ಭಾರತ ರಕ್ಷಣಾ ವ್ಯವಹಾರ ಕೇವಲ ಮಾರುಕಟ್ಟೆ ಮಾತ್ರವಲ್ಲ, ಅಭಿವೃದ್ಧಿಯ ಪಾಲುದಾರ: ನರೇಂದ್ರ ಮೋದಿ

3 years ago

ಬೆಂಗಳೂರು: ಭಾರತ ರಕ್ಷಣಾ ವ್ಯವಹಾರ ಕೇವಲ ಮಾರುಕಟ್ಟೆ ಮಾತ್ರ ಅಲ್ಲ; ಅದು ಅಭಿವೃದ್ಧಿಯ ಪಾಲುದಾರ ಕೂಡ ಆಗಿದೆ. ನಮ್ಮ ರಕ್ಷಣಾ ತಂತ್ರಜ್ಞಾನ ಜಗತ್ತಿನಲ್ಲೇ ಪ್ರಭಾವಶಾಲಿಯಾಗಿದೆ ಇದರಿಂದ ದೇಶವನ್ನು ಪ್ರಾಮಾಣಿಕ ಹಾಗೂ ಸದೃಢವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಫೆಬ್ರವರಿ 17ರವರೆಗೆ ಒಟ್ಟು 35 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಡೆಯಲಿರುವ ‘ಏರೋ ಇಂಡಿಯಾ–2023’ ಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರೊಂದಿಗೆ ಸಮಾರಂಭದ ವೇದಿಕೆಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಹೆಲಿಕಾಪ್ಟರ್ಗಳು ತ್ರಿವರ್ಣ ಧ್ವಜ, ಸೇನೆ ಧ್ವಜ ಹಾಗೂ ಏರೋ ಇಂಡಿಯಾ ಧ್ವಜ ಹಾಗೂ ಸೂರ್ಯ ಕಿರಣ್ ತ್ರಿವರ್ಣ ಬಣ್ಣದ ಮೂಲಕ ಸ್ವಾಗತಿಸಿದವು.

ನಂತರ ಮಾತು ಆರಂಭಿಸಿದ ಅವರು, ಏರೋ ಇಂಡಿಯಾ ಕೇವಲ ಪ್ರದರ್ಶನ ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, ದೇಶವು ಈ ಗ್ರಹಿಕೆಯನ್ನು ಬದಲಾಯಿಸಿದೆ. ಈಗ ಇದು ಕೇವಲ ಪ್ರದರ್ಶನವಲ್ಲ. ಭಾರತದ ಶಕ್ತಿಯಾಗಿದೆ. ಇದು ಭಾರತೀಯ ರಕ್ಷಣಾ ಉದ್ಯಮದ ವ್ಯಾಪ್ತಿ ಮತ್ತು ಆತ್ಮ ವಿಶ್ವಾಸದ ಪ್ರತೀಕವಾಗಿದೆ ಎಂದರು.

ಈ ಪ್ರದರ್ಶನ ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸುವ ಒಂದು ಉದಾಹರಣೆಯಾಗಿದೆ. ಇಲ್ಲಿ ಸುಮಾರು 100 ರಾಷ್ಟ್ರಗಳ ಉಪಸ್ಥಿತಿಯು ಭಾರತದ ಮೇಲಿನ ವಿಶ್ವ ನಂಬಿಕೆಯನ್ನು ಹೆಚ್ಚಿಸಿದೆ ಎಂದು ತೋರಿಸುತ್ತದೆ. ಭಾರತ ಮತ್ತು ವಿಶ್ವದ 700ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದರು.

1996ರಲ್ಲಿ ಆರಂಭವಾದ ವೈಮಾನಿಕ ಕ್ಷೇತ್ರದ ಶಕ್ತಿ ಪ್ರದರ್ಶನವು ದ್ವೈವಾರ್ಷಿಕವಾಗಿ ನಡೆಯುತ್ತಿದ್ದು, ಇದು 14ನೇ ಆವೃತ್ತಿ. ಏಷ್ಯಾದಲ್ಲೇ ಅತಿ ದೊಡ್ಡ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನ ಇದಾಗಿದ್ದು, ದೇಶದ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ ಗಳು, ರಕ್ಷಣಾ ಉಪಕರಣ‌ಗಳು ಮತ್ತು ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲಿದೆ. ವೈಮಾನಿಕ ಕ್ಷೇತ್ರದ ಉದ್ಯಮದ ಸಾಮರ್ಥ್ಯಗಳು, ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನಕ್ಕೆ ಇದು ಅತಿ ದೊಡ್ಡ ವೇದಿಕೆಯಾಗಿದೆ.

Leave a Reply