ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ರಾಜಪ್ಪ ದಳವಾಯಿ ಆಯ್ಕೆ

4 years ago

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.28-29ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ, ನಾಟಕಕಾರ, ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಸಮ್ಮೇಳನ ಸಿದ್ದರಾಮೇಶ್ವರ ಸಮುದಾಯ ಭವನ, ಬೀರೂರು ರಸ್ತೆ, ಅಜ್ಜಂಪುರದಲ್ಲಿ ನಡೆಯಲಿದೆ. ಜಿಲ್ಲೆಯ ಖ್ಯಾತ ಸಾಹಿತಿ ಅಜ್ಜಂಪುರ ತಾಲೂಕು ಶಿವನಿ ಹೋಬಳಿಯ ಅನುವನಹಳ್ಳಿಯ ಖ್ಯಾತ ಸಾಹಿತಿ ಡಾ.ರಾಜಪ್ಪ ದಳವಾಯಿ ಅವರನ್ನು ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಮಾಹಿತಿ ನೀಡಿದರು.

ಸಾಹಿತಿ ಡಾ.ರಾಜಪ್ಪ ದಳವಾಯಿ ಅವರು ಬೆಂಗಳೂರು ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಬೆಳಗಾವಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಕತೆ, ಕವಿತೆ, ವಿಮರ್ಶೆ, ಸಂಶೋಧನೆ, ಸಂಪಾದನೆ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಡಜನ್ ದಳವಾಯಿ ಎಂದೇ ಖ್ಯಾತರಾದ ಇವರು ಏಕಕಾಲಕ್ಕೆ 12 ಕೃತಿಗಳನ್ನು ಬಿಡುಗಡೆ ಮಾಡಿದ್ದರು. ಅನಂತರ ದಳವಾಯಿ ಡಜನ್ ನಾಟಕಗಳು ಕೃತಿ ಬಿಡುಗಡೆಯಾಗಿತ್ತು. ರಂಗಭೂಮಿಯಲ್ಲಿ ನಟ, ನಿರ್ದೇಶಕ, ನಾಟಕಕಾರಾಗಿ ಅವರು ಗುರುತಿಸಿಕೊಂಡಿದ್ದಾರೆ. ಕುಲಂ, ಸುಯೋಧನ, ಡೋಲಿ, ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ, ಒಂದು ಬೊಗಸೆ ನೀರು, ಪ್ರೀತಿಯ ಹುಡುಕುತ್ತಾ, ಜೇಡರ ದಾಸೀಮಯ್ಯ, ದಾರಾಶಿಕೋ, ಭಾಗ್ಯದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್, ಮುಖ್ಯಮಂತ್ರಿ ಅರಸು ಮತ್ತು ಮಠದೊಳಗೊಣ ಬೆಕ್ಕು ಮೊದಲಾದ ನಾಟಕಗಳು ಪ್ರಶಂಸೆಗೆ ಪಾತ್ರವಾಗಿವೆ.

ರಾಜಪ್ಪ ದಳವಾಯಿಯವರ ಕನ್ನಡ ಸೇವೆಯನ್ನು ಪರಿಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2000), ಕುವೆಂಪು ಶ್ರೀ ಪ್ರಶಸ್ತಿ (2004), ನಾಟಕ ಅಕಾಡಮಿ ಸುವರ್ಣ ಪ್ರಶಸ್ತಿ (2011), ಕಿ.ರಂ.ಪ್ರಶಸ್ತಿ (2014), ರಂಗಜಂಗಮ ಪ್ರಶಸ್ತಿ (2013), ಇಸ್ಮಾಯಿಲ್ ಗೋನಾಳ್ ರಂಗ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ ಎಂದು ಅವರು ಹೇಳಿದರು.

ಸಮ್ಮೇಳನ ಸಿದ್ದರಾಮೇಶ್ವರ ಸಮುದಾಯ ಭವನ, ಬೀರೂರು ರಸ್ತೆ, ಅಜ್ಜಂಪುರದಲ್ಲಿ ನಡೆಯಲಿದೆ.

ಡಾ.ರಾಜಪ್ಪ ದಳವಾಯಿ ಅವರನ್ನು ಬಳ್ಳಾರಿ ಜಿಲ್ಲೆಯಲ್ಲಿ ನಡೆದ ರಂಗತೋರಣ ಸಮಾವೇಶಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇವರ ಮಾರ್ಗದರ್ಶನದಲ್ಲಿ 5 ಮಂದಿ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಎ.ಸಿ.ಚಂದ್ರಪ್ಪ, ಮಹಾ ಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಂಸದರು ಸಮಿತಿಯಲ್ಲಿದ್ದಾರೆ. ಪೋಷಕರಾಗಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಉಪಾಧ್ಯಕ್ಷರಾಗಿ ಕ್ಷೇತ್ರದ ಎಲ್ಲಾ ಶಾಸಕರು, ಪ್ರಧಾನ ಕಾರ್ಯದರ್ಶಿಯಾಗಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್, ಕೋಶಾಧ್ಯಕ್ಷರಾಗಿ ಪುಟ್ಟಸ್ವಾಮಿ, ಕಾರ್ಯದರ್ಶಿಯಾಗಿ ಎಸ್.ಎಸ್.ವೆಂಕಟೇಶ್ ಸೇರಿದಂತೆ ಇತರರನ್ನು ನೇಮಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಸದಸ್ಯ ಎ.ಸಿ.ಚಂದ್ರಪ್ಪ, ಬಿಸಲೇಹಳ್ಳಿ ಸೋಮಶೇಖರ್‌, ಡಿ.ಪ್ರಕಾಶ್, ಪವನ್, ಇಹ್ರಾನ್ ಮುಹಮ್ಮದ್ ಬೇಗ್ ಮೊದಲಾದವರು ಹಾಜರಿದ್ದರು.

Leave a Reply