ಕರ್ನಾಟಕದ ಮಾನ್ಯ ಸಚಿವರೊಬ್ಬರು, ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತ, ಚರಿತ್ರೆಯಲ್ಲಿ ಭಾರತವು ಬೌದ್ಧಧರ್ಮದಿಂದ ಎದುರಿಸಿದ `ಅಪಾಯ’ದ ಬಗ್ಗೆ ಉಲ್ಲೇಖಿಸಿದ್ದಾರೆ. ಚರಿತ್ರೆಯ ಸಂಗತಿಗಳನ್ನು ಬದಿಗಿಟ್ಟು ಸದ್ಯದ ಸಂಗತಿ ಹೇಳುವುದಾದರೆ, ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಸಮುದಾಯಗಳಲ್ಲಿ ಬೌದ್ಧಧರ್ಮವು ಹೇಗೆ ಹೊಸ ವೈಚಾರಿಕತೆ ಮತ್ತು ಸಂಸ್ಕೃತಿಯನ್ನು ರೂಪಿಸುತ್ತಿದೆ ಎಂದು ಅಧ್ಯಯನ ಮಾಡುತ್ತಿರುವ ನನಗೆ, ಅದೊಂದು ಸಾಮಾಜಿಕ-ಧಾರ್ಮಿಕ-ಆಧ್ಯಾತ್ಮಿಕ ಪರಿಹಾರ ಮತ್ತು ಪರ್ಯಾಯವಾಗಿ ಬೇರು ತಳೆಯುತ್ತಿರುವುದು ಅರಿವಾಗಿದೆ. ಈ ಮಾತು ಕೆಲಮಟ್ಟಿಗೆ ಪಶ್ಚಿಮ ದೇಶಗಳ ಮಟ್ಟಿಗೂ ನಿಜ. ನಾನೂ ಗೆಳೆಯ ಬೌದ್ಧ ವಿದ್ವಾಂಸ ನಟರಾಜ ಬೂದಾಳರೂ ಕೆಲವು ವರ್ಷಗಳ ಹಿಂದೆ ಜರ್ಮನಿಯಲ್ಲಿರುವಾಗ, ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿರುವ ಭಾರತ ಶಾಸ್ತ್ರಜ್ಞರೂ ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರೂ ಆದ ಜೊಯ್ದೆನ್ ಬೊಸರನ್ನು ಭೇಟಿಮಾಡಲು ಹೋಗಿದ್ದೆವು. ಅವರ ಕೋಣೆಯಲ್ಲಿ ಬುದ್ಧನ ಪಟವಿತ್ತು. ಮ್ಯೂನಿಕ್ ವಿವಿಯಲ್ಲಿ ದಕ್ಷಿಣ ಏಶಿಯಾದ ಅಧ್ಯಯನವೆಂದರೆ ಬೌದ್ಧ ಅಧ್ಯಯನವೇ ಎಂಬಂತಾಗಿದೆ. ಇದಕ್ಕೆ ಕಾರಣ ಕೇಳಿದೆವು.
ಅವರ ಉತ್ತರ ಹೀಗಿತ್ತು: “ನಮ್ಮ ಸಂಸ್ಥೆಯಲ್ಲಿ ಆಕರ್ಷಕ ಕೋರ್ಸು ಅಂದರೆ ಬುದ್ಧಿಸ್ಟ್ ಆಂಡ್ ಸೌತ್ ಏಶಿಯನ್ ಸ್ಟಡೀಸ್. ಹೆಚ್ಚಿನ ವಿದ್ಯಾರ್ಥಿಗಳು ಬೌದ್ಧ ಧರ್ಮದ ಆಸಕ್ತಿಯಿಂದ ಬಂದಿದ್ದಾರೆ. ಇಂಡಾಲಜಿ ಮತ್ತು ಟಿಬೆಟಾಲಜಿ ಅಂದರೆ ಬೌದ್ಧ ಅಧ್ಯಯನ. ಏಕೆಂದರೆ ನಾವು ನಿಜವಾಗಿಯೂ ಧಾರ್ಮಿಕ ಜನರು ಆಗಿದ್ದರೆ ಯಾಕೆ ಇಂತಹ ಯುದ್ಧಗಳನ್ನು ಮಾಡಿದೀವಿ? ಕ್ರೈಸ್ತ ಸಾಂಸ್ಕೃತಿಕ ಪರಿಸರದಲ್ಲಿ ಹೇಗೆ ಇಂಥ ಅಪರಾಧಗಳು ನಡೆದವು? ಈ ಹಿಟ್ಲರ್ ಕಾಲ ಹೇಗೆ ಸಾಧ್ಯವಾಯಿತು? ನಮ್ಮ ಧರ್ಮ ಇದರ ವಿರುದ್ಧವಾಗಿ ಏನು ಮಾಡಿತು? ಇಂಥ ಪ್ರಶ್ನೆಗಳು ಹುಟ್ಟಿ ಕ್ರೈಸ್ತ ಧರ್ಮದ ಬಗ್ಗೆ ಹೆಚ್ಚಿನ ಜನರಿಗೆ ವಿಶ್ವಾಸ ಕಳೆದುಹೋಗಿದೆ. ಅವರ ಸಾಂಪ್ರದಾಯಿಕ ಧಾರ್ಮಿಕತೆ-ಆಧ್ಯಾತ್ಮಿಕತೆ ಭಗ್ನವಾಗಿದೆ. ಆ ಶೂನ್ಯದಲ್ಲಿ ಹೊಸದು ಬರಬೇಕು. ಅವರು ಪರ್ಯಾಯ ಹುಡುಕುತ್ತಿದ್ದಾರೆ-ಪ್ರಪಂಚದಲ್ಲಿ ಏನೇನಿದೆ ನೋಡೋಣ ಅಂತ. ಕೆಲವು ಜನರು ಮುಸ್ಲಿಂ ಆಗುತ್ತಾರೆ ಅಥವಾ ಹರಿಕೃಷ್ಣ ಪಂಥಿ ಆಗುತ್ತಾರೆ. ಇದರಲ್ಲಿ ದೊಡ್ಡ ಸಕ್ಸೆಸ್ ಬೌದ್ಧ. ನಲವತ್ತು ವರ್ಷಗಳ ಹಿಂದೆ ಎಲ್ಲರೂ ಝೆನ್ ಕುರಿತು ಓದಿದರು. ಇತ್ತೀಚೆಗೆ ಅದು ಟಿಬೆಟಿಯನ್ ಬುದ್ಧಿಸಂ ಆಗಿದೆ. ಅವರಿಗೆ ದಲೈಲಾಮಾ ಕಲ್ಚರಲ್ ಹೀರೊ. ನಾನು ಹಿಂದೆ ಸೀರಿಯಸ್ಸಾಗಿ ಸಂಸ್ಕೃತ ಕಲಿತ ಹಾಗೆ ಈ ಪೀಳಿಗೆಯ ಜನ ಟಿಬೆಟಿಯನ್ ಕಲೀತಾರೆ.’’
ಸದ್ಯ ಭಾರತಕ್ಕೆ ಪಶ್ಚಿಮ ದೇಶಗಳಲ್ಲಿ ಚಾರಿತ್ರಿಕ ಕಾರಣಕ್ಕೆ ಗೌರವವಿರುವುದು, ಇದು ಬುದ್ಧಗುರುವಿನ ನಾಡು ಎಂಬ ಕಾರಣಕ್ಕೆ ಎಂದು ನನ್ನ ಅಭಿಪ್ರಾಯ.
ಪ್ರೊ.ರಹಮತ್ ತರೀಕೆರೆ, ಸಂಶೋಧಕರು




