ಮಾಹಿತಿ ಕದ್ದು ವಂಚನೆ: ಮಹಾರಾಷ್ಟ್ರ ಮೂಲದ ವ್ಯಕ್ತಿ ಬಂಧನ

3 years ago

ಬೆಂಗಳೂರು: ಗ್ರಾಹಕರ ಮಾಹಿತಿ ಕಳವು ಮಾಡಿ ಅವುಗಳ ಮೂಲಕ ಆನ್ ಲೈನ್ ಶಾಪಿಂಗ್ ಮಾಡಿ ವಂಚಿಸುತ್ತಿದ್ದ ಮಹಾರಾಷ್ಟ್ರ ಮೂಲದ ವಂಚಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ ನಗರ 6ನೇ ಹಂತದ ವಿಕಾಸ್(29) ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ದ ಮಹಾರಾಷ್ಟ್ರದ ವಿಮಂತಲ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ಈತ ಬಜಾಜ್ ಫೈನಾನ್ಸ್ ಕಂಪನಿಯ ಉದ್ಯೋಗಿಯಾಗಿದ್ದು, ಅಲ್ಲಿನ ಹಳೆಯ ಗ್ರಾಹಕರುಗಳ ವಿವರಗಳನ್ನು ಪಡೆದು ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಆಸಾಮಿ ಅವುಗಳನ್ನು ಬಳಸಿ, ಹೊಸ ಸಿಮ್ ಕಾರ್ಡ್ ಖರೀದಿಸುತ್ತಿದ್ದ.

ಆನಂತರ ಅವರ ಹೆಸರಲ್ಲಿ ಬಜಾಜ್ ಫೈನಾನ್ಸ್ ಕಾರ್ಡ್‌ಗಳನ್ನು ಸೃಷ್ಟಿಸಿ ಅವುಗಳ ಮೂಲಕ ಅಮೇಜಾನ್ ನಲ್ಲಿ ಆನ್‍ಲೈನ್ ಮೂಲಕ ದುಬಾರಿ ಬೆಲೆ ಬಾಳುವ ಮೊಬೈಲ್ ಗಳನ್ನು ಖರೀದಿಸಿ, ಓಎಲ್ಎಕ್ಸ್ ಮೂಲಕ ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಬಜಾಜ್ ಪಿನಾನ್ಸ್ ಕಂಪನಿಯ ಪ್ರತಿನಿಧಿ ಅಶೋಕ ಪೊಲೀಸರಿಗೆ ದೂರು ನೀಡುತ್ತಾರೆ. ದೂರಿನಲ್ಲಿ ತಮ್ಮ ಕಂಪನಿಯಲ್ಲಿ ಹಳೆಯ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಬಳಸಿ ಆನ್‍ಲೈನ್ ಶಾಪಿಂಗ್ ಮಾಡಿ ಕಾನೂನನ್ನು ಉಲ್ಲಂಘಿಸಿ ಡಿಜಿಟಲ್ ವಸ್ತುಗಳನ್ನು ಅಮೆಜಾನ್ ಅಪ್ಲಿಕೇಷನ್ ಮೂಲಕ ಖರೀದಿಸಿ, ಬೇರೆಯವರಿಗೆ ಮಾರಾಟ ಮಾಡಿ ಲಾಭ ಪಡೆದು, ಕಂಪನಿಗೆ ಸುಮಾರು 14.21 ಲಕ್ಷ ನಷ್ಟವನ್ನುಂಟು ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಈ ದೂರನ್ನು ಪಡೆದು ಕೇಂದ್ರ ವಿಭಾಗದ ಸಿಇಎನ್ ಠಾಣೆಯ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಈತನು ಬಜಾಜ್ ಫೈನಾನ್ಸ್ ಕಂಪನಿಯ ಹಳೆಯ ಗ್ರಾಹಕರುಗಳ ವಿವರಗಳನ್ನು ಪಡೆದು, ಅವರುಗಳ ಹೆಸರಿನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ, ಅವರುಗಳ ಹೆಸರುಗಳಲ್ಲಿ ವೋಡಾಫೋನ್, ಐಡಿಯಾ ಕಂಪನಿಯ ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿಸಿ, ಅವರ ಬಜಾಜ್ ಫೈನಾನ್ಸ್ ಕಾರ್ಡ್‍ಗಳನ್ನು ಬಳಸಿಕೊಂಡು ಅಮೆಜಾನ್ ನಲ್ಲಿ ಆನ್‍ಲೈನ್ ಮೂಲಕ ದುಬಾರಿ ಬೆಲೆ ಬಾಳುವ ಮೊಬೈಲ್ ಫೋನ್‍ಗಳನ್ನು ಖರೀದಿಸಿ, ನಂತರ ಓ.ಎಲ್.ಎಕ್ಸ್ ಮೂಲಕ ಮಾರಾಟ ಮಾಡಿ ಹಣ ಪಡೆಯುತ್ತಿದ್ದುದ್ದು ತಿಳಿದು ಬಂದಿದೆ ಎಂದರು.

ಹಲಸೂರು ಗೇಟ್ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ಅವರ ನೇತೃತ್ವದ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ವಿನೋದ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.

Leave a Reply