ಕನ್ನಡದ ಮಧ್ಯಮ ವರ್ಗ ಆತ್ಮಹೀನವಾಗುತ್ತಿದೆ ಎಂದು ಎಚ್ಚರಿಸಿದ್ದ ಡಿ.ಆರ್.ನಾಗರಾಜ್

3 years ago

#DRNagaraj #warned #Kannada #middleclass #becoming #soulless #ranganathkantanakunte

“ಕನ್ನಡದ ಮಧ್ಯಮ ವರ್ಗ ದಿನೇ ದಿನೇ ಆತ್ಮಹೀನವಾಗುತ್ತ ಬರುತ್ತಿದೆ. ಭಾರತದ ಉಳಿದ ಪ್ರದೇಶಗಳ ಬಗೆಗೂ ಇದೇ ಮಾತು ಹೇಳಬಹುದಾದರೂ, ಕನ್ನಡ ಮಧ್ಯಮ ವರ್ಗ ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿದೆ.”(ಸಂಸ್ಕೃತಿ ಕಥನ, 43) ಎಂಬ ಮಾತನ್ನು ಡಿ. ಆರ್. ಎನ್. ಹೇಳಿದ್ದಾರೆ.

ಕನ್ನಡ ಚಳವಳಿ ಹಾಗೂ ಕನ್ನಡದ ಬಳಕೆಯ ವಲಯ ಕುಗ್ಗಿರುವುದರ ಹಿನ್ನೆಲೆಯನ್ನು ವಿಶ್ಲೇಷಿಸುತ್ತ ಮೂರೂವರೆ ದಶಕಗಳ ಹಿಂದೆ ಅವರು ಹೇಳಿರುವ ಮಾತು ಮಹತ್ವದಿಂದ ಕೂಡಿದೆ. ಆಧುನಿಕ ಭಾರತದ ಇಲ್ಲವೇ ಪ್ರಪಂಚದ ಚರಿತ್ರೆಯನ್ನು ಗಮನಿಸಿದರೆ ಯಾವುದೇ ಭಾಷೆ ಇಲ್ಲವೇ ರಾಷ್ಟ್ರೀಯತೆಗಳ ಹೋರಾಟಗಳು ಮಧ್ಯಮ ವರ್ಗದ ನಾಯಕತ್ವದಲ್ಲಿಯೇ ನಡೆದಿರುವುದನ್ನು ಗಮನಿಸಬಹುದು. ಅಥವಾ ‘ಮಧ್ಯಮ ವರ್ಗ’ವಾಗುವ ಹಂತದಲ್ಲಿರುವ ಕಾರ್ಮಿಕ ಮತ್ತು ರೈತಾಪಿ ವರ್ಗಗಳ ನಾಯಕತ್ವದಲ್ಲಿ ರಾಷ್ಟ್ರೀಯತೆಯ ಮತ್ತು ಭಾಷಾ ಹೋರಾಟಗಳು ನಡೆದಿರುವುದನ್ನು ಗಮನಿಸಬಹುದು. ಕರ್ನಾಟಕದ ಏಕೀಕರಣ ಚಳವಳಿ ಕೂಡ ಮಧ್ಯಮ ವರ್ಗ ಮತ್ತು ಮೇಲ್ಜಾತಿಯ ನಾಯಕತ್ವದಲ್ಲಿಯೇ ನಡೆದದ್ದನ್ನು ಗಮನಿಸಬಹುದು. ನಮ್ಮ ದೇಶದ ವಸಾಹತುಶಾಹಿ ವಿರೋಧಿ ಹೋರಾಟ ಕೂಡ ಮೇಲ್ಮಧ್ಯಮ, ಮಧ್ಯಮ, ಮೇಲ್ಜಾತಿಗಳ ಹಾಗೂ ಊಳಿಗಮಾನ್ಯಶಾಹಿ ಭೂಮಾಲೀಕ ವರ್ಗಗಳ ನೇತೃತ್ವದಲ್ಲಿಯೇ ನಡೆದದ್ದು ತಿಳಿದಿರುವ ವಿಚಾರವೇ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಸಂಘಟಿತವಾಗಿದ್ದ ರಾಷ್ಟ್ರೀಯತೆಯ ಹೋರಾಟಗಳೂ ಕೂಡ ಮಧ್ಯಮ ವರ್ಗದ ನೇತೃತ್ವದಲ್ಲಿಯೇ ನಡೆದದ್ದು. ಅಂದರೆ ಮಧ್ಯಮ ವರ್ಗದ ಪಾಲ್ಗೊಳ್ಳುವಿಕೆ, ಬಲಾಢ್ಯ ಶಕ್ತಿಗಳ ಎದುರು ಅದು ಸೆಟೆವ ಬಗೆ, ಅದರ ವೈಚಾರಿಕತೆ, ಅದರ ಸಾಂಸ್ಕೃತಿಕ ಆಯ್ಕೆಗಳು ಯಾವುದೇ ಒಂದು ದೇಶದ ಹೋರಾಟದ ಚರಿತ್ರೆಯನ್ನು ಮತ್ತು ಸಾಂಸ್ಕೃತಿಕ ಮುನ್ನೋಟವನ್ನು ನಿರ್ಧರಿಸುತ್ತದೆ.

ಈ ದಿಸೆಯಲ್ಲಿ ಕನ್ನಡದ ಮಧ್ಯಮ ವರ್ಗದ ಸ್ವಭಾವವನ್ನು ಪರಿಶೀಲಿಸಿದರೆ ಸ್ವಾತಂತ್ರ್ಯಾನಂತರದಲ್ಲಿ ಅದು ‘ಆತ್ಮಹೀನ’ವಾಗಿ ಮುನ್ನಡೆಯುತ್ತಿರುವುದನ್ನು ಮತ್ತು ಕನ್ನಡದ ಬದುಕಿನಿಂದ ದೂರ ಸರಿಯುತ್ತಿರುವುದನ್ನು ಗಮನಿಸಬಹುದು. ಇಂತಹ ‘ಆತ್ಮಹೀನ ವರ್ಗ’ವನ್ನು ಮುಂದಿಟ್ಟುಕೊಂಡೇ ಶಿಕ್ಷಣೋದ್ಯಮಿಗಳು, ಇವರ ಪೋಷಕ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು, ನ್ಯಾಯಾಲಯಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಿವೆ. ತಾವು ಯಾವ ನೆಲದಲ್ಲಿ ನಿಂತಿದ್ದೇವೆ ಎಂಬುದನ್ನು ಮರೆತು ತಮ್ಮ ಸ್ವಾರ್ಥಕ್ಕಾಗಿ ನಾಡಿನ ಬಹುಸಂಖ್ಯಾತ ಜನರ ಬದುಕನ್ನು, ಅವರ ಸೃಜನಶೀಲತೆಯನ್ನು ನಾಶ ಮಾಡುವಲ್ಲಿ ಈ ವರ್ಗ ಕ್ರಿಯಾಶೀಲವಾಗಿದೆ. ಆ ಮೂಲಕ ಒಂದು ಜನಸಮುದಾಯವನ್ನೇ ಪರಂಪರೆಯ ಕಳ್ಳುಬಳ್ಳಿಯಿಂದ ತುಂಡುಗಡಿಯುತ್ತಿದೆ.

ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಹೆಸರಿನಲ್ಲಿ ಅದರ ವ್ಯಾಪಾರದಲ್ಲಿ ಈ ವರ್ಗ ತೊಡಗಿರುವುದು ಅದು ಆತ್ಮಹೀನವಾಗಿರುವುದರ ದ್ಯೋತಕ. ಮಧ್ಯಮ ವರ್ಗ ಮತ್ತು ವ್ಯಾಪಾರೀ ವರ್ಗಗಳೆರಡೂ ಕೂಡಿ ಕನ್ನಡವನ್ನು ಮಣ್ಣು ಮುಕ್ಕಿಸುತ್ತಿವೆ. ಇವು ಕಟ್ಟಿ ಕೊಡುವ ನಕಲಿ ಜೀವನ ಮಾರ್ಗ ಮತ್ತು ‘ಅಭಿವೃದ್ಧಿ’ಮಾದರಿಗಳೇ ಬಹುಸಂಖ್ಯಾತ ಕೆಳವರ್ಗದ ಜನರಿಗೆ ಬಹುದೊಡ್ಡ ಆದರ್ಶದಂತೆ ಕಂಡು ಅದನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಈ ವರ್ಗ ತನ್ನಂತೆಯೇ ಇನ್ನಷ್ಟು ಆತ್ಮಹೀನ ಹೃದಯಗಳನ್ನೇ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿಯೂ ಕಳೆದ ಶತಮಾನದ ಕೊನೆಯ ದಶಕದ ನಂತರ ಸಂಭವಿಸಿರುವ ರಾಜಕೀಯ ಆರ್ಥಿಕ ಪಲ್ಲಟಗಳ ನಂತರ, ಮಾಹಿತಿ ಮತ್ತು ತಂತ್ರಜ್ಞಾನ ಮಾರುಕಟ್ಟೆಯ ಯಜಮಾನಿಕೆ ಯುಗದಲ್ಲಿ ಹುಟ್ಟಿ ಬೆಳೆದಿರುವ ಮೇಲ್ಜಾತಿ ಮತ್ತು ಅವಕಾಶವಾದಿ ಮಧ್ಯಮ ವರ್ಗ ಇನ್ನಷ್ಟು ಹೆಚ್ಚು ಅಪಾಯಕಾರಿಯಾಗಿ ಬೆಳೆದಿದೆ. ಇದು ಡಿ.ಆರ್.ಎನ್ ಹೇಳುವಂತೆ ಮೆಕಾಲೆಯ ಸಂತತಿ. ಈ ಸಂತತಿಗೆ ನಾಡು ನುಡಿ ಪರಂಪರೆ ಸಂಸ್ಕೃತಿಗಳು, ಅವುಗಳ ಸ್ವಾಯತ್ತತೆ ಮತ್ತು ಸಾರ್ವಭೌಮತ್ವಗಳು ಯಾವುವು ಲೆಕ್ಕಕ್ಕಿಲ್ಲ. ಎಲ್ಲವನ್ನೂ ಮರೆವಿಗೆ ಸರಿಸಿ ಸದ್ಯದ ಲಾಭದ ಲೆಕ್ಕಾಚಾರದಲ್ಲಿಯೇ ನೋಡಲು ಪ್ರಯತ್ನಿಸುತ್ತದೆ.

ಅಲ್ಲದೆ ಈ ವರ್ಗ ತನ್ನ ಅವಕಾಶವಾದೀ ಧೋರಣೆಯಿಂದ ಬದಲಾದ ಸಂದರ್ಭದಲ್ಲಿ ಬಲಾಢ್ಯ ಶಕ್ತಿಗಳಿಗೆ ಶರಣಾಗತವಾಗಿದೆ. ಇಲ್ಲವೇ ಮೊದಲೇ ಹೇಳಿದಂತೆ ಸಾಮಾಜಿಕವಾಗಿ ಬಲಾಢ್ಯ ಶಕ್ತಿಯೇ ಆಗಿದೆ. ದೇಶೀಯ ಮತ್ತು ವಿದೇಶೀ ಉದ್ಯಮಗಳ ಹಿತಾಸಕ್ತಿಗೆ ಅನುಗುಣವಾಗಿ ಕುಣಿಯತೊಡಗಿದೆ. ಇದು ಕರ್ನಾಟಕ ಏಕೀಕರಣದ ಆಶಯಗಳನ್ನು ಇನ್ನಷ್ಟು ನೆಲಕಚ್ಚಿಸಿದೆ. ತನ್ನ ಏಳ್ಗೆಗೆ ಇಂಗ್ಲಿಷ್ ಅನ್ನು ಆಯ್ಕೆಮಾಡಿಕೊಂಡು ಅದನ್ನು ಶಕ್ತಿಯುತ ಸಾಧನವಾಗಿ ಬಳಸುತ್ತ ‘ಕನ್ನಡ ಮಾತು ಎಂದಿಗೂ ತಲೆಯೆತ್ತದಂತೆ’ಮಾಡುತ್ತಿದೆ. ಇದರ ಹೊಡೆತದಿಂದ ಕನ್ನಡ ತಲೆಯೆತ್ತದಂತಾಗಿದೆ. ಉದಾಹರಣೆಗೆ, ಕನ್ನಡ ಇಲ್ಲವೇ ಮಾತೃಭಾಷೆಯಲ್ಲಿ ಕಲಿಯುವ ಪ್ರಶ್ನೆ ಬಂದಾಗಲೆಲ್ಲ ಈ ವರ್ಗಗಳು ಕನ್ನಡ ಪರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ಅದೇ ವೇಳೆಗೆ ಜಾಗತಿಕ ಶಕ್ತಿಗಳ ಇಲ್ಲವೇ ದೇಶೀಯ ವಣಿಕ ಶಕ್ತಿಗಳ ಜೊತೆಗೆ ನಿಂತಿದೆ.

ಇದರಿಂದ ಕನ್ನಡ ಮತ್ತು ಇತರೇ ಜನನುಡಿಗಳು ತಮ್ಮ ನೆಲದಲ್ಲಿಯೇ ಪರಕೀಯಗೊಳ್ಳುವ, ಅನಾಥಗೊಳ್ಳುವ ಸ್ಥಿತಿಗೆ ಬಂದು ತಲುಪಿವೆ. ಇದಕ್ಕೆ ಕಾರಣವಾಗಿರುವುದು ವಿದೇಶಿಯರಲ್ಲ; ತಮ್ಮ ನುಡಿಗಳಿಂದ ಸಿಡಿದು ಆರ್ಥಿಕವಾಗಿ ಸಬಲಗೊಂಡ ಮಧ್ಯಮ ವರ್ಗ ಮತ್ತು ಬಂಡವಾಳಿಗ ವರ್ಗ. ಇಂತಹ ವರ್ಗವನ್ನೇ ಡಿ. ಆರ್.ಎನ್ ‘ಮೆಕಾಲೆಯ ಮಕ್ಕಳು’ಎಂದು ಕರೆದದ್ದು. ಅಂದಿನ ಬ್ರಿಟಿಷ್ ವಸಾಹತುಶಾಹಿ ಆರಂಭಿಸಿದ ಇಂಗ್ಲಿಷ್ ಮಾಧ್ಯಮ ಶಿಕ್ಷಣವೂ ಇಂದು ಅದರ ವಿಕಾರ ರೂಪ ಪಡೆದಿದೆ. ದೈಹಿಕವಾಗಿ ಭಾರತೀಯ ಮತ್ತು ಕನ್ನಡಿಗರಾಗಿ ಕಾಣಿಸುವ ಈ ವರ್ಗದ ಜನರು ಆಲೋಚಿಸುವುದು ವಸಾಹತುಶಾಹಿಗಳಂತೆ. ಅಂದರೆ ‘ಆಧುನಿಕ ಶಿಕ್ಷಣ’ಪಡೆದ ಈ ಮಧ್ಯಮ ವರ್ಗದ ಪ್ರಜ್ಞೆ ‘ನಿರ್ವಸಾಹತೀಕರಣ’ಗೊಳ್ಳಲೇ ಇಲ್ಲ. ಬದಲಿಗೆ ಮತ್ತಷ್ಟು ಇಂಗ್ಲಿಷ್ ಮೋಹವನ್ನು ಹೆಚ್ಚಿಸಿಕೊಂಡು ನವ ವಸಾಹತುಶಾಹಿ ಪ್ರಭುಗಳಂತೆಯೇ ಯೋಚಿಸುತ್ತಿದೆ. ಅಂದರೆ ಇದು ತೋಳಗಳಂತೆಯೇ ಕುರಿಗಳೂ ಯೋಚಿಸುವ ಬಗೆ. ತೋಳಗಳನ್ನು ಮುಗ್ಧವಾಗಿ ನಂಬುವ ಕುರಿಗಳಂತೆ ಈ ವರ್ಗ ಪ್ರಭುತ್ವವನ್ನು ವಂಚಕವರ್ಗವನ್ನು ನಂಬುತ್ತಿದೆ. ತಮ್ಮ ನಂಬಿಕೆಯನ್ನು ಇತರರ ಮೇಲೂ ಹೇರುತ್ತಿದೆ. ಹಾಗೆಯೇ ಅಂತಹ ನಂಬಿಕೆಯೇ ತಮ್ಮ ಬಿಡುಗಡೆಯ ಮತ್ತು ನಿಜವಾದ ಅಭಿವೃದ್ಧಿಯ ದಾರಿ ಎಂದೂ ವಾದಿಸುವ ಅಕ್ಷರಸ್ಥ ವರ್ಗವಿದು.

ಹಾಗಾಗಿ ಇದಕ್ಕಿಂತ ಭಿನ್ನವಾದ ನೆಲೆಯಲ್ಲಿ ಯೋಚಿಸುವ ಮತ್ತು ಆಳುವ ವರ್ಗವನ್ನು ಮಣಿಸುವ ಶಕ್ತಿಯಿರುವ ಜನರ ಸಂಖ್ಯೆ ತುಂಬಾ ಕಡಿಮೆ. ಆದ್ದರಿಂದಲೇ ಪ್ರಭುತ್ವಗಳು ಸದಾ ಈ ಮಧ್ಯಮ ವರ್ಗವನ್ನೇ ಮೆಚ್ಚಿಸುವ ಓಲೈಸುವ ಕೆಲಸವನ್ನು ಮಾಡುತ್ತವೆ. ಭಿನ್ನ ಧ್ವನಿಗಳನ್ನು ದಮನಿಸುವ ಕೆಲಸವನ್ನು ಮಾಡುತ್ತವೆ. ಯಾವುದೇ ಸಮಾಜದಲ್ಲಿ ಬೆಳೆಯುವ ಮಧ್ಯಮ ವರ್ಗಗಳು ನೈಜ ಚಿಂತನೆಗಳಿಂದ ದೂರವಾಗಿ ಆಳುವ ವರ್ಗಗಳ ಚಿಂತನೆಗಳ ಜೊತೆಗೆ ಹೆಜ್ಜೆ ಹಾಕುವುದೇ ಇದಕ್ಕೆ ಕಾರಣ. ಅಂದರೆ ಪ್ರಭುತ್ವ ಇಲ್ಲವೇ ಆಳುವ ವರ್ಗದ ವಿರುದ್ಧ ವಿದ್ರೋಹಿಯಾಗಿ ಆಲೋಚಿಸದೇ ಹೋದಾಗ ಜನಪರ ಚಿಂತನೆಗಳು ಮಧ್ಯಮ ವರ್ಗಗಳಲ್ಲಿ ಇಲ್ಲವೇ ಸಮಾಜದಲ್ಲಿ ಕ್ಷೀಣವಾಗುತ್ತವೆ. ಕನ್ನಡಪರ ಚಿಂತನೆಗಳು ಕ್ಷೀಣಗೊಳ್ಳಲು ಕನ್ನಡ ಮಧ್ಯಮ ವರ್ಗವು ಪ್ರಭುತ್ವ ಮತ್ತು ಆಳುವ ವರ್ಗಗಳ ಜೊತೆಗೆ ಹೆಜ್ಜೆ ಹಾಕುತ್ತಿರುವುದೇ ಕಾರಣ. ಇದನ್ನು ಡಿ. ಆರ್. ಎನ್. ಮೂರೂವರೆ ದಶಕಗಳ ಹಿಂದೆಯೇ ಗ್ರಹಿಸಿ ‘ಆತ್ಮಹೀನ ವರ್ಗ’ದ ಕಲ್ಪನೆಯನ್ನು ಮುಂದಿಟ್ಟಿದ್ದಾರೆ.

ಡಿ. ಆರ್. ಎನ್. ಮುಂದುವರೆದು ಹೇಳುವಂತೆ, “ಸಮಾಜದಲ್ಲಿ ಪ್ರತಿಷ್ಠಿತ ವರ್ಗಗಳು ತಮ್ಮ ಪ್ರಾಬಲ್ಯ ಸಾಧಿಸುವ ಒಂದು ಮುಖ್ಯ ಮಾರ್ಗ ಎಂದರೆ, ಸಮಾಜದ ಪ್ರಗತಿ ಮಾರ್ಗದ ಬಗೆಗೆ ಒಂದು ಸರ್ವಸಮ್ಮತ ದಾರಿ ಮತ್ತು ಆದರ್ಶವನ್ನು ಇಡುವುದು. ಕೆಳಗಿನವರು ಆ ಒಂದೇ ದಾರಿ ಹಿಡಿಯಲು ಒಪ್ಪಿ ಓಡುತ್ತಾರೆ. ಆಟದ ನಿಯಮಗಳನ್ನು ಭಿನ್ನ ಭಿನ್ನ ವರ್ಗಗಳು ಪೂರ್ಣವಾಗಿ ಒಪ್ಪುತ್ತವೆ. ಆಟದಲ್ಲಿ ಸೋತವನು ಅಥವಾ ಹಿಂದುಳಿದವನು ಕೂಡಾ ತಾನೂ ಒಮ್ಮೆ ಅದನ್ನು ಗೆಲ್ಲಬಹುದು ಎಂದು ನಂಬಿ ಅದರಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಾನೆ. ಸಾಮಾಜಿಕ ಸಮ್ಮತಿ ಮತ್ತು ಪ್ರಾಬಲ್ಯಗಳ ಆಟದ ನಿಯಮ ಇದು. ತಾನು ಗೆಲ್ಲದೇ ಇರುವ ರೀತಿಯಲ್ಲಿ ಆ ಆಟದ ನಿಯಮವಿದೆ ಎಂದು ಸೋತವನು ತಿಳಿಯುವದೇ ಇಲ್ಲ.” (ಸಂಸ್ಕೃತಿ ಕಥನ, ಪು.95) ಇದು ಮೇಲೆ ಚರ್ಚಿಸಿದಂತೆ ಆಳುವ ವರ್ಗ ಮತ್ತು ಅದನ್ನು ಅನುಸರಿಸುವ ಆತ್ಮಹೀನ ಮಧ್ಯಮ ವರ್ಗ ಒಂದು ಅಭಿವೃದ್ಧಿಯ ಮಾದರಿಯನ್ನು ಮುಂದಿಡುತ್ತದೆ. ಅದನ್ನೇ ಇಡೀ ಸಮಾಜ ಒಪ್ಪಿ ಅನುಕರಿಸುವಂತೆ ಒತ್ತಾಯಿಸುತ್ತದೆ. ಅಂತಹ ಅಭಿವೃದ್ಧಿಯ ದಾರಿಯಲ್ಲಿ ಭಾಷೆಯೂ ಕೂಡ ಒಂದು ಪ್ರಬಲ ಸಾಧನವಾಗಿರುತ್ತದೆ. ಉದಾಹರಣೆಗೆ, ಇಂದಿನ ಆಳುವ ವರ್ಗದ ಅಭಿವೃದ್ಧಿಯ ಪರಿಕಲ್ಪನೆಯ ಭಾಗವಾಗಿಯೇ ಇಂಗ್ಲಿಷ್ ಮಾಧ್ಯಮದ ಮೋಹ ವಿಪರೀತವಾಗಿ ಬೆಳೆದಿರುವುದು. ಅದನ್ನು ಕಲಿತು ಸ್ವಾಧೀನಪಡಿಸಿಕೊಳ್ಳುವುದು ಅಭಿವೃದ್ಧಿಯ ಸಾಧನೆ ಎಂಬಂತೆ ಈಗಾಗಲೇ ಪ್ರಚುರಪಡಿಸಲಾಗಿದೆ. ಅದಿಲ್ಲದೆ ಆಧುನಿಕ ಕಾಲದಲ್ಲಿ ಬದುಕೇ ಸಾಧ್ಯವಿಲ್ಲ. ಜಾಗತಿಕ ಮಾರುಕಟ್ಟೆ, ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಹಿಂದುಳಿಯಬೇಕಾಗುತ್ತದೆ ಎಂಬ ಭಯವನ್ನು ಸಮಾಜದ ಮೇಲುಸ್ಥರದಿಂದ ಸಮಾಜದ ಕಟ್ಟಕಡೆಯ ಮಾನವರವರೆಗೂ ಆಳುವ ವರ್ಗಗಳು ವ್ಯವಸ್ಥಿತವಾಗಿ ಬಿತ್ತಿ ಬೆಳೆಸಿವೆ.

ಆದರೆ ಇದು ಬಹುತೇಕರಿಗೆ ಅರ್ಥವಾಗುವುದೇ ಇಲ್ಲ. ಇಂತಹ ಭೀತಿ ಬೆಳೆದಿರುವ ಸಮಾಜದಲ್ಲಿ, ಡಿ.ಆರ್.ಎನ್. ಹೇಳುವಂತೆ ಆಟದ ನಿಯಮಗಳನ್ನೇ ಹೇಳಿಕೊಡದೆ ಎಲ್ಲರನ್ನೂ ಸ್ಪರ್ಧೆಗೆ ಇಳಿಸುವುದು ಮಹಾವಂಚನೆ ಎಂದು ಅರಿಯುವುದಿಲ್ಲ. ಅಂದರೆ ಡಿ.ಆರ್.ಎನ್ ಅವರು ಭಾಷೆಯನ್ನು ಆಧರಿಸಿ ಆಳುವ ವರ್ಗಗಳು ಸಮಾಜದ ಕೆಳವರ್ಗವನ್ನು ವಂಚಿಸುತ್ತಿರುವುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಹೀಗೆ ತೋರಿಸಿಕೊಡುವ ಹಂತದಲ್ಲಿ ಭಾಷಿಕ ಬಿಕ್ಕಟ್ಟನ್ನು ವಿವರಿಸಿಕೊಳ್ಳಲು ನಿರ್ದಿಷ್ಟ ವೈಚಾರಿಕ ತಳಹದಿಯ ಮೇಲೆ ಮುಂದುವರೆದಿರುವುದನ್ನು ಗಮನಿಸಬಹುದು. ಮುಖ್ಯವಾಗಿ ಭಾಷಿಕ ಬಿಕ್ಕಟ್ಟಿನಲ್ಲಿ ಆಳುವ ಮತ್ತು ಮೇಲು ವರ್ಗಗಳ ಹಿತಾಸಕ್ತಿ ಅಡಗಿರುವುದನ್ನು ಗುರುತಿಸಲು ಯತ್ನಿಸಿದ್ದಾರೆ. ಈ ವರ್ಗ ಹಿತಾಸಕ್ತಿಯೇ ಭಾಷಿಕ ಬಿಕ್ಕಟ್ಟನ್ನು ಸೃಷ್ಟಿಸಿ ಜನರನ್ನು ಗೊಂದಲಗೊಳಿಸಿ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿರುವುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಈ ವರ್ಗ ಇಂಗ್ಲಿಶ್ ಒಂದು ಆದರ್ಶ; ಅದನ್ನು ಕಲಿಯುವುದೇ ಶಿಕ್ಷಣ. ಅದನ್ನು ಗಳಿಸಿಕೊಂಡರೆ ಮಾತ್ರ ಸಾಮಾಜಿಕವಾಗಿ ಮುಂದುವರೆಯಲು ಸಾಧ್ಯ ಎಂಬ ವಾತಾವರಣ ಸೃಷ್ಟಿಸಿದೆ. ಆಳುವ ವರ್ಗಗಳು ರೂಪಿಸುವ ವಂಚನೆಯ ಜಾಲದಲ್ಲಿ ಇಂಗ್ಲಿಷ್ ಆಕಾಂಕ್ಷಿಗಳು ಬೀಳುವ ಅಪಾಯವನ್ನು ಗುರುತಿಸಿದ್ದಾರೆ. ಹಾಗೆಯೇ ಮೇಲ್ಜಾತಿ ಮತ್ತು ಮೇಲ್ವರ್ಗಗಳ ವಂಚನೆಯನ್ನು ಬಹಿರಂಗಗೊಳಿಸಿದ್ದಾರೆ. ಇಂದು ದಲಿತರು, ಹಿಂದುಳಿದ ವರ್ಗಗಳಲ್ಲಿಯೂ ಇಂಗ್ಲಿಶಿನ ಬಗೆಗೆ ವಿಪರೀತ ಆಕರ್ಷಣೆ ಮೂಡಿದೆ. ಆದರೆ ಇದನ್ನು ಸ್ವಾಧೀನಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ; ಮತ್ತು ಅದು ಒಂದು ವೇಳೆ ಸ್ವಾಧೀನಪಡಿಸಿಕೊಂಡರೂ ಎಲ್ಲ ಸಮಸ್ಯೆಗಳು ಅದರೊಂದರಿಂದಲೇ ಬಗೆಹರಿಯುವುದಿಲ್ಲ. ಇಂಗ್ಲಿಶನ್ನು ಪಡೆದುಕೊಳ್ಳುವ ಕ್ರಿಯೆ ಎರಡು ವರ್ಗಗಳ ನಡುವಿನ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಕೆಳವರ್ಗಗಳು ಅದನ್ನು ಗಳಿಸಿಕೊಂಡು ಮೇಲೆ ಚಲಿಸಲಾಗದಂತೆಯೇ ತಡೆಯುವ ಶಕ್ತಿಗಳು ಕ್ರಿಯಾಶೀಲವಾಗಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ಇದೇ ವರ್ಗಗಳು ಇಂದು ಇಂಗ್ಲಿಷನ್ನು ಒಂದು ಸರಕನ್ನಾಗಿಸಿ ಮಾರುತ್ತಿವೆ. ಕೆಳವರ್ಗಗಳು ಅದನ್ನು ಕಲಿಯಬೇಕಾದ ವಿಪರೀತ ಹಣಕೊಟ್ಟು ಅದನ್ನು ಖರೀದಿಸಬೇಕಾಗಿದೆ. ಅದೂ ಕೂಡ ಉದ್ಯಮವಾಗಿ ಬದಲಾಗಿದೆ. ಇದೂ ಮತ್ತೂ ಅಪಾಯಕಾರಿಯಾದುದು. ಈ ಎಲ್ಲ ಅಪಾಯಗಳನ್ನು ಡಿ. ಆರ್. ಎನ್. ತಮ್ಮ ಬರೆಹಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಡಿ. ಆರ್. ಎನ್. ಕನ್ನಡ ನುಡಿಯ ಬಗೆ ಮಂಡಿಸಿರುವ ವಿಚಾರಗಳು ಇಂದಿಗೂ ಪ್ರಸ್ತುತ.

ಅಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಡಿ.ಆರ್.ಎನ್. ಹೇಳುವಂತೆ ಇಂಗ್ಲಿಶನ್ನು ಒಂದು ಆದರ್ಶವೆಂದು ಬಿಂಬಿಸಿರುವುದೇ ಮೇಲ್ಜಾತಿ ಮತ್ತು ಮೇಲ್ವರ್ಗಗಳು. ಅವು ತಮ್ಮ ಸಾಂಸ್ಕೃತಿಕ ಯಜಮಾನಿಕೆಯನ್ನು, ಸಂಸ್ಕೃತಿಯನ್ನು ಶ್ರೇಷ್ಠವೆಂದು ಬಿಂಬಿಸಿಕೊಳ್ಳಲು ಹಾಗೂ ಮಾರುಕಟ್ಟೆಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಇದನ್ನು ಮಾಡಿವೆ. ಅಲ್ಲದೆ ಶಿಕ್ಷಣ ಖಾಸಗಿಯವರ ತೆಕ್ಕೆಗೆ ಬಿದ್ದ ನಂತರ ಅದನ್ನು ಇನ್ನಷ್ಟು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಹೀಗೆ ಮಾಡುವುದರ ಹಿಂದೆ ಖಾಸಗೀ ಶಿಕ್ಷಣ ಸಂಸ್ಥೆಗಳ ದುಷ್ಟ ಲಾಭಕೋರತನವಿದೆ. ಶಿಕ್ಷಣ ಮತ್ತು ಜ್ಞಾನಕ್ಕಿಂತ ಪ್ರಧಾನವಾಗಿ ಇಂಗ್ಲಿಶನ್ನೇ ಜ್ಞಾನವೆಂದು ಬಿಂಬಿಸಲಾಗಿದೆ. ಅದಕ್ಕಾಗಿಯೇ ಇಂಗ್ಲಿಶ್ ಮಾಧ್ಯಮ ಶಾಲೆಗಳಿಗೆ ಎಲ್ಲಿಲ್ಲದ ಬೇಡಿಕೆ. ಅಲ್ಲಿ ಜ್ಞಾನವನ್ನು ಕಲಿಸುವುದಕ್ಕಿಂತ ಅರೆಬರೆ ಇಂಗ್ಲಿಶನ್ನು ಗಿಳಿಪಾಠದಂತೆ ಹೇಳಿಕೊಡುವುದೇ ಪ್ರಧಾನವಾಗಿದೆ. ಡಿ.ಆರ್. ಎನ್. ಅವರು ಮುಂದುವರೆದು ಹೇಳುವಂತೆ, “ಇಂಗ್ಲಿಶನ್ನು ಸಾಂಸ್ಕೃತಿಕ ವಿನಿಮಯದ ಮಾಧ್ಯಮವನ್ನಾಗಿ ಬಳಸುವುದು ತುಂಬ ಜಟಿಲವಾದ ಸಾಂಸ್ಕೃತಿಕ ಯುದ್ಧದ ಒಂದು ತಂತ್ರ. ಆರ್ಥಿಕ ಜಾಗತೀಕರಣದ ವ್ಯಾಪಾರೀ ಮಾಧ್ಯಮವಾಗಿ ಇಂಗ್ಲಿಶ್ ಬೆಳೆದಷ್ಟು ಅದು ಉಳಿದ ಸಂಸ್ಕೃತಿಗಳ ಬಗೆಗೆ ಮಾರಕ ಎಂಬ ಮಾತಿನಲ್ಲಿ ಸತ್ಯವಿದೆ. ವ್ಯಾಪಾರೀ ಸಂಪರ್ಕ ಭಾಷೆಯಾಗಿ ಮಾತ್ರ ಇಂಗ್ಲಿಶ್ ಬಳಕೆಯಾದರೂ, ಅದು ತನ್ನೆಲ್ಲ ಅಂತರ್ಗತವಾಗಿ ಉಳಿದ ಸಂಸ್ಕೃತಿಗಳ ಬಗೆಗೆ ಹೀನಾಯವಾದ ಧೋರಣೆಯನ್ನು ಹೊಂದಿರುತ್ತದೆ. ಕರ್ನಾಟಕದ ಮಕ್ಕಳು ಇಂಗ್ಲಿಶಿನಲ್ಲಿ ಮಹಾಭಾರತ ಓದಲು ಸಿದ್ಧರಿರುತ್ತಾರೆ. ಆದರೆ, ಕನ್ನಡದಲ್ಲಿ ವಚನಭಾರತವನ್ನು ಓದದೆ ಓಡಿಹೋಗುತ್ತಾರೆ. ಇಂಗ್ಲಿಶಿನಲ್ಲಿ ಬಂದದ್ದೇ ತೀರ್ಥ.” (ಸಂಸ್ಕೃತಿ ಕಥನ, ಪು.90) ಎನ್ನುತ್ತಾರೆ. ಅಂದರೆ ಹೆಚ್ಚಿದ ಇಂಗ್ಲಿಷ್ ಮೋಹ ಸಾಂಸ್ಕೃತಿಕವಾಗಿ ಉಂಟುಮಾಡುತ್ತಿರುವ ಕೆಟ್ಟ ಪರಿಣಾಮವನ್ನು ಕುರಿತು ಇಲ್ಲಿ ಚರ್ಚಿಸಿದ್ದಾರೆ. ಇಂಗ್ಲಿಶಿನ ಬಗೆಗಿನ ಭ್ರಮೆ ಮತ್ತು ಅದನ್ನು ಪಡೆದುಕೊಂಡ ವರ್ಗ ಸಾಂಸ್ಕೃತಿಕವಾಗಿ ಅನಾಥವಾಗುವ ಇಲ್ಲವೇ ಈ ನಾಡಿನ ಸಂಸ್ಕೃತಿಯಿಂದ ದೂರವಾಗಿ ‘ಪ್ರೇತ’ಗಳಾಗಿ ಉಳಿಯವ ಸಂದರ್ಭ ಸೃಷ್ಟಿಯಾಗುತ್ತದೆ. ಅಧಿಕಾರ ಕೇಂದ್ರಗಳ ಒತ್ತಡದಿಂದ ಸೃಷ್ಟಿಯಾಗುವ ಆಕರ್ಷಣೆ ಅಂತಿಮವಾಗಿ ಜನರ ಸಾಂಸ್ಕೃತಿಕ ಚೈತನ್ಯದ ವಿನಾಶದಲ್ಲಿ ಕೊನೆಗೊಳ್ಳುತ್ತದೆ.

ಹೀಗೆ ಡಿ. ಆರ್. ನಾಗರಾಜರು ಕನ್ನಡನುಡಿ ಚಿಂತನೆಯನ್ನು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕವಾದ ವಿಸ್ತಾರ ತಾತ್ವಿಕ ಚೌಕಟ್ಟಿನಲ್ಲಿ ಚರ್ಚಿಸಿರುವುದನ್ನು ಕಾಣಬಹುದು. ಗೋಕಾಕ್ ಚಳವಳಿ ನಡೆದ ಹೊತ್ತಿನಲ್ಲಿ ಕನ್ನಡ ನುಡಿಯ ಸವಾಲುಗಳನ್ನು ಭಾವುಕವಾಗಿ ವಿವರಿಸಿಕೊಳ್ಳುವ ಕೆಲಸವನ್ನು ಕೆಲವರು ಮಾಡುತ್ತಿದ್ದಾಗ ಡಿ.ಆರ್.ಎನ್. ಅದನ್ನು ರಾಜಕೀಯ ಮತ್ತು ಆರ್ಥಿಕ ತಳಹದಿಯ ಮೇಲೆ ವಿವರಿಸಿಕೊಳ್ಳುವ ಪ್ರಯತ್ನ ಮಾಡಿದರು. ಸಮಾಜದ ಅತ್ಯಂತ ಕೆಳಸ್ಥರದಲ್ಲಿದ್ದ ಜನರ ನೆಲೆಯಿಂದ ಕನ್ನಡದ ಬಿಕ್ಕಟ್ಟನ್ನು ವಿವರಿಸಲು ಯತ್ನಿಸಿ ಭಾಷಿಕ ಬಿಕ್ಕಟ್ಟಿಗೆ ವರ್ಗ ಸಂಘರ್ಷದ ಆಯಾಮ ಇರುವುದನ್ನು ಗುರುತಿಸಿದ್ದರು. ಅಲ್ಲದೆ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪಠ್ಯಗಳ ಮೂಲಕ ಕನ್ನಡದ ಅಸ್ಮಿತೆಯನ್ನು ‘ರಾಷ್ಟ್ರೀಯತೆ’ ಪರಿಕಲ್ಪನೆಯ ಮೂಲಕ ವಿವರಿಸುವ ಕೆಲಸ ಮಾಡಿದರು. ಆಲೂರು ವೆಂಕಟರಾವ್ ಅವರ ‘ಕರ್ನಾಟಕತ್ವದ ವಿಕಾಸ’ಮತ್ತು ಚಿದಾನಂದಮೂರ್ತಿಯವರ ‘ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ’ಕೃತಿಗಳ ತೌಲನಿಕ ಅಧ್ಯಯನದ ಮೂಲಕ ಅದನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಆ ಮೂಲಕ ಕನ್ನಡ ಪ್ರಜ್ಞೆಯನ್ನು ರಾಷ್ಟ್ರೀಯತೆಯ ಪರಿಕಲ್ಪನೆಯ ನೆಲೆಯಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ‘ಕನ್ನಡ ಸಂವರ್ಧನೆ’ಎಂಬ ಮತ್ತೊಂದು ಲೇಖನದಲ್ಲಿ ಕನ್ನಡ ‘ಭಾಷಿಕ ಕುಲ’ಎದುರಿಸುತ್ತಿರುವ ಸಮಸ್ಯೆಗಳನ್ನು, ನವ ವಸಾಹತುಶಾಹಿಯ ಆಕ್ರಮಣದಿಂದ ಪಾರಾಗಲು ಕೆಲವು ಉಪಾಯಗಳನ್ನು ಚರ್ಚಿಸಿದ್ದಾರೆ. ಮತ್ತೆ ‘ಮೆಕಾಲೆಯ ಮಕ್ಕಳು’, ‘ಇಂಗ್ಲಿಶಿನ ಭೀತಿ,’ ಮತ್ತು ‘ಕನ್ನಡ-ಇಂಗ್ಲಿಶ್ಗಳ ಕಾಳಗ’ ಎಂಬ ಲೇಖನಗಳಲ್ಲಿ ಇಂಗ್ಲಿಷ್ ರೂಪಿಸಿರುವ ಇಕ್ಕಟ್ಟಿನ ಪರಿಸ್ಥಿತಿ ಮತ್ತು ಅದರಲ್ಲಿ ಇಂಗ್ಲಿಷಿನ ಅನಿವಾರ್ಯ ಆಯ್ಕೆಯನ್ನು ವಿಶ್ಲೇಷಿಸಿದ್ದಾರೆ. ಮೆಕಾಲೆಯ ಮಕ್ಕಳು ಲೇಖನದಲ್ಲಿ ಬ್ರಿಟಿಶ್ ವಸಾಹತುಶಾಹಿಯು ನಡೆಸಿದ ಸಾಂಸ್ಕೃತಿಕ ಮತ್ತು ಭಾಷಿಕ ದಾಳಿಯನ್ನು ಚರ್ಚಿಸಿದ್ದಾರೆ. ‘ಇಂಗ್ಲಿಶಿನ ಭೀತಿ’ ಎನ್ನುವ ಲೇಖನದಲ್ಲಿ ಇಂಗ್ಲಿಶ್ ವ್ಯಾಪಾರಿ ಭಾಷೆಯಾಗಿ ಬೆಳೆಯುತ್ತಿರುವುದರ ಸಮಸ್ಯೆಗಳನ್ನು ಚರ್ಚಿಸಿದ್ದಾರೆ.

ಅಂದರೆ ಕನ್ನಡ-ಇಂಗ್ಲಿಷ್ ದ್ವಿಭಾಷಿಕ ಸಂದರ್ಭದಲ್ಲಿ ಎದುರಾಗಿರುವ ಬಿಕ್ಕಟ್ಟುಗಳು; ಮುಖ್ಯವಾಗಿ ಕನ್ನಡವು ಶೈಕ್ಷಣಿಕವಾಗಿ, ರಾಜಕೀಯವಾಗಿ ಸಾಂಸ್ಕೃತಿಕವಾಗಿ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ವಿವಿಧ ನೆಲೆಗಳಲ್ಲಿ ವಿವರಿಸಲು ಯತ್ನಿಸಿದ್ದಾರೆ. ಕನ್ನಡ ಸಂದರ್ಭದಲ್ಲಿ ಅವರು ಮಂಡಿಸಲು ಬಯಸಿದ್ದ ‘ಸಂಸ್ಕೃತಿ ಮೀಮಾಂಸೆ’ಯ ಭಾಗವೇ ಆಗಿದ್ದ ಕನ್ನಡ ನುಡಿಯ ಚಿಂತನೆಯ ಬಗೆಗೆ ವಿಶೇಷ ಆಸ್ಥೆಯಿಂದ ಮತ್ತೆ ಮತ್ತೆ ಚಿಂತಿಸಿದ್ದಾರೆ. ಹೀಗೆ ಚಿಂತಿಸುತ್ತ ಬದಲಾದ ಕಾಲಕ್ಕೆ ಕನ್ನಡವನ್ನು ಕರ್ನಾಟಕದ ಪರಂಪರೆಗಳನ್ನು ಸಮಾಜವಾದಿ ಚಿಂತನೆಗಳ ನೆಲೆಯಲ್ಲಿ ಕಟ್ಟಿಕೊಳ್ಳಬೇಕಿರುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ವೈದಿಕ ನೆಲೆಗೆ ಬದಲಾಗಿ ಅಲ್ಲಮ, ಬಸವಣ್ಣ, ಶಿಶುನಾಳ ಷರೀಫ ಮುಂತಾದವರ ಅವೈದಿಕ ವಿಚಾರಧಾರೆಗಳ ಆಧಾರದ ಮೇಲೆ ಕರ್ನಾಟಕದ ಜ್ಞಾನಪರಂಪರೆಗಳನ್ನು ಪುನರ್ ನಿರ್ಮಾಣ ಮಾಡಬೇಕಿರುವುದನ್ನು ಸೂಚಿಸಿದ್ದಾರೆ. ಅಂದರೆ ಕನ್ನಡ ಎನ್ನುವುದು ಕೇವಲ ನುಡಿಯಾಗದೆ ಅದೊಂದು ‘ಜ್ಞಾನ ಪರಂಪರೆ’ಎಂಬುದನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ. ಹಾಗೆ ಮಾಡುವಾಗ ಏಕರೂಪಿ ಸಂಸ್ಕೃತಿ, ಚಿಂತನೆ, ಭಾಷೆಗಳನ್ನು ನಿರಾಕರಿಸುತ್ತ ಬಹುತ್ವವನ್ನು ಪ್ರತಿಪಾದಿಸಿದ್ದಾರೆ. ವಿಶೇಷವಾಗಿ ಅವೈದಿಕ ಮೂಲದ ಜ್ಞಾನಪರಂಪರೆಗಳನ್ನು ಮರುಉತ್ಖನನ ಮಾಡುವ ಮೂಲಕ ಹೊಸ ಜ್ಞಾನಮೀಮಾಂಸೆಯನ್ನು ಕಟ್ಟಿಕೊಡಲು ಯತ್ನಿಸಿದ್ದರು. ಅಂದರೆ ನಮ್ಮ ಸಮಾಜದ ಜನರ ವಿಸ್ಮೃತಿಯಲ್ಲಿ ಹೂತು ಹೋಗಿರುವ ಜ್ಞಾನಮೂಲಗಳನ್ನು ಹುಡುಕಿಕೊಳ್ಳಬೇಕಾದ ಅಗತ್ಯವನ್ನು ಮಂಡಿಸಿದ್ದಾರೆ. ಮೆಕಾಲೆ ಸಂತತಿಯ ದುಷ್ಟತನ ಮತ್ತು ಬರಡುತನವನ್ನು ವಿವರಿಸಿದ್ದಾರೆ.

ಹೀಗೆ ಮಾಡುವ ಹೊತ್ತಿನಲ್ಲಿ ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ‘ಉಪರಾಷ್ಟ್ರೀಯ’ಎಂದು ಕರೆಯುವ ಪ್ರಯತ್ನ ಮಾಡಿದ್ದಾರೆ. ಇದು ಕೊಂಚ ಅಪವ್ಯಾಖ್ಯಾನ ಇಲ್ಲವೇ ಅಖಿಲ ಭಾರತೀಯ ಎನ್ನುವ ಒಂದು ಬೃಹತ್ ಕಥನ ಇಲ್ಲವೇ ಮಹಾಕಥನಗಳ ಜೊತೆಗೆ ಒಂದು ಬಗೆಯ ಹೊಂದಾಣಿಕೆಯ ರಾಜಕಾರಣ ಮಾಡಿದ್ದಾರೆ ಎನ್ನಿಸುತ್ತದೆ. ಕುವೆಂಪು ಕೂಡ ಇದನ್ನು ಮಾಡಿದ್ದಾರೆ. ಇಲ್ಲಿನ ಸಮಸ್ಯೆ ಎಂದರೆ ಭಾರತೀಯತೆ ಇಲ್ಲವೇ ಭಾರತ ರಾಷ್ಟ್ರೀಯತೆ ಎನ್ನುವುದೇ ಒಂದು ಕಲ್ಪಿತ ಕಥೆ. ‘ಭಾರತ’ಎನ್ನುವುದು ಒಂದು ಒಕ್ಕೂಟ ರಾಷ್ಟ್ರಗಳ ವ್ಯವಸ್ಥೆಯಾಗಿದ್ದು ಅದರಲ್ಲಿ ಹಲವು ರಾಷ್ಟ್ರೀಯತೆಗಳು ಸೇರಿವೆ ಎಂಬುದು ನಿಜ. ಈಚೆಗೆ ಇಂತಹ ಒಕ್ಕೂಟ ವ್ಯವಸ್ಥೆಯ ಕಲ್ಪನೆಯನ್ನೇ ಮರೆಮಾಚಿ ಭಾರತವನ್ನು ಏಕರೂಪಿಯಾದ ಕುಲುಮೆಯಲ್ಲಿ ಕನ್ನಡದಂತಹ ಇತರೆ ರಾಷ್ಟ್ರೀಯತೆಗಳನ್ನು ಕರಗಿಸುವ ಬಲಾತ್ಕಾರದ ಕೆಲಸ ಮಾಡಲಾಗುತ್ತಿದೆ. ಈ ಕೆಲಸವನ್ನು ಸ್ವತಂತ್ರ ಬಂದಾಗಿನಿಂದಲೂ ಮಾಡಿಕೊಂಡೇ ಬರಲಾಗಿದೆ. ಇಂತಹ ಕುಲುಮೆಯಲ್ಲಿ ಕನ್ನಡದಂತಹ ಹಲವು ಅಸ್ಮಿತೆಗಳು ಅವನತಿಯ ಹಾದಿಯಲ್ಲಿ ಸಾಗುತ್ತಿವೆ. ಇಂತಹ ಪ್ರಯತ್ನಗಳಿಗೆ ಉಪರಾಷ್ಟ್ರೀಯತೆ ಎಂಬ ವಿವರಣೆಗಳು ಪ್ರಧಾನ ರಾಷ್ಟ್ರೀಯತೆ ಎಂಬುದನ್ನು ತಾತ್ವಿಕವಾಗಿ ಮಾನ್ಯ ಮಾಡಿದಂತಾಗುತ್ತದೆ. ಇದು ಡಿ.ಆರ್.ಎನ್. ಅವರ ಚಿಂತನೆಗಳ ಒಂದು ಮುಖ್ಯ ಮಿತಿ. ಈ ಬಗೆಗೆ ಹೆಚ್ಚಿನ ಚರ್ಚೆಯ ಅಗತ್ಯವಿದೆ.

  • ಡಾ.ರಂಗನಾಥ ಕಂಟನಕುಂಟೆ, ಅಧ್ಯಾಪಕರು

Leave a Reply