ಭಾವನಾತ್ಮಕ ದೃಶ್ಯವನ್ನು ಯಾರ ಪರ ವಕಾಲತ್ತು ಮಾಡಲು ಬಳಸಲಾಗಿದೆ?

4 years ago

ಅದೇನೇ ಆಗಲಿ ದಲಿತನೊಬ್ಬ ನಾಯಕನಾಗಿದ್ದಾನೆ ಎಂದು ಹೇಳಿಕೊಂಡು ಸಿನೇಮಾವನ್ನು ಅಪ್ಪಿಕೊಳ್ಳುವುದು ನಮ್ಮೊಳಗಿನ ರಾಜಕೀಯ ಅಪ್ರಭುದ್ದತೆಯಾಗುತ್ತದೆ. ಸಿನೇಮಾದಲ್ಲಿ ಹಿಡನ್ ಅಜೆಂಡಾವನ್ನು ಹೇಗೆ ತುರುಕಿಸಲಾಗುತ್ತೆ ಎಂಬುದಕ್ಕೆ ಇದೊಂದು ಉದಾಹರಣೆ.

ದಕ್ಷಿಣ ಕನ್ನಡ ಜಿಲ್ಲೆಯ ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಪೊಲೀಸ್/ಅರಣ್ಯ/ ಕಂದಾಯ ಇಲಾಖೆ ಮಾಡುತ್ತೆ. ಮಲೆಕುಡಿಯರು ಕಾಡುತ್ಪತ್ತಿ ಸಂಗ್ರಹಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಲೆಕುಡಿಯರಿಗೆ ಕಿರುಕುಳ ನೀಡುತ್ತಾರೆ. ಮಲೆಕುಡಿಯರು ಡಿವೈಎಫ್ಐ ನೇತೃತ್ವದಲ್ಲಿ ಪೊಲೀಸರನ್ನೂ, ಅರಣ್ಯ ಇಲಾಖೆಯನ್ನು ಎದುರಿಸಿ ಯಶಸ್ವಿಯಾಗುತ್ತಾರೆ. ಇದು ವಾಸ್ತವ ಮತ್ತು ಹೀಗೆ ಮಾತ್ರ ಆಗಲು ಸಾದ್ಯ.
ಇಂತಹ ಸಂದರ್ಭದಲ್ಲಿ ಊರಿನ ದೈವ / ಭೂತದ ಪಾತ್ರ ಏನಿರುತ್ತೆ ? ಒಂದು ವೇಳೆ ದೈವದ ಸಾನವೂ ಸೇರಿದಂತೆ ಊರು ಉಳಿಸುವ ಹೋರಾಟದ ಮಧ್ಯೆ ಊರ ಜನಗಳ ನಡುವೆ ಮನಸ್ತಾಪವಾಗಿದ್ದರೆ ಅವರನ್ನು ಒಂದುಗೂಡಿಸುವುದು ದೈವದ ಜವಾಬ್ದಾರಿ.
ದೈವ ಪಾತ್ರಿ ಊರ ಜನಗಳ ಅಹವಾಲು ಕೇಳಿ ಆ ಬಳಿಕ ಎರಡೂ ಬಣಗಳ ಜನರ ಕೈ ಹಿಡಿದು ತನ್ನೆದೆಗೆ ಆತುಕೊಂಡು ಪ್ರೀತಿಯಿಂದ ಜನರನ್ನು ಒಟ್ಟುಗೂಡಿಸಬೇಕು.

ಆದರೆ ಕಾಂತಾರ ಸಿನೇಮಾದಲ್ಲಿ ಮಾಡಿದ್ದೇನೆ. ಭೂತ/ದೈವ ನೇಮದ ಒಂದು ಭಾವನಾತ್ಮಕ ದೃಶ್ಯವನ್ನು ಯಾರ ಪರ ವಕಾಲತ್ತು ಮಾಡಲು ಬಳಸಲಾಗಿದೆ ? ತಲೆತಲಾಂತರಗಳಿಂದ ಕಾಡಂಚಿನಲ್ಲಿ ವಾಸವಾಗಿದ್ದ ದಲಿತರ ಭೂಮಿಯನ್ನು ಅತಿಕ್ರಮಿತ ಭೂಮಿ ಎಂದು ಅರಣ್ಯಾಧಿಕಾರಿ ಘೋಷಿಸುತ್ತಾನೆ. ಊರಿನ ಗುಂಪುಗಳ ಲಾಭವನ್ನು ಪಡೆದ ಅರಣ್ಯಾಧಿಕಾರಿ ಜನರ ಮಧ್ಯೆ ಘರ್ಷಣೆ ಊರಿಗೂರನ್ನೇ ಸುಟ್ಟು ಹಾಕಿಸುತ್ತಾನೆ.
ಆಗ ದೈವ ತನ್ನ ಕೋಲ/ನೇಮದಲ್ಲಿ ಇಡೀ ಊರಿನ ಜನರ ಕೈ ಹಿಡಿದು ತನ್ನೆದೆಗೆ ಅಪ್ಪಿಕೊಂಡು ಒಟ್ಟುಗೂಡಿಸಬೇಕಿತ್ತು. ಆದರೆ ಕಾಂತಾರ ಸಿನೆಮಾದಲ್ಲಿ ದಲಿತರು ಮತ್ತು ಅವರನ್ನು ನಿತ್ಯ ಶೋಷಿಸುವ ಅರಣ್ಯಾಧಿಕಾರಿಗಳನ್ನು ಒಟ್ಟುಗೂಡಿಸುವ ದೃಶ್ಯವಿದೆ. ಇದು ದಲಿತರ ಭೂಮಿ ಹೋರಾಟದಿಂದ ಅವರನ್ನು ವಿಮುಖರನ್ನಾಗಿಸುವ ವ್ಯವಸ್ಥಿತ ಹುನ್ನಾರ.

-ನವೀನ್ ಸೂರಿಂಜೆ, ಪತ್ರಕರ್ತರು

Leave a Reply