ಹೊರ ರಾಜ್ಯಗಳ ವೈದ್ಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ಕಾರ್ಯಕ್ರಮ: ಡಾ.ಕೆ.ಸುಧಾಕರ್‌

3 years ago

ಬೆಂಗಳೂರು ಗ್ರಾಮಾಂತರ: ರಾಜ್ಯದ ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ಇದೇ ವರ್ಷದಿಂದ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಘೋಷಣೆ ಮಾಡಿದ್ದಾರೆ.

ಜಿಲ್ಲಾಡಳಿತ ವತಿಯಿಂದ ನಡೆದ ೬೭ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಚಿವರು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಮಾತೃಭಾಷಾ ಕಲಿಕೆಗೆ ಆದ್ಯತೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೆಲ ರಾಜ್ಯಗಳಲ್ಲಿ ಈಗಾಗಲೇ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ. ಇದೇ ನವ ಭಾರತದ ಪರಿಕಲ್ಪನೆಯಾಗಿದೆ. ಅದೇ ರೀತಿ, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದೇ ವರ್ಷದಿಂದ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ಜಾರಿ ಮಾಡಲಾಗುವುದು. ಕರ್ನಾಟಕದಲ್ಲಿ ನಾವು ಇರುವುದಲ್ಲ, ನಮ್ಮೊಳಗೆ ಕರ್ನಾಟಕ ಇರಬೇಕು. ಅದಕ್ಕಾಗಿ ʼಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ ೨೦೨೨ʼ ತರುವ ಚಿಂತನೆ ಸರ್ಕಾರಕ್ಕಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ, ಕನ್ನಡ ಉಳಿಸುವ ಬೆಳೆಸುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಕೋಟಿ ಕಂಠ ಗಾಯನ ಏರ್ಪಡಿಸಿದ್ದು, ಕನ್ನಡ ಕವಿತೆಗಳ ಬಗ್ಗೆ ವಿಶೇಷ ಪ್ರೀತಿ ಬೆಳೆಸುವ ಐತಿಹಾಸಿಕ ಕೆಲಸವಾಗಿದೆ. ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ, ಸಿಬ್ಬಂದಿ ಕೂಡ ಇದರಲ್ಲಿ ಭಾಗವಹಿಸಿದ್ದರು. ಇದು ಶ್ಲಾಘನೀಯ ಎಂದರು.

ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ ವಿಭಿನ್ನವಾದ ಸೊಗಸಾದ ಭಾಷೆ ಕೇಳಬಹುದು. ಹಳೇ ಮೈಸೂರಿಗೆ ಹೋದರೆ ಬೇರೆ ರೀತಿಯ ಕನ್ನಡ ಕೇಳಬಹುದು. ಉತ್ತರ ಕನ್ನಡ ಜಿಲ್ಲೆಗೆ ಹೋದರೆ ಹವ್ಯಕ ಕನ್ನಡ, ದಕ್ಷಿಣ ಕನ್ನಡಕ್ಕೆ ಹೋದರೆ ಬೇರೆ ಶೈಲಿಯ ಕನ್ನಡ, ಕುಂದಾಪುರಕ್ಕೆ ಹೋದರೆ ಕುಂದ ಕನ್ನಡ ಕೇಳಬಹುದು. ಹಾಗೆಯೇ ಆಚಾರ, ವಿಚಾರ, ತಿಂಡಿಗಳು ಬದಲಾಗುತ್ತವೆ. ಯಕ್ಷಗಾನ, ಬಯಲಾಟ, ವೀರಗಾಸೆ, ದೈವಾರಾಧನೆ, ಜೋಗಪ್ಪ ಮೊದಲಾದ ಕಲೆಗಳು ನಮ್ಮಲ್ಲಿವೆ ಎಂದರು.

ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಜಗತ್ತಿನಲ್ಲಿ ಆರೂವರೆ ಸಾವಿರ ಭಾಷೆಗಳಲ್ಲಿ ಕನ್ನಡ ೨೭ ನೇ ಸ್ಥಾನದಲ್ಲಿದೆ ಎನ್ನಲಾಗುತ್ತದೆ. *ವಿಶ್ವ ಲಿಪಿಗಳ ರಾಣಿ* ಎಂದು ಕನ್ನಡದ ಲಿಪಿಯನ್ನು ಬಣ್ಣಿಸಲಾಗಿದೆ. ಭಾರತವನ್ನು ಹಲವಾರು ದಶಕ ಆಳಿದ ಬ್ರಿಟಿಷರ ದೇಶದ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಕ್‌ ಆಯ್ಕೆಯಾಗಿದ್ದಾರೆ ಎಂಬುದು ಹೆಮ್ಮೆಯ ವಿಚಾರ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮೊದಲ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಭಾರತದ ಚಿತ್ರರಂಗ ಎಂದರೆ ಬಾಲಿವುಡ್‌ ಮಾತ್ರ ಎನ್ನಲಾಗುತ್ತಿತ್ತು. ಈಗ ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ವಿಸ್ತರಿಸುತ್ತಿದೆ ಎಂದರು.

ನಾಡಪ್ರಭು ಕೆಂಪೇಗೌಡರು ಆಗಿನ ಕಾಲದಲ್ಲೇ ಸರ್ವಜನಾಂಗದ ಶಾಂತಿ ತೋಟ ಸ್ಥಾಪಿಸಿದ್ದರು. ಸಮಾನತೆಗೆ ಒತ್ತು ಕೊಟ್ಟಿದ್ದ ಅವರು, ಜಾತಿ ಸಮುದಾಯಗಳಿಗೆ ಪೂರಕವಾಗಿ ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ಅಂತಹ ಪುಣ್ಯಾತ್ಮನನ್ನು ನಮ್ಮ ಸರ್ಕಾರ ಸ್ಮರಣೆ ಮಾಡುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ೧೦೮ ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್‌ ೧೧ ರಂದು ಈ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಇದು ಬೆಂಗಳೂರು ಗ್ರಾಮಾಂತರದ ಜನರಿಗೆ ವಿಶೇಷ ಕ್ಷಣವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮೃತರಾದ ಬಳಿಕ ನೇತ್ರದಾನ ಮಾಡಿ ಯುವಜನರಿಗೆ ಪ್ರೇರಣೆಯಾದರು. ಆ ಬಳಿಕ ನೇತ್ರದಾನದ ಪ್ರಮಾಣ ಹೆಚ್ಚಿದೆ ಎಂದರು.

ರಾಜ್ಯದ ಯುವಜನರು ಕನ್ನಡ ಭಾಷೆ, ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡಬೇಕು. ಕನ್ನಡಿಗರು ವಿಶ್ವಮಾನವರಾಗಬೇಕು ಎಂದು ಕವಿ ಕುವೆಂಪು ಹೇಳಿದ್ದರು. ಅದರ ಜೊತೆಗೆ ಕನ್ನಡ ಭಾಷೆ ಎಲ್ಲರಲ್ಲೂ ಗಟ್ಟಿಯಾಗಿ ಬೇರೂರಬೇಕು ಎಂದರು.

Leave a Reply