ನಿರಂತರವಾಗಿ ವಿನೂತನ ಸಂಶೋಧನಾ ಮಾರ್ಗಗಳಿಗೆ ಶ್ರಮಿಸುತ್ತಿರುವ ಐಯುಎಸಿ

9 months ago

ಬಳ್ಳಾರಿ: ಸುರಕ್ಷತೆ ಭದ್ರತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೌಶಲ್ಯಗಳನ್ನು ಹೆಚ್ಚಿಸಲು ಐಯುಎಸಿ (ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ) ಯು ನಿರಂತರವಾಗಿ ವಿನೂತನ ಸಂಶೋಧನಾ ಮಾರ್ಗಗಳಿಗೆ ಶ್ರಮಿಸುತ್ತಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಟಿ ಲಗಾರೆ ಹೇಳಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ “ಐಯುಎಸಿ ಪರಿಚಯ ಕಾರ್ಯಕ್ರಮ”ದಲ್ಲಿ ಭಾಗವಹಿಸಿ ಮಾತನಾಡಿದರು.

ಐಯುಎಸಿನಲ್ಲಿರುವ ಪೆಲ್ಲೆಟ್ರಾನ್ ವೇಗವರ್ಧಕ ಪ್ರಯೋಗಾಲಯ 1991ರಿಂದ ಕಾರ್ಯನಿರ್ವಹಿಸುತ್ತಿದೆ. ನಂತರದ ವರ್ಷಗಳಲ್ಲಿ ಇದು ಭಾರತ ಮತ್ತು ವಿದೇಶಗಳಿಂದ 400ಕ್ಕೂ ಹೆಚ್ಚು ಬಳಕೆದಾರರಿಗೆ ಅಯಾನು ಕಿರಣಗಳನ್ನು ಒದಗಿಸುತ್ತಿದೆ ಎಂದರು.

ವೇಗವರ್ಧಕ ಭೌತಶಾಸ್ತ್ರ ಕಣ ವೇಗವರ್ಧಕಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸಿದ ಭೌತಶಾಸ್ತ್ರದ ವಿಶೇಷ ಕ್ಷೇತ್ರವಾಗಿದ್ದು, ಇದರ ಜೊತೆಯಲ್ಲೆ ಪರಮಾಣು ಭೌತಶಾಸ್ತ್ರವು ಪರಮಾಣು ನ್ಯೂಕ್ಲಿಯರ್ಸ್ಗಳ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮೂಲಭೂತ ಶಕ್ತಿಗಳು ಮತ್ತು ಅವುಗಳಿಗೆ ಒಳಗಾಗುವ ಪ್ರತಿಕ್ರಿಯೆಗಳು, ವಿಕಿರಣಶೀಲ ಕೊಳೆತ, ವಿದಳನ ಮತ್ತು ಸಮ್ಮಿಳನಗಳನ್ನು ನೀಡುತ್ತವೆ. ಇವುಗಳ ಹೆಚ್ಚಿನ ಅಧ್ಯಯನಕ್ಕೆ ಹಾಗೂ ಸಂಶೋಧನೆಗೆ ಐಯುಎಸಿ ಕೇಂದ್ರ ವೇದಿಕೆಯಾಗಿದೆ ಎಂದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನದ ಎಲ್ಲ ಕ್ಷೇತ್ರವು ಭೌತಶಾಸ್ತ್ರದ ಮೇಲೆ ಅವಲಂಬನೆಯಾಗಿದೆ. ಕಲ್ಯಾಣ-ಕರ್ನಾಟಕ ಭಾಗದಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ವಿವಿಯಲ್ಲಿ ನಿರ್ಮಿಸಲಾಗುವುದು. ಯುವ ಸಂಶೋಧಕರು ಐಯುಎಸಿ ಕೇಂದ್ರದ ಪ್ರಯೋಜನ ಪಡೆಯಬೇಕೆಂದು ಕೋರಿದರು.

ನವದೆಹಲಿಯ ಐಯುಎಸಿ ವಿಜ್ಞಾನಿ ಹಾಗೂ ಪ್ರೋಗ್ರಾಂ ಲೀಡರ್ ಡಾ. ಫೌರನ ಸಿಂಗ್ ಮಾತನಾಡಿ, ವೇಗವರ್ಧಕ ಮಾಸ್ ಸ್ಪೆಕ್ಟ್ರೋಮೆಟ್ರಿ ಮತ್ತು ಭೂಕಾಲಗಣನ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಮೊದಲನೆ ಕೇಂದ್ರವಾಗಿ ಐಯುಎಸಿ ಕಾರ್ಯನಿರ್ವವಹಿಸುತ್ತಿದೆ. ಈ ಕೇಂದ್ರದ ಪ್ರಯೋಜನ ಪಡೆಯಲು ಯುವ ಸಂಶೋಧಕರು ಹೊಸ ಸಂಶೋಧನೆಗಳೊಂದಿಗೆ ಬರಬೇಕು ಎಂದು ಕರೆ ನೀಡಿದರು.

ಐಯುಎಸಿ ಕೇಂದ್ರದ ವಿಜ್ಞಾನಿ ಹಾಗೂ ಕೇಂದ್ರದ ಸಂಚಾಲಕರಾದ ರಾಜೀವ್ ಮೆಹ್ತಾ ಮಾತನಾಡಿ, ಅಂತರ್-ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ ಅತ್ಯಾಧುನಿಕ ಸಂಶೋಧನೆ ನಡೆಸಲು ಅಗತ್ಯವಿರುವ ಆಧುನಿಕ ಉಪಕರಣಗಳೊಂದಿಗೆ ವಿಜ್ಞಾನ ಸಮುದಾಯಕ್ಕೆ ಅನುಕೂಲವಾಗುವಂತೆ ನಿರ್ಮಿತವಾಗಿದೆ. ಅಲ್ಲದೇ, ಕೇಂದ್ರವು 400 ಅಂಗ ಸಂಸ್ಥೆಗಳನ್ನು, 1200 ಸಂಶೋಧನಾ ವಿದ್ಯಾರ್ಥಿಗಳನ್ನು ಹೊಂದಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎ ಪಿ ಜ್ಞಾನಪ್ರಕಾಶ ಮಾತನಾಡಿ, ಉನ್ನತ ಮಟ್ಟದ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಐಯುಎಸಿ ಹೊಂದಿದೆ. ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿನ ಭೌತಶಾಸ್ತ್ರ ವಿಭಾಗವು ಹಲವು ವೈವಿಧ್ಯತೆಗಳೊಂದಿಗೆ ಕೂಡಿದ್ದು, ರಾಜ್ಯದಲ್ಲಿನ ಉಳಿದ ವಿವಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು.

ವಿವಿಧ ರಾಜ್ಯಗಳ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ ಎನ್.ಎಂ.ಸಾಲಿ, ವಿವಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ತಿಪ್ಪೇರುದ್ರಪ್ಪ ಜೆ, ಡಾ.ಕೊಟ್ರೇಶ್ ಎಂ.ಜಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. 

Leave a Reply