ಕರ್ನಾಟಕಕ್ಕೆ ಬರ ಪರಿಹಾರ ವಿಳಂಬ: ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದ ಸುಪ್ರೀಂ ಕೋರ್ಟ್

2 years ago

ದೆಹಲಿ: ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿಯಿಂದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ರಿಟ್ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.

ರಾಜ್ಯ ಸರ್ಕಾರದ ಮನವಿಯ ಬಗ್ಗೆ ಎರಡು ವಾರಗಳಲ್ಲಿ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ.

ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘರ್ಷಕ್ಕಿಳಿಯದೆ ಒಕ್ಕೂಟ ವ್ಯವಸ್ಥೆಯಡಿ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕೆಂಬ ಮಹತ್ವದ ಸಲಹೆಯನ್ನು ಸಹ ನೀಡಿತು. ಒಂದು ಹಂತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಪ್ರತಿಯೊಂದಕ್ಕೂ ರಾಜ್ಯ ಸರ್ಕಾರಗಳು ನ್ಯಾಯಾಲಯಕ್ಕೆ ಬರಬೇಕೆ? ಎಲ್ಲವನ್ನು ನ್ಯಾಯಾಲಯವೇ ಇತ್ಯರ್ಥಪಡಿಸುವುದಾದರೆ ಕೇಂದ್ರ ಸರ್ಕಾರದ ಪಾತ್ರವೇನೆಂದು ಅಟಾರ್ನಿ ಜನರಲ್ ಪ್ರಶ್ನೆ ಮಾಡಿದರು.

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪೀಲ್ ಸಿಬಲ್, ಕರ್ನಾಟಕದಲ್ಲಿ ಈ ಬಾರಿ ಭೀಕರ ಬರಗಾಲ ಆವರಿಸಿದೆ. ರಾಜ್ಯದ ಬಹುತೇಕ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಎನ್.ಡಿ.ಆರ್.ಎಫ್. ಅಡಿ ಸಿಗಬೇಕಾದ ಪರಿಹಾರ ಸಿಕ್ಕಿಲ್ಲ ಎಂದು ಕೋರ್ಟ್ ಗಮನ ಸೆಳೆದರು.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಸೇರಿದಂತೆ ಮತ್ತಿತರ ಅಧಿಕಾರಿಗಳ ನಿಯೋಗ ಕೇಂದ್ರ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಕೇಂದ್ರದ ಜತೆ ರಾಜ್ಯ ಸರ್ಕಾರ ಪತ್ರ ವ್ಯವಹಾರ ನಡೆಸಿತ್ತು. ರಾಜ್ಯ ಸಚಿವರ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿತ್ತು. ಪ್ರಧಾನಿ ಮತ್ತು ಗೃಹ ಸಚಿವರಿಗೆ ರಾಜ್ಯ ಸರ್ಕಾರದಿಂದ ಮನವಿಯನ್ನೂ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.

ಆದರೂ ಕೇಂದ್ರ ಸರ್ಕಾರ ಪರಿಹಾರ ನೀಡದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿದ್ದರೆ ನಾವೇಕೆ ನ್ಯಾಯಾಲಯದ ಮೊರೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಟಾನಿ ಜನರಲ್ ವೆಂಕಟರಮಣ, ಕರ್ನಾಟಕಕ್ಕೆ ಸಿಗಬೇಕಾದ ಪರಿಹಾರವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಿದ್ದೇವೆ. ಯಾವುದೇ ರಾಜ್ಯಗಳಿಗೂ ತಾರತಮ್ಯ ತೋರಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳಿಗೂ ಯಾವ ರೀತಿ ನ್ಯಾಯ ಕೊಡಬೇಕೋ ಅದೇ ರೀತಿ ಕೇಂದ್ರ ಸರ್ಕಾರ ಕರ್ನಾಟಕಕ್ಕೂ ಅದೇ ಮಾನದಂಡವನ್ನು ಅನುಸರಿಸಿದೆ ಎಂದು ಸಮರ್ಥಿಸಿಕೊಂಡರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ಪರಿಹಾರ ಬಿಡುಗಡೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘರ್ಷ ಮಾಡಿಕೊಳ್ಳುವುದು ಬೇಡ ಎಂದು ಸೂಚನೆ ನೀಡಿದರು. ಕರ್ನಾಟಕಕ್ಕೆ ಎಷ್ಟು ಪರಿಹಾರ ನೀಡಿದೆ ಎಂಬುದರ ಬಗ್ಗೆ ನಿಮ್ಮ ಬಳಿ ದಾಖಲೆಗಳು ಇವೆಯೇ? ಎಂದು ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿದರು.

ನಮಗೆ ಒಂದಿಷ್ಟು ಸಮಯ ಅವಕಾಶ ಕೊಟ್ಟರೆ ಎಲ್ಲವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎಂದು ಅಟಾರ್ನಿ ಜನರಲ್ ಹೇಳಿದರು. ಎರಡೂ ಕಡೆ ವಾದ-ವಿವಾದ ಆಲಿಸಿದ ನ್ಯಾಯಪೀಠ ಎರಡು ವಾರಗಳಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Leave a Reply