ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾದ ತಕ್ಷಣ ಚಿನ್ನದ ತಗಡು ಸಿಗುತ್ತದೆಯೇ ಎಂದು ವ್ಯಂಗ್ಯವಾಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿರುವ ಮಾಜಿ ಸಂಸದ ಡಿಕೆ ಸುರೇಶ್, ಕೇಂದ್ರದಿಂದ ಕರ್ನಾಟಕಕ್ಕೆ ನ್ಯಾಯೋಚಿತ ಪಾಲು ಕೊಡಿಸಿದರೆ ಚಿನ್ನದ ತಗಡು ಒಡೆಸಲು ಸಾಧ್ಯವಾಗುತ್ತದೆ ಎಂದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಸೂಲಿಯಾದ ತೆರಿಗೆಯಲ್ಲಿ ಉತ್ತರ ಭಾರತಕ್ಕೆ 5 ಲಕ್ಷ ಕೋಟಿ ರೂ. ಅನುದಾನ ಹರಿದುಹೋಗಿದೆ. ಅದರಲ್ಲಿ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲು ಸಿಕ್ಕಿಲ್ಲ. ಕೇಂದ್ರ ಮಂತ್ರಿಯಾಗಿ ಕುಮಾರಸ್ವಾಮಿ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರ ಸಚಿವರಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ಅದಕ್ಕೆ ತಕ್ಕುದಾದ ಮಾತುಗಳನ್ನಾಡಬೇಕು. ಕನ್ನಡಿಗರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಉತ್ತರ ಭಾರತದ ರಾಜ್ಯಗಳಿಗೆ 5 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದೆ. ಕರ್ನಾಟಕಕ್ಕೆ ಕೊಟ್ಟಿರುವ ದುಡ್ಡೆಷ್ಟು? ಎಂದು ಕೇಳಿದರು.
ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಹೆಸರು ಬದಲಾದ ತಕ್ಷಣ ಚಿನ್ನದ ತಗಡು ಸಿಗುತ್ತದೆಯೇ? ಎಂದಿದ್ದಾರೆ. ಬೆಂಗಳೂರು ಜಿಲ್ಲೆ ಎಂದರೆ ಯುವಕರಿಗೆ ಉದ್ಯೋಗ ಸಿಗುತ್ತದೆ. ಹೆಸರು ಬದಲಾವಣೆಯಿಂದ ರೈತರು, ಯುವಕರು, ಜನಸಾಮಾನ್ಯರು ಖುಷಿಯಾಗಿದ್ದಾರೆ. ವಿರೋಧಪಕ್ಷಗಳು ಜಿಲ್ಲೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇದು ಸರಿಯಲ್ಲ ಎಂದರು.
ಕುಮಾರಸ್ವಾಮಿಯವರು ಕೆಂಗಲ್ ಹನುಮಂತಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೆಂಗಲ್ ಅವರ ಸೇವೆ ಸದಾ ಸ್ಮರಣೀಯ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಕೆಂಗಲ್ ಅವರ ಪ್ರತಿಮೆಯನ್ನೂ ನೋಡಲಿಲ್ಲ. ಈಗ ಮಾತನಾಡುತ್ತಾರೆ. ರಾಜ್ಯಕ್ಕೆ ಕೇಂದ್ರದಿಂದ ಕಳೆದ ವರ್ಷ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ. ನರೇಗಾ ಕೂಲಿ ಕಳೆದ 4 ತಿಂಗಳಿನಿಂದ ಬಂದಿಲ್ಲ. ಇದರ ಬಗ್ಗೆ ಕುಮಾರಸ್ವಾಮಿಯವರು ಗಮನ ಹರಿಸಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಇತಿಹಾಸ ಗೊತ್ತಿಲ್ಲ. ರಾಮನಗರಕ್ಕೆ ಈ ಮೊದಲು ವಿಲಾಸ್‌ಪೇಟೆ ಎಂದು ಹೆಸರಿತ್ತು. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲು ವಿಳಂಬವಾಗುತ್ತಿದೆ. ಅವರಿಗೆ ಅದರ ಬಗ್ಗೆ ಮಾತನಾಡಲಾಗುತ್ತಿಲ್ಲ. ಕೃಷ್ಣ ಮೇಲ್ದಂಡೆ, ಕಳಸಾ ಬಂಡೂರಿ ಯೋಜನೆ ಬಾಕಿ ಇದೆ. ಆ ಬಗ್ಗೆ ಮಾತನಾಡಲಿ, ರಾಮನಗರದ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಕಿಲ್ಲ ಎಂದರು.




