ಪ್ರಕರಣ ದಾಖಲಾದ ದಿನಾಂಕದಿಂದ 24 ತಿಂಗಳಲ್ಲಿ ಯಾವುದೇ ಸಿವಿಲ್ ಪ್ರಕರಣ ಇತ್ಯರ್ಥ

11 months ago

ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳು ಇತ್ಯರ್ಥಕ್ಕೆ ದಶಕಗಟ್ಟಲೇ ಕಾಯುವ  ಕೆಲಸಕ್ಕೆ ಮುಕ್ತಿ ನೀಡಲು ದಿಟ್ಟಹೆಜ್ಜೆಯನ್ನಿಟ್ಟು, ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

ರಾಜ್ಯ ವಿಧಾನಮಂಡಲದಲ್ಲಿ‌ ಅನುಮೋದನೆಗೊಂಡ ಸಿವಿಲ್ ಪ್ರಕ್ರಿಯಾ ಸಂಹಿತೆಯ ಕ್ರಾಂತಿಕಾರಕ ತಿದ್ದುಪಡಿಗೆ ಅಂಕಿತ ಹಾಕದೆ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ರವಾನಿಸಿದ್ದರು. ರಾಷ್ಟ್ರಪತಿಗಳು ಈ  ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವ ಹೆಚ್ .ಕೆ.ಪಾಟೀಲ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ತಿದ್ದುಪಡಿ ರಾಷ್ಟ್ರದಲ್ಲಿಯೇ ಮೊದಲು. ತಕ್ಷಣದಿಂದ ಈ ತಿದ್ದುಪಡಿ ಜಾರಿಗೆ ಬರಲಿದೆ ಎಂದರು.

ನಮ್ಮ ಶಾಸಕಾಂಗ ಮಾಡಿದ ಈ ತಿದ್ದುಪಡಿಯ ಮುಖಾಂತರ ಪ್ರತಿಯೊಂದು ಸಿವಿಲ್ ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯವಾದ ಪ್ರಯತ್ನ ಮಾಡಬೇಕು. ಎರಡು ತಿಂಗಳೊಳಗಾಗಿ ರಾಜಿ ಸಂಧಾನದ ಪ್ರಯತ್ನ ತಾರ್ಕಿಕ ಅಂತ್ಯ ಕಾಣಬೇಕು. ಸಾಧ್ಯವಾಗದಿದ್ದಾಗ, ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಶಾಸನಾತ್ಮಕ ಅವಕಾಶ ದೊರೆತಿರುವುದು ಕಕ್ಷಿದಾರನ ಪಾಲಿಗೆ ತೆರೆದ ಭಾಗ್ಯದ ಬಾಗಿಲು ಎಂದರು.

ನ್ಯಾಯಾಲಯಗಳ ಕಲಾಪಗಳಲ್ಲಿ ವಿಳಂಬ ನಿರಾಕರಿಸುವ, ಚರಿತ್ರಾರ್ಹ ಸುಧಾರಣೆಗೆ ಶಾಸನಾತ್ಮಕ ಅಂಕುಶ ಹೊಂದಿರುವ ಈ ತಿದ್ದುಪಡಿ ಪ್ರಕರಣ ದಾಖಲಾದ ದಿನಾಂಕದಿಂದ 24 ತಿಂಗಳಲ್ಲಿ ಯಾವುದೇ ಸಿವಿಲ್ ಪ್ರಕರಣ ಇತ್ಯರ್ಥವಾಗಿ, ತಾರ್ಕಿಕ ಅಂತ್ಯ ಕಾಣುವುದಕ್ಕೆ ಸುನಿಶ್ಚಿತಗೊಳಿಸುವ ಶಾಸನ ಜಾರಿಗೆ ಬಂದಿದೆ ಎಂದರು.

ಈ ಪುರೋಗಾಮಿ ಪ್ರಗತಿಯ ಜೊತೆ-ಜೊತೆಗೆ ಈ ಕಾನೂನು ನ್ಯಾಯಾಲಯಗಳಲ್ಲಿ ಆಗುವ ವಿಳಂಬಕ್ಕೆ ಇತಿಶ್ರೀ ಹಾಡಲಿದೆ. ಇನ್ನು ಮುಂದೆ ನ್ಯಾಯಾಲಯಗಳಲ್ಲಿ, ವಿಳಂಬವಿಲ್ಲದೇ ಪ್ರಕರಣಗಳು ಇತ್ಯರ್ಥವಾಗಲು ಶಾಸನ ಮಾಡಲಾಗಿದೆ ಎಂದರು.

ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ದಿನದಂದು ಅಥವಾ ಮೊದಲ ವಿಚಾರಣೆಯ ದಿನದಂದು ಅಂತಿಮ ತೀರ್ಪು / ಆದೇಶದ ದಿನಾಂಕ ನಿರ್ಣಯವಾಗುವ ಅತ್ಯಂತ ಪರಿಣಾಮಕಾರಿ ಮಹತ್ವದ ಶ್ರೇಷ್ಠವಾದ ನ್ಯಾಯಾಂಗದ ಕಾರ್ಯ ನಿರ್ವಹಣೆಗೆ ಈ ತಿದ್ದುಪಡಿ ಇಂಬು ನೀಡಲಿದೆ ಎಂದರು.

ಕಳೆದ ಬೆಳಗಾವಿ ಅಧಿವೇಶನದಲ್ಲಿ 17.12.2024 ರಂದು ವಿಧಾನ ಸಭೆಯಲ್ಲಿ 18.12.2024 ವಿಧಾನ ಪರಿಷತ್ತಿನಲ್ಲಿ ಈ ಕಾನೂನು ಅಂಗೀಕರಿಸಲಾಗಿತ್ತು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಈ ವಿಧೇಯಕವನ್ನು ಸಂವಿಧಾನದ ಅನುಚ್ಛೇದ 200 ಮತ್ತು 254 ರಡಿಯಲ್ಲಿ ಘನತೆವೆತ್ತ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯ್ದಿರಿಸಿದ್ದರು ಎಂದರು.

ಈ ಕಾನೂನಿಗೆ ರಾಷ್ಟ್ರಪತಿಯವರು ದಿನಾಂಕ: 19.05.2024 ರಂದು ತಮ್ಮ ಅಂಕಿತ ಹಾಕಿದ್ದಾರೆ.ಲಿಖಿತ ಹೇಳಿಕೆ, ಸಾಕ್ಷ್ಯ ಸಂಗ್ರಹ ಎಲ್ಲದಕ್ಕೂ ಕಾಲಮಿತಿ ನಿಗದಿಪಡಿಸಲು ಶಾಸನ ಅವಕಾಶ ಕಲ್ಪಿಸಿದೆ. ಯಾವುದೇ ಹಂತದಲ್ಲಿ ಒಂದು ತಿಂಗಳೊಳಗಾಗಿ ಕೇವಲ 3 ಮುಂದೂಡಿಕೆ ಅಥವಾ 3 ದಿನಾಂಕಗಳ ಅವಕಾಶ ಮಾತ್ರ ಕಲ್ಪಿಸಲಾಗುವುದು ಎಂದರು.

ಯಾವುದೇ ಹಂತದಲ್ಲಿ ಅರ್ಜಿದಾರ-ಪ್ರತಿವಾದಿ ಈ ಅವಕಾಶದಲ್ಲಿ ಸಲ್ಲಿಸದಿದ್ದರೆ, ಅಂಥವರ ಹೇಳಿಕೆಗಳನ್ನು ಶೂನ್ಯವೆಂದು ಪರಿಗಣಿಸಲು ಅವಕಾಶ ನೀಡಲಾಗಿದೆ ಎಂದರು.

ಈ ಕಾನೂನಿನಲ್ಲಿ ಪ್ರಕರಣ ನಿರ್ವಹಣೆಯನ್ನು ಪುನರ್ ವ್ಯಾಖ್ಯಾನ ಮಾಡಲಾಗಿದೆ. ಸಾಕ್ಷ್ಯಗಳ ವಿಚಾರಣೆಗಳನ್ನು ನಿಗದಿತ ದಿನಾಂಕದಂದು ಕೈಗೊಳ್ಳಲು ಮತ್ತು ದೈನಂದಿನ ಅಥವಾ ಸಾಪ್ತಾಹಿಕ ಆಧಾರದಲ್ಲಿ ಈ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದರಿಂದ ಯಾವುದೇ ಪ್ರಕರಣ ಅನಿರ್ದಿಷ್ಟಕಾಲ ವಿಳಂಬಕ್ಕೆ ಕಾರಣವಾಗುವುದಿಲ್ಲ. ಆಗದಂತೆ ಸುನಿಶ್ಚಿತಗೊಳಿಸುವ ಜನಪರ ಕಾನೂನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

Leave a Reply