಹೋರಾಟ ನಡೆಸುವುದಕ್ಕೂ ಸಜ್ಜಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಚಳವಳಿ ಮುಂದುವರೆಯುತ್ತದೆ, ವೈದ್ಯಕೀಯ ಮಹಾವಿದ್ಯಾಲಯ ಆರಂಭಗೊಳ್ಳುವವರೆಗೆ. ಯಾವುದೇ ಶಾಸಕನಾಗಲೀ, ಇನ್ನೊಬ್ಬ ಪುಡಾರಿಯಾಗಲೀ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.



