ಬೆಂಗಳೂರು: ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ತಾಯಿ ಮೇಲೆ ಆಣೆ ಪ್ರಮಾಣ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ಮಾತು ತಪ್ಪಿದ್ದಾರೆ ಎಂದು ಪಂಚಮಸಾಲಿ ಮಠಾಧೀಶ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಪಾದಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿಗಳು ಮಾಜಿ ಸಿಎಂ ಜೆ.ಹೆಚ್.ಪಟೇಲ್ ನಂತರ ನಿಮ್ಮನ್ನು ನಂಬಿದ್ದೆವು. ಆದರೆ ನೀವು ಇದುವರೆಗೂ ನಮ್ಮ ಬೇಡಿಕೆ ಈಡೇರಿಸದಿರುವುದು ಬೇಸರ ತಂದಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಮುನ್ನ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ಕುರಿತು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಪಂಚಮಸಾಲಿಗಳ ಬೇಡಿಕೆ ಈಡೇರಿಸದಿದ್ದರೆ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ 74 ವಿಧಾನಸಭಾ ಕ್ಷೇತ್ರದಲ್ಲಿ ತೊಂದರೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಸರ್ಕಾರದ ಕೊನೆ ಅಧಿವೇಶನ ನಡೆಯುತ್ತಿರುವುದರಿಂದ ನಮ್ಮ ಬೇಡಿಕೆ ಈಡೇರಿಸಲು ಮನಸು ಮಾಡಬೇಕು. ಇಲ್ಲದಿದ್ದರೆ, ಈ ಬಾರಿ ನಾವು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.




