ಬೆಂಗಳೂರು: ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಝೋನ್ ನಿಗದಿಗೊಳಿಸುವ ಹಾಗೂ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ವಿಪಕ್ಷದ ಸದಸ್ಯ ವಿರೋಧ ಸಭಾತ್ಯಾಗ ನಡುವೆಯೂ ಅನುಮೋದನೆಯಾಯಿತು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ವಿಧೇಯಕ ಮಂಡಿಸಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜ್, ರಾಜ್ಯದ ಕೆರೆಗಳ ಬಫರ್ ಝೋನ್ 30 ಮೀಟರ್ ನಿಗದಿ ಮಾಡಲಾಗಿತ್ತು. ಇದೀಗ ಕೆರೆಗಳ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲಾಗುತ್ತಿದೆ ಎಂದರು.
5 ಗುಂಟೆವರೆಗೆ 0 ಮೀಟರ್, 5 ಗುಂಟೆಯಿಂದ 1 ಎಕರೆಯವರೆಗೆ 3 ಮೀಟರ್, 1-10 ಎಕರೆಯವರೆಗೆ 6 ಮೀಟರ್, 10-25 ಎಕರೆಯವರೆಗೆ 12 ಮೀಟರ್, 25 -100 ಎಕರೆಯವರೆಗೆ 24 ಮೀಟರ್ ಮತ್ತು 100 ಎಕರೆಗಿಂತ ದೊಡ್ಡದಾದ ಕೆರೆಗಳಿಗೆ 30 ಮೀಟರ್ ಬಫರ್ ವಲಯ ನಿಗದಿ ಮಾಡಲಾಗಿದೆ. ಬಫರ್ ಝೋನ್ ಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಪಡಿಸಲು ಅವಕಾಶ ಕಲ್ಫಿಸಲಾಗಿದೆ ಎಂದರು.
ಮೇಲ್ಮನೆಯ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಂದು ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಜನಸಂಖ್ಯೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿಲ್ಲ. ಕೆರೆ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿಯಿಂದ ಬಫರ್ ವಲಯದ ಗಾತ್ರ ಕಡಿಮೆಯಾಗುವುದರಿಂದ ಕೆರೆಗಳ ನಾಶವಾಗುವ ಸಾಧ್ಯತೆಯಿದೆ ಎಂದರು.
ಬೆಂಗಳೂರು ನಗರದಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತಿದೆ. ಕೆರೆ ಪ್ರದೇಶ ಅತಿಕ್ರಮಿಸಿದ ಪರಿಣಾಮ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆ ತೆರವು ವಿಚಾರದಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬುದನ್ನ ಒಪ್ಪಿಕೊಳ್ಳಬೇಕಾಗಿದೆ ಎಂದರು.
ಕೆರೆ ಸುರಕ್ಷತೆ ಸಂಬಂಧಿಸಿದಂತೆ ಎ.ಟಿ.ರಾಮಸ್ವಾಮಿ, ಲಕ್ಷ್ಮಣ್ ರಾವ್, ಯಲ್ಲಪ್ಪ, ಹಾಗೂ ಕೋಳಿವಾಡ ಅವರು ನೀಡಿದ ವರದಿಯನ್ನ ಅಧ್ಯಯನ ನಡೆಸಬೇಕಿದೆ. ಹೀಗಾಗಿ ಇದನ್ನ ಜಂಟಿ ಸದನ ಸಮಿತಿಗೆ ನೀಡಬೇಕಿದೆ ಎಂದರು.
ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರಾದ ಸಿ.ಟಿ.ರವಿ,ರವಿಕುಮಾರ್, ಕೆ.ಎಸ್.ನವೀನ್, ಕೇಶವಪ್ರಸಾದ್ ಹಾಗೂ ಆಡಳಿತ ಪಕ್ಷದ ಸದಸ್ಯರು ಮಾತನಾಡಿದರು.
ಬಳಿಕ ಮಾತನಾಡಿದ ಸಚಿವ ಎನ್.ಎಸ್.ಬೋಸರಾಜ್, ಕೆರೆಗಳ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ರಾಜ್ಯದಲ್ಲಿ 41,849 ಕೆರೆಗಳಿವೆ. 35,985 ಕೆರೆಗಳ ಸರ್ವೇ ಕಾರ್ಯ ಮುಗಿದಿದ್ದು, 5687 ಕೆರೆಗಳ ಸರ್ವೇ ಬಾಕಿಯಿದೆ. ಒತ್ತುವರಿಯಾದ 13,644 ಕೆರೆಗಳ ಪೈಕಿ 7987 ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. 5687 ಕೆರೆಗಳ ಒತ್ತುವರಿ ತೆರವು ಮಾಡಬೇಕಿದೆ. ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ತೆರವು ಕಾರ್ಯ ಚುರುಕುಗೊಳಿಸಲಾಗಿದೆ ಎಂದರು.
ಇಂದು ಬೆಂಗಳೂರು ನಗರದಲ್ಲಿರುವ ಕೆರೆಗಳಲ್ಲಿ ಎನ್ ಜಿ ಟಿ ಆದೇಶದಂತೆ 30 ಮೀಟರ್ ಬಫರ್ ಜೋನ್ ಇಲ್ಲವಾಗಿದೆ. ಕೆರೆಗಳ ಸಂರಕ್ಷತೆ ಜೊತೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ತಿದ್ದುಪಡಿ ವಿಧೇಯಕದ ಉದ್ದೇಶವಾಗಿದೆ. ಹೀಗಾಗಿ ಮಸೂದೆಯನ್ನ ಅಂಗೀಕರಿಸಬೇಕೆಂದು ಮನವಿ ಮಾಡಿದರು. ತಿದ್ದುಪಡಿ ಕಾಯ್ದೆಗೆ ವಿರೋಧ ಪಕ್ಷದ ಸದಸ್ಯರು ವಿರೋಧಿಸಿ ಸಭಾತ್ಯಾಗ ಮಾಡಿದರು. ಅಂತಿಮವಾಗಿ ವಿಧೇಯಕಕ್ಕೆ ಅಂಗೀಕಾರವಾಯಿತು.




