ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಕೌನ್ಸಿಲ್ ಗೆ ಇಬ್ಬರು ಭಾರತೀಯ ಅಮೆರಿಕನ್ನರನ್ನು ನೇಮಿಸುವ ಆಲೋಚನೆ ವ್ಯಕ್ತಪಡಿಸಿದ್ದಾರೆ. ಮನು ಆಸ್ತಾನ ಹಾಗೂ ಮಧು ಬೆರಿವಾಲ್ ಅವರನ್ನು ಈ ಉನ್ನತ ಹುದ್ದೆಗೆ ನೇಮಿಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಪರಿಷತ್, ದೇಶದ ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಸುಧಾರಣೆ ನಿಟ್ಟಿನಲ್ಲಿ ದೈಹಿಕ ಮತ್ತು ಸೈಬರ್ ಅಪಾಯಗಳನ್ನು ನಿಯಂತ್ರಿಸುವ ಕುರಿತು ಶ್ವೇತ ಭವನಕ್ಕೆ ಸಲಹೆ ನೀಡುತ್ತದೆ.
ಎನ್ಐಎಸಿ ಗೆ ಘೋಷಣೆಯಾಗಿರುವ 26 ಗಣ್ಯರ ಪೈಕಿ, ಬ್ಯಾಂಕಿಂಗ್, ವಿದ್ಯುತ್, ಜಲ, ಅಣೆಕಟ್ಟು, ರಕ್ಷಣೆ, ಸಂವಹನ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆಗಳು, ಆಹಾರ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವವರಾಗಿದ್ದಾರೆ.
ಇವರ ಪೈಕಿ ಆಸ್ತಾನ ಉತ್ತರ ಅಮೆರಿಕಾದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿ ಅತಿ ದೊಡ್ಡ ಪವರ್ ಗ್ರಿಡ್ ನ ಸಿಇಒ, ಅಧ್ಯಕ್ಷರಾಗಿದ್ದಾರೆ. ಇವರ ನಾಯಕತ್ವದಲ್ಲಿ ಪಿಜೆಎಂ ಗ್ರಿಡ್ ಯಶಸ್ವಿಯಾಗಿದ್ದು, ವಿಶ್ವಾಸಾರ್ಹ ವಿದ್ಯುತ್ ಸೇವೆಯನ್ನು ಒದಗಿಸಿದೆ ಎಂದು ಶ್ವೇತ ಭವನ ಅಭಿಪ್ರಾಯಪಟ್ಟಿದೆ.




