ಜಾರ್ಜ್ ಆರ್ವೆಲ್‌ ಇವತ್ತು ಬದುಕಿದ್ದಿದ್ದರೆ ಬಹುಶಃ ಹಂದಿಗಳ ಕ್ಷಮೆ ಕೇಳುತ್ತಿದ್ದರೇನೊ

2 years ago

ಆರ್ವೆಲ್ಲನ ಹಂದಿಗಳೂ, ಎಡಿಜಿಪಿಯ ಪತ್ರವೂ

ಎರಿಕ್‌ ಆರ್ಥರ್ ಬ್ಲೇರ್. ಬಹುಶಃ ಈ ಹೆಸರು ಕೇಳಿದರೆ ಬಹಳಷ್ಟು ಜನರಿಗೆ ವ್ಯಕ್ತಿ ಯಾರೆಂದು ನೆನಪಾಗದಿರಬಹುದು. ಆದರೆ ಆತನ ಕಾವ್ಯನಾಮ `ಜಾರ್ಜ್ ಆರ್ವೆಲ್’ ಎಂದಾಕ್ಷಣ ‘ಓಹ್‌… ಅವರಾ’ ಎಂಬ ಉದ್ಘಾರ ಹೊರಬೀಳುತ್ತೆ. ಅದಕ್ಕೆ ಕಾರಣ, ಆತ ಬರೆದ ಅನಿಮಲ್ ಫಾರ್ಮ್ ಎಂಬ ಅತ್ಯಂತ ಚರ್ಚಿತ, ವಿಡಂಬನೆಯ ಕಾದಂಬರಿ. ಕಾರ್ಲ್‌ ಮಾರ್ಕ್ಸ್ ಆದರ್ಶವಾಗಿಟ್ಟುಕೊಂಡು ಲೆನಿನ್‌ ಮುಂದಾಳುತನದಲ್ಲಿ ಶುರುವಾದ ಸೋವಿಯತ್ ರಷ್ಯಾದ ಕಮ್ಯುನಿಸಂನ ಕ್ರಾಂತಿ ಕಾಲಾಂತರದಲ್ಲಿ ಹಾದಿತಪ್ಪುತ್ತಾ ಬಂದು, ಎರಡನೇ ವಿಶ್ವ ಮಹಾಯುದ್ಧದ ವೇಳೆಗೆ ಸ್ಟಾಲಿನ್‌ ಆಳ್ವಿಕೆಯಡಿ ನಿರಂಕುಶವಾದಕ್ಕೆ ರೂಪಾಂತರಗೊಂಡ ಬಗೆಯನ್ನು ಆರ್ವೆಲ್‌ ತನ್ನ ಅನಿಮಲ್‌ ಫಾರ್ಮ್ ಕಾದಂಬರಿಯಲ್ಲಿ ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದ್ದಾನೆ. ಒಂದು ರಾಜಕೀಯ ಸಿದ್ಧಾಂತ ವ್ಯಕ್ತಿಕೇಂದ್ರಿತವಾಗಿ ಅಥವಾ ವ್ಯಕ್ತಿಗಳ ಗುಂಪುಕೇಂದ್ರಿತವಾಗಿ ಸಂಕುಚಿತಗೊಳ್ಳುತ್ತಾ ಹೋದರೆ ಅದು ಹೇಗೆ ತನ್ನ ವಾದಗಳಿಗೇ ವಿರುದ್ಧವಾಗಿ ಬದಲಾಗಬಹುದು ಅನ್ನೋದನ್ನು ರಷ್ಯಾದ ಕಮ್ಯುನಿಸಂ ಪತನದಲ್ಲಿ ಜಾರ್ಜ್ ಆರ್ವೆಲ್‌ ಕಂಡುಕೊಳ್ಳುತ್ತಾನೆ. ಇದನ್ನು ನಾವು ಚೀನಾದ ಮಾವೋ ಕೇಂದ್ರಿತ ಕಮ್ಯುನಿಸಂ ಕ್ರಾಂತಿಯಲ್ಲೂ ಕಾಣಬಹುದು. ಇದನ್ನೆಲ್ಲ ಗಮನಿಸಿದಾಗ, ನಿರಂಕುಶವಾದದೆಡೆಗಿನ ಚಲನೆಯು ಕಮ್ಯುನಿಸಂ ಸಿದ್ಧಾಂತದಲ್ಲಿ ಇರುವ ಸಮಸ್ಯೆಯೋ? ಅಥವಾ ಕಮ್ಯುನಿಸಂ ಸಿದ್ಧಾಂತವನ್ನು ಅರ್ಥೈಸಿಕೊಳ್ಳುವ ರೀತಿಯಲ್ಲಿ ಎದುರಾಗುವ ಸಮಸ್ಯೆಯೋ? ಎಂಬ ಪ್ರಶ್ನೆ ಕಾಡುತ್ತೆ. 

ಹಾಗೆ ನೋಡಿದರೆ, ಕೇವಲ ಕಮ್ಯುನಿಸಂ ಸಿದ್ಧಾಂತ ಮಾತ್ರವಲ್ಲ, ತನ್ನ ಆಶಯವನ್ನು ತೆಳುವಾಗಿಸಿಕೊಳ್ಳುತ್ತಾ ನಾಯಕರುಗಳ ಸುತ್ತ ಸಾಂಧ್ರಗೊಳ್ಳುವ ಯಾವುದೇ ಸಿದ್ಧಾಂತ ಕೊನೆಗೆ ವ್ಯಕ್ತಿಪೂಜೆಗೆ ರೂಪಾಂತರಗೊಂಡು ಇಂತಹ ಅಧಃಪತನಕ್ಕೆ ತುತ್ತಾಗುತ್ತವೆ. ಆದರೆ ಕಮ್ಯುನಿಸಂ ನಾಯಕತ್ವಗಳ ಅಧಃಪತನ ಯಾಕೆ ಹೆಚ್ಚು ಚರ್ಚೆಯಾಗುತ್ತದೆ ಅಥವಾ ವಿಮರ್ಶೆಗೊಳಪಡುತ್ತದೆ ಎಂದರೆ, ಅದು ಶುರುವಾಗುವ ತುದಿ, ಆಶಯಿಸುವ ಸಮಾಜ ಮತ್ತು ಬಿತ್ತುವ ಕನಸುಗಳು ಉಚ್ಚವಾದವು ಮಾತ್ರವಲ್ಲ, ತೀಕ್ಷ್ಣವೂ ಸ್ಪಷ್ಟವೂ ಆಗಿರುತ್ತವೆ. ಶೋಷಣೆಯನ್ನು ಕೊನೆಗಾಣಿಸುವ ವಿಚಾರದಲ್ಲಿ ಇಷ್ಟು ಸ್ಪಷ್ಟತೆ, ತೀಕ್ಷ್ಣತೆ, ಕಾಳಜಿ ಇರುವ ರಾಜಕೀಯ ಸಿದ್ದಾಂತವೊಂದು ಕೊನೆಗೆ ತಾನೇ ಶೋಷಕ ರೂಪ ಧರಿಸುವುದು ಹಾಗೂ ಆ ಶೋಷಣೆಯನ್ನು ತನ್ನ ಸಿದ್ದಾಂತದ ಅನಿವಾರ್ಯ ಆಯ್ಕೆಯೆಂದು ಸಮರ್ಥಿಸಿಕೊಳ್ಳುವುದು  ಬಹುಶಃ ಬೇರೆಲ್ಲ ಸಿದ್ಧಾಂತಗಳು ರೂಪಾಂತರಕ್ಕಿಂತ ಆಘಾತಕಾರಿಯಾಗಿ ಈ ಸಮಾಜಕ್ಕೆ ಕಾಣುತ್ತದೆ. ಬಂಡವಾಳಶಾಹಿಗಳಿಂದ ಕಾರ್ಮಿಕರ ಮುಕ್ತಿಗೆ ಹೋರಾಡುತ್ತೇವೆ ಎಂದು ಹೊರಟವರು ಕೊನೆಗೆ ಅದೇ ಬಂಡವಾಳಶಾಹಿ ನೆಲೆಗಟ್ಟಿನಲ್ಲಿ ಬಹುಕೋಟಿ ಉದ್ಯಮ ಸ್ವರೂಪದ ಕಂಪನಿಗಳನ್ನು ಕಟ್ಟಲು ಮುಂದಾಗುವುದು; ಪರ್ಯಾಯ ರಾಜಕಾರಣದ ಚರ್ಚೆಯನ್ನು ಮುಂದೊಡ್ಡುತ್ತಲೇ ಸಕ್ರಿಯ ರಾಜಕೀಯ ಪಕ್ಷಗಳ ಪ್ರಚಾರದ ಗುತ್ತಿಗೆ ಕೈಗೆತ್ತಿಕೊಳ್ಳುವುದು; ಮುಪ್ಪಡರಿದರೂ ಟ್ರೇಡ್‌ ಯೂನಿಯನ್‌ಗಳ ನಾಯಕತ್ವವನ್ನು ತಮ್ಮ ನಿಯಂತ್ರಣದಲ್ಲೇ ಉಳಿಸಿಕೊಳ್ಳುವುದು ಮತ್ತು ಕೊನೆಗೆ, ಅದನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ವರ್ಗಾವಣೆ ಮಾಡುವುದು… ದ್ವಂದ್ವಗಳು ಈ ಮಟ್ಟಕ್ಕೆ ರೂಪಾಂತರಗೊಂಡಿವೆ. ಇಂಥಾ ದ್ವಂದ್ವ ಅಥವಾ ಇದಕ್ಕಿಂತಲೂ ಕೆಟ್ಟದಾದ ದ್ವಂದ್ವಗಳು ಬೇರೆ ರಾಜಕೀಯ ಸಿದ್ಧಾಂತ ಅಥವಾ ವೇದಿಕೆಗಳಲ್ಲೂ ನಾವು ಕಾಣಬಹುದು. ಆದರೆ ಕಮ್ಯುನಿಸಂನ `ಉಚ್ಚ ಆಶಯ’ಗಳ ಕಾರಣದಿಂದ ತದ್ವಿರುದ್ಧ ಎನ್ನಬಹುದಾದ ಅದರ ಈ ಬಗೆಯ ರೂಪಾಂತರಗಳು ಹೆಚ್ಚು ಪ್ರಶ್ನೆಗೊಳಪಡುತ್ತವೆ.

ಜಾರ್ಜ್ ಆರ್ವೆಲ್ 1944ರಲ್ಲಿ `ಅನಿಮಲ್ ಫಾರ್ಮ್’ ಕಾದಂಬರಿ ಬರೆದದ್ದು ಕೂಡಾ ಸ್ಟಾಲಿನ್‌ ನೇತೃತ್ವದಲ್ಲಿ ಸೋವಿಯತ್‌ ರಷ್ಯಾದ ಕಮ್ಯುನಿಸಂ ಹೊಂದಿದ ಇಂತಹ ರೂಪಾಂತರವನ್ನು ವಿಡಂಬನೆ ಮಾಡಿ. ಮಿಸ್ಟರ್ ಜೋನ್ಸ್‌ ಎಂಬ ರೈತನ ಅನಾದಾರದ ವಿರುದ್ಧ ಆತನ ಕೃಷಿ ಫಾರ್ಮ್‌ನಲ್ಲಿ ಸಾಕಲಾಗಿದ್ದ ಪ್ರಾಣಿಗಳೆಲ್ಲ ಮನುಷ್ಯರ ವಿರುದ್ಧ ದಂಗೆಯೇಳುವ ಕಥಾಹಂದರದ ಕಾದಂಬರಿ ಅದು. ಪ್ರಾಣಿಗಳಾದ ತಮ್ಮನ್ನು ಮನುಷ್ಯರು ಕೀಳಾಗಿ ನೋಡುತ್ತಾರೆ, ಶೋಷಣೆ ಮಾಡುತ್ತಿದ್ದಾರೆ; ಹಾಗಾಗಿ ಅವರ ಒಡೆತನವನ್ನು ಕೊನೆಗಾಣಿಸಿ, ಪ್ರಾಣಿಗಳೇ ಫಾರ್ಮ್‌ ಹೌಸ್‌ನ ಚುಕ್ಕಾಣಿ ಹಿಡಿಯಬೇಕು; ಆ ಮೂಲಕ `ಎಲ್ಲಾ ಪ್ರಾಣಿಗಳು ಸಮಾನ’ ಎಂಬ ಆಶಯದ ಅಚ್ಚೇ ದಿನಗಳನ್ನು ಕಾಣಬೇಕು ಎಂದು ದಂಗೆಗೆ ಮುಂದಾಗುತ್ತವೆ. ಅದರಲ್ಲಿ ಯಶಸ್ವಿಯಾಗುವ ಪ್ರಾಣಿಗಳು, ಒಂದಷ್ಟು ಕಾಲ ಆದರ್ಶಮಯವಾದ ಜೀವನ ಅನುಭವಿಸಿದರೂ, ತಮ್ಮೊಳಗೇ ಭುಗಿಲೇಳುವ ಸ್ವಾರ್ಥ, ಲಾಲಸೆ, ಮೇಲು-ಕೀಳು, ಅಧಿಕಾರ ದಾಹ, ಮೋಜು-ಮಸ್ತಿ, ಒಳಸಂಚುಗಳ ಚಕ್ರವ್ಯೂಹಕ್ಕೆ ಸಿಲುಕಿ ಮೊದಲಿದ್ದ ಸ್ಥಿತಿಗಿಂತಲೂ ಅರಾಜಕ ದುಸ್ಥಿತಿಗೆ ಬಂದು ತಲುಪುತ್ತವೆ. `ಎಲ್ಲಾ ಪ್ರಾಣಿಗಳು ಸಮಾನ’ ಎಂಬ ಆದರ್ಶದಿಂದ ಶುರುವಾಗಿ, `ಎಲ್ಲಾ ಪ್ರಾಣಿಗಳು ಸಮಾನ; ಆದರೆ ಕೆಲವು ಪ್ರಾಣಿಗಳು ಹೆಚ್ಚು ಸಮಾನ’ ಎಂಬ ಮತ್ತದೇ ಕೆಸರಿಗೆ ಬಂದಿಳಿಯುವ ಆ ಪ್ರಾಣಿಗಳ ಹಿಂಡಿನಲ್ಲಿ ಕತ್ತೆ, ಕುದುರೆ, ನಾಯಿ, ಹಸು, ಕುರಿ, ಕೋಳಿ, ಬೆಕ್ಕು, ಇಲಿಯಂತಹ ವಿಭಿನ್ನ ಪ್ರಾಣಿಗಳಿದ್ದರೂ ದಂಗೆ, ಆಡಳಿತ ಮತ್ತು ಅಧಃಪತನದ ಪ್ರಧಾನ ಪಾತ್ರಧಾರಿಗಳನ್ನಾಗಿ ಜಾರ್ಜ್‌ ಆರ್ವೆಲ್‌ ಆಯ್ದುಕೊಂಡಿರೋದು ಹಂದಿಗಳನ್ನು! ನೆಪೋಲಿಯನ್‌, ಸ್ನೋಬಾಲ್‌, ಸ್ಕ್ವೀಲರ್, ಓಲ್ಡ್‌ ಮೇಜರ್‍‌, ಮಿನಿಮಸ್‌ ಮೊದಲಾದ ಹಂದಿಗಳೇ ಮುಂಚೂಣಿ ಪಾತ್ರಗಳು. ಉಳಿದ ಪ್ರಾಣಿಗಳಲ್ಲಿ ಕನಸನ್ನು ಬಿತ್ತುವುದೂ ಹಂದಿಗಳೆ; ತಮ್ಮ ಸ್ವಾರ್ಥಕ್ಕೆ ಆ ಕನಸುಗಳನ್ನು ಹೊಸಕಿ ಹಾಕುವುದೂ ಹಂದಿಗಳೇ!

ಜಾರ್ಜ್‌ ಆರ್ವೆಲ್ಲನ  ಹಂದಿಗಳ ಕೇಂದ್ರಿತ ರಾಜಕಾರಣದ ಹಿನ್ನೆಲೆಯ ಅನಿಮಲ್‌ ಫಾರ್ಮ್ ಕೃತಿಯ ಬಗ್ಗೆ ಮೆಲುಕು ಹಾಕಲು ಕಾರಣವಾದದ್ದು, ಕರ್ನಾಟಕ ಪೊಲೀಸ್‌ ಇಲಾಖೆಯ ಎಡಿಜಿಪಿಯೊಬ್ಬರು ಬರೆದಿದ್ದಾರೆ ಎನ್ನಲಾದ ಪತ್ರ. ”ಹಂದಿಗಳ ಜತೆ ಗುದ್ದಾಡಬೇಡಿ. ಏಕೆಂದರೆ ಹಂದಿಗಳಂತೆ ನೀವೂ ಕೊಳಕಾಗುತ್ತೀರಿ. ಹಂದಿಗಳು ಅದನ್ನು ಸಂಭ್ರಮಿಸುತ್ತವೆ” ಎಂಬ ಜಾರ್ಜ್‌ ಬರ್ನಾಡ್‌ ಶಾ ಅವರ ಮಾತನ್ನು ಆ ಅಧಿಕಾರಿ ತನ್ನ ಪತ್ರದಲ್ಲಿ ಉಲ್ಲೇಖಿಸಿರುವುದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗ್ತಿದೆ.  ಆ ಅಧಿಕಾರಿ ಕೇಂದ್ರ ಮಂತ್ರಿ ಕುಮಾರಸ್ವಾಮಿವರನ್ನು ಹಂದಿಗೆ ಹೋಲಿಸಿದ್ದಾರೆ ಎಂಬ ವಾದವೇ ಚರ್ಚೆಯ ಮೂಲ. ಬರ್ನಾರ್ಡ್ ಶಾ ಅವರ ಮಾತನ್ನು ಉಲ್ಲೇಖಿಸುವಾಗ, ತನ್ನ ಅನಿಸಿಕೆ-ಆಶಯವನ್ನು ತಮ್ಮ ಸಿಬ್ಬಂದಿಗಳಿಗೆ ದಾಟಿಸುವುದು ಆ ಅಧಿಕಾರಿಯ ಉದ್ದೇಶವಾಗಿತ್ತೋ ಅಥವಾ ವೈಯಕ್ತಿಕವಾಗಿ ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಸಿ ಹೀಯಾಳಿಸುವುದು ಉದ್ದೇಶವಾಗಿತ್ತೋ ಗೊತ್ತಿಲ್ಲ. ಆದರೆ ಅದನ್ನು ತನಗೇ ಹೇಳಿರುವುದು ಎಂದು ಕುಮಾರಸ್ವಾಮಿಯವರು ಕಳವಳಗೊಂಡಿರುವುದು ಮಾತ್ರ ತಮಾಷೆಯಾಗಿದೆ. ಒಟ್ಟಿನಲ್ಲಿ, ರಾಜಕೀಯ ವಿದ್ಯಮಾನಗಳನ್ನು ಹಂದಿಗಳಿಗೆ ತುಲನೆ ಮಾಡಿ ನೋಡುವುದು ಇದೆ ಮೊದಲಲ್ಲ ಅನ್ನೋದನ್ನು ಹೇಳಲು ಇಷ್ಟೆಲ್ಲ ಹೇಳಬೇಕಾಯ್ತು.

ಅಷ್ಟಕ್ಕೂ ಹಂದಿಯನ್ನು ನಾವು ಕೀಳೆಂದು ಭಾವಿಸಿರುವುದು ಅದರ ಜೀವನಶೈಲಿ, ಆಹಾರ ಪದ್ಧತಿಯಿಂದ ಇರಬಹುದು. ಇವತ್ತು ಆಹಾರ ರಾಜಕಾರಣದ ಬಗ್ಗೆ ಮಾತಾಡುವಷ್ಟು ಪ್ರಬುದ್ಧತೆಯನ್ನು ಸಂಪಾದಿಸಿಕೊಂಡಿರುವ ನಾವು, ಆಹಾರ ಕ್ರಮದ ಕಾರಣಕ್ಕೆ ಹಂದಿಯನ್ನು ಹೀಗಳೆವುದೂ ನಮ್ಮ ದ್ವಂದ್ವವಾಗಿಬಿಡುತ್ತೆ. ಅಸಹ್ಯ, ಹೊಲಸು, ಕೀಳು ಎನ್ನುವುದು ನಮ್ಮ ಗ್ರಹಿಕೆಯನ್ನು ಆಧರಿಸಿರುತ್ತದಷ್ಟೆ. ಗ್ರಹಿಕೆಗಳು ಬದಲಾದಂತೆ, ಇವುಗಳ ವ್ಯಾಖ್ಯಾನಗಳೂ ಬದಲಾಗುತ್ತವೆ. ಕೊನೆಗೊಂದು ದಿನ, ಇಂತಹ ಹೋಲಿಕೆ, ವಿಂಗಡಣೆಗಳೆ ಅಸಂಬದ್ಧ ಎನಿಸಲೂಬಹುದು.

ಅಂದಹಾಗೆ, ಒಬ್ಬ ರಾಜಕಾರಣಿಯನ್ನು ಹಂದಿಗೆ ಹೋಲಿಕೆ ಮಾಡಿದ್ದು ಸರಿಯೋ ತಪ್ಪೋ ಎಂಬ ಪ್ರಶ್ನೆಗೆ, ನಮ್ಮ ನಡುವಿನ ಪ್ರಜ್ಞಾವಂತ ವ್ಯಂಗ್ಯಚಿತ್ರಕಾರ ಪಿ ಮೊಹಮ್ಮದ್ ಅವರ ಕಾರ್ಟೂನ್‌ ಉತ್ತರವಾಗಬಹುದು. ಲೋಕಾಯುಕ್ತ ಪೊಲೀಸ್‌ ಠಾಣೆಗೆ ಬರುವ ಹಂದಿಯೊಂದು, “ಹಲೋ! ಎಕ್ಸ್‌ಕ್ಯೂಸ್‌ಮಿ! ಒಂದು ಮಾನಹಾನಿ ದೂರು ದಾಖಲಿಸಬೇಕಿತ್ತು” ಎಂದು ಹೇಳುವ ಕಾರ್ಟೂನ್ ಅದು. ತನ್ನನ್ನು ಒಬ್ಬ ರಾಜಕಾರಣಿಗೆ ಹೋಲಿಸಿದ್ದಕ್ಕೆ ತನ್ನ ಮಾನಹಾನಿಯಾಗಿದೆ ಎಂದು ಒಂದು ಹಂದಿ ಕೂಡಾ ಭಾವಿಸಬಹುದಾದ ದುಸ್ಥಿತಿಗೆ ರಾಜಕಾರಣವನ್ನು ನಮ್ಮ ರಾಜಕಾರಣಿಗಳು ತಂದು ನಿಲ್ಲಿಸಿದ್ದಾರೆ ಅನ್ನೋದು ಮಾತ್ರ ಸತ್ಯ. ಇಲ್ಲಿ ಕುಮಾರಸ್ವಾಮಿ ನೆಪ ಮಾತ್ರ!

ಜಾರ್ಜ್ ಆರ್ವೆಲ್‌ ಇವತ್ತು ಬದುಕಿದ್ದಿದ್ದರೆ ಬಹುಶಃ ಹಂದಿಗಳ ಕ್ಷಮೆ ಕೇಳುತ್ತಿದ್ದರೇನೊ….

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply