ಮಂಗಳೂರು: ಮಂಗಳೂರು ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್ ನಲ್ಲಿ ದಲಿತರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಅವರ ಬದುಕನ್ನು ತೀರಾ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಕಿನ್ಯಾ ಗ್ರಾಮ ಪಂಚಾಯತ್ ನ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿ, ವಾಸಿಸಲು ಮನೆ, ಶೌಚಾಲಯ, ಸಮರ್ಪಕ ಕುಡಿಯುವ ನೀರು, ದಾರಿದೀಪ, ಸಂಪರ್ಕ ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡದೆ ಸತಾಯಿಸಿರುವ ಕಿನ್ಯಾ ಗ್ರಾಮ ಪಂಚಾಯತ್ ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಕ್ಷಮ್ಯ ಅಪರಾಧವೆಸಗಿದ್ದಾರೆ ಎಂದು ಕಿಡಿಕಾರಿದರು.
ಸರಕಾರದ ಡಿಸಿ ಮನ್ನಾ ಜಾಗ ಮಂಜೂರು ಆಗಿದ್ದರೂ ಅದಕ್ಕೆ ಸಂಬಂಧಿಸಿದ ಸಮರ್ಪಕ ಭೂದಾಖಲೆಗಳು ಇನ್ನೂ ದಲಿತರ ಕೈ ಸೇರಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ ಅರ್ಪಿಸಿದರೂ ಯಾವುದೇ ಸ್ಪಂದನವಿಲ್ಲ. ಆದ್ದರಿಂದ ದಲಿತರ ಭೂಮಿ ದಾಖಲೆಗಳನ್ನು ಸರಿಪಡಿಸಲು ಕೂಡಲೇ ಕಂದಾಯ ಅದಾಲತ್ ನಡೆಸಬೇಕು ಎಂದು ಒತ್ತಾಯಿಸಿದರು.
CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರತಿಯೊಂದು ಹಣದಲ್ಲಿ ಶೇಕಡಾ 25ರಷ್ಟು ಹಣವನ್ನು ದಲಿತ ಸಮುದಾಯಕ್ಕಾಗಿ ಮೀಸಲಿಡಬೇಕೆಂದಿದ್ದರೂ ಇಂದಿನವರೆಗೂ ಆಳುವ ಸರಕಾರಗಳು ಯಾವುದೇ ರೀತಿಯ ಗಮನ ನೀಡಿಲ್ಲ. ವಾಸ್ತವ ಹೀಗಿರುವಾಗ ದಲಿತ ಮೀಸಲು ನಿಧಿ ಯಾರ ಜೇಬು ಸೇರಿದೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿಯ ಬಗ್ಗೆ ನಿರಂತರವಾಗಿ ಬೊಗಳೆ ಬಿಡುವ ಸರಕಾರಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ನಿರಾಕರಿಸಿ ಮಾಡುವ ಅಭಿವೃದ್ಧಿಗೆ ಯಾವ ಅರ್ಥವೂ ಇಲ್ಲವಾಗಿದೆ. ದಲಿತರ ಪ್ರಶ್ನೆಗಳನ್ನು ಕೂಡಲೇ ಇತ್ಯರ್ಥಗೊಳಿಸದಿದ್ದಲ್ಲಿ ತಾಲೂಕು ಪಂಚಾಯತ್ ಕಚೇರಿಗೆ ಹಾಗೂ ಜನಪ್ರತಿನಿಧಿಗಳಿಗೆ ಘೆರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿಯ ಗೌರವ ಸಲಹೆಗಾರ ಯೋಗೀಶ್ ಜಪ್ಪಿನಮೊಗರು, ಕಳೆದ ಹಲವಾರು ವರ್ಷಗಳಿಂದ ಕಿನ್ಯಾ ಗ್ರಾಮದಲ್ಲಿ ದಲಿತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸವಿವರವಾಗಿ ಹೇಳುತ್ತಾ, ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದಲ್ಲಿ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನುದ್ದೇಶಿಸಿ ವಕೀಲರಾದ ಮನೋಜ್ ವಾಮಂಜೂರು ಮಾತನಾಡಿದರು. ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಮಂಗಳೂರು ನಗರ ಅಧ್ಯಕ್ಷರಾದ ರಾಧಾಕೃಷ್ಣ, ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, DHS ಕಿನ್ಯಾ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ರೋಹಿದಾಸ್, ನಾಯಕರಾದ ಕೊರಗಪ್ಪ ಮುಂತಾದವರು ಉಪಸ್ಥಿತರಿದ್ದರು.



