ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಹತ್ತು ಲಕ್ಷ ರೂಪಾಯಿ ನಗದಿನೊಂದಿಗೆ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು ಹಣದ ಮೂಲದ ಕುರಿತು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ರಾಜ್ಯ ಸರ್ಕಾರದ ಕಮೀಷನ್ ಆಡಳಿತಕ್ಕೆ ಇದು ಉದಾಹರಣೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ವಿಧಾನಸೌಧಕ್ಕೆ ಕೆಲಸ ನಿಮಿತ್ತ ಬಂದಿದ್ದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಜಗದೀಶ್ ಎಂಬುವರ ಬ್ಯಾಗ್‌ನಲ್ಲಿ ₹10 ಲಕ್ಷ ನಗದು ಪತ್ತೆಯಾಗಿದ್ದು, ಅದನ್ನು ವಿಧಾನಸೌಧದ ಭದ್ರತಾ ಸಿಬ್ಬಂದಿ ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಧಾನಸೌಧಕ್ಕೆ ಬ್ಯಾಗ್ ಹಿಡಿದು ಬಂದಿದ್ದ ಜಗದೀಶ್ ಅವರನ್ನು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಬ್ಯಾಗ್ ನಲ್ಲಿ ಹಣ ಇರುವುದು ಗೊತ್ತಾಗುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ದಾಖಲೆ ಕೇಳಿದ್ದರು. ಆದರೆ, ಹಣದ ಬಗ್ಗೆ ಇಂಜಿನಿಯರ್ ಬಳಿ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ, ಹಣವನ್ನು ಜಪ್ತಿ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಜಪ್ತಿ ಮಾಡಿದ್ದ ಹಣವನ್ನು ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ಅಕ್ರಮ ಹಣ ಹೊಂದಿದ್ದ ಆರೋಪದಡಿ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿರುವ ಜಗದೀಶ್ ಮಂಡ್ಯಕ್ಕೆ ಹಣ ತೆಗೆದುಕೊಂಡು ಹೋಗುತ್ತಿದೆ. ಕೆಲಸ, ಇದ್ದಿದ್ದರಿಂದ ವಿಧಾನಸೌಧಕ್ಕೆ ಬಂದೆ ಎಂಬುದಾಗಿ ತಿಳಿಸಿದ್ದಾರೆ.
ಆದರೆ, ಹಣ ಎಲ್ಲಿಂದ ತಂದಿದ್ದಾರೆ? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದಕ್ಕೆ ಯಾವುದೇ ಪುರಾವೆ ನೀಡಿಲ್ಲ. ಜಗದೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕಮೀಷನ್ ಆಡಳಿತ: ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂಥ ಪ್ರಕರಣಗಳು ಬೇಕಾದಷ್ಟು ಇವೆ. ಆದ್ದರಿಂದಲೇ ಇದನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರು ಕರೆದಿರುವುದು ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ವಿಧಾನಸೌಧದಿಂದ ಹಿಡಿದು ಗ್ರಾಮ ಪಂಚಾಯ್ತಿವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗೋಡೆ ಮುಟ್ಟಿದರೆ ಸಾಕು ಕಾಸು, ಕಾಸು ಎನ್ನುವ ಶಬ್ದ ಬರುತ್ತದೆ ಯಾವುದೇ ಕಾಮಗಾರಿ ಬಿಲ್ ಪಾವತಿ ಆಗಬೇಕಾದರೆ ಕಮಿಷನ್ ನೀಡಬೇಕಿದೆ ಎಂದರು.
ವಿಧಾನಸೌಧದ ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರಿಗೂ ಹಣ ನೀಡಬೇಕು. ಇಡೀ ದೇಶದಲ್ಲಿ ಕರ್ನಾಟಕದ್ದು ಅತ್ಯಂತ ಭ್ರಷ್ಟ ಸರಕಾರ ಎಂಬ ಕಳಂಕ ಬಂದಿದೆ.ಆದರೆ ಎಲ್ಲ ಪ್ರಕರಣಗಳನ್ನು ಸರ್ಕಾರ ಮುಚ್ಚಿಹಾಕುತ್ತದೆ. ಯಾವುದೇ ಪ್ರಕರಣವನ್ನು ಇ.ಡಿ.ಗಾಗಲಿ, ಬೇರೆ ತನಿಖೆಗಾಗಲಿ ವಹಿಸುವುದಿಲ್ಲ. ಮಂತ್ರಿಗಳು, ಶಾಸಕರ ಮೇಲೆ ಎಫ್ಐಆರ್ ದಾಖಲಾದರೂ ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ ಎಂದು ಆಪಾದಿಸಿದ್ದಾರೆ.




