ಊಳಿಗಮಾನ್ಯ ಪ್ರಭುತ್ವ ಸಂಸ್ಕೃತಿಯು ಮೇಲುಗೈ ಸಾಧಿಸಿದರೆ ಅದು ನಾಗರೀಕತೆಯ ಪತನ

2 years ago

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಸಂಸ್ಕೃತಿಯೊಂದು ರೂಪುಗೊಳ್ಳಬೇಕು,ಇದು ನಾಗರೀಕತೆಯ ವಿಕಾಸದ ಲಕ್ಷಣ. ಇದಕ್ಕೆ ವ್ಯತಿರಿಕ್ತವಾಗಿ  ಪ್ರಜಾಸತ್ತಾತ್ಮಕ ರಚನೆಯನ್ನು ಬಳಸಿಕೊಂಡು ಊಳಿಗಮಾನ್ಯ ಪ್ರಭುತ್ವ ಸಂಸ್ಕೃತಿಯು ಮೇಲುಗೈ ಸಾಧಿಸಿದರೆ ಅದು ನಾಗರೀಕತೆಯ ಪತನ ಅಥವಾ ಇತಿಹಾಸ ಅಧೋಮುಖದ ಚಲನೆಯ ಲಕ್ಷಣ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಶಾಹಿಯ ವೈಭವೀಕರಣ ಬೇಡವೆಂದು, ಆನೆ, ಅಂಬಾರಿ, ಅರಮನೆ,  ಇವುಗಳೆಲ್ಲವೂ ರಾಜಶಾಹಿಯನ್ನು ಮತ್ತೆ ಜನಸಾಮಾನ್ಯರ ಮನಸ್ಸಿನಲ್ಲಿ ಸ್ಥಾಪಿಸುವ ಪ್ರಯತ್ನಗಳೆಂದು, ಹೀಗೆ ರಾಜಶಾಹಿ ಊಳಿಗಮಾನ್ಯತೆಯ ಮರುಸ್ಥಾಪನೆಯ ನಿಟ್ಟಿನಲ್ಲಿ ನಮ್ಮ ವರ್ತಮಾನದ ಲೇಖಕ, ಸೃಜನಶೀಲರು ಸಾಧನಗಳಾಗಬಾರದೆಂದು ಆಶಿಸಿ ಕವಿ- ಲೇಖಕರು ದಸರಾ ಕವಿಗೋಷ್ಠಿಯಲ್ಲಿ‌ ಭಾಗವಹಿಸದಿರಲಿ‌ ಎಂದು ಎರಡು ದಿನಗಳ ಹಿಂದೆ ಒಂದು ಬರೆಹ ಈ ಮುಖಪುಸ್ತಕದಲ್ಲಿ ಬರೆದಿದ್ದೆ. ನನ್ನ ವಿಚಾರಕ್ಕೆ ಅನೇಕರು ನೇರವಾಗಿ ಸಹಮತ ವ್ಯಕ್ತಪಡಿಸಿದ್ದರೆ ಭಿನ್ನಮತವಿರುವವರು ಅಷ್ಟೇ ನೇರವಾಗಿ ನನಗೆ ಪ್ರತಿಕ್ರಿಯೆ ನೀಡದೇ ತೆರೆಮರೆಯಲ್ಲಿ  ನಂಜುಕಾರಿಕೊಂಡಿದ್ದಾರೆ.

ಇದೊಂದು ಚರ್ಚೆ. ನನ್ನ ಅಭಿಪ್ರಾಯ ಸರ್ವಮಾನ್ಯ ಎಂತಲ್ಲ. ಭಿನ್ನ ಅಭಿಪ್ರಾಯವೂ ವಿಚಾರವನ್ನು ಚರ್ಚಿಸುವಲ್ಲಿ ಮಹತ್ವದ್ದು. ಇಲ್ಲವೆಂತಲ್ಲ.

ಮುಖ್ಯವಾಗಿ ದಸರಾ ಗೋಷ್ಠಿಗಳ ಬಗ್ಗೆ ಬರೆಯುವಾಗ ನನ್ನ ಮನಸ್ಸಿನಲ್ಲಿ ಯಾರೆಂದರೆ ಯಾವ ಒಬ್ಬ ಲೇಖಕ, ಕವಿ ಕಲಾವಿದ ಯಾರೊಬ್ಬರೂ ವ್ಯಕ್ತಿಗತವಾಗಿ ನನ್ನ ಮನಸ್ಸಿನಲ್ಲಿರಲಿಲ್ಲ. ಹಾಗೆ ನೋಡಿದರೆ ನಾನು ಬಹುವಾಗಿ ಪ್ರೀತಿಸುವ ಕವಿಮಿತ್ರರು, ನಾಡು ಹೆಮ್ಮೆ ಪಡುವ ಚಿಂತಕರು ದಸರಾದ ಗೋಷ್ಠಿಗಳಲ್ಲಿದ್ದರು, ಇದ್ದಾರೆ. ನಾನು ಹಾಗೆ ಬರೆಯುವಾಗಲೂ ಮತ್ತು ಈಗಲೂ ಅವರುಗಳು ಈ ಗೋಷ್ಠಿಗಳಲ್ಲಿ ಭಾಗವಹಿಸಿಬಂದರೂ ಅವರುಗಳ ಮೇಲಿನ ನನ್ನ ಆಪ್ತತೆ, ಅಭಿಮಾನ ಗೌರವಗಳು ಕಿಂಚಿತ್ತೂ ಕಡಿಮೆಯಾಗಲಾರವು. ಏಕೆಂದರೆ ನಾನು ವಿಚಾರ ಕುರಿತು ಬರೆದಿದ್ದೆನೇ ಹೊರತು ವ್ಯಕ್ತಿಗಳನ್ನು ಗಮನದಲ್ಲಿಟ್ಟು ಅಲ್ಲ.

ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ? ಹಾಗೆ ಬರೆದ ಮರುದಿನ ಬೆಳಿಗ್ಗೆ ಮೂರು ದಶಕಗಳಿಂದ ನನ್ನನ್ನು ಬಲ್ಲ ಹಿರಿಯ ಮಿತ್ರರೊಬ್ಬರು ನನ್ನ ವಾಟ್ಸಪ್ ನಲ್ಲಿ, ನನ್ನ ಬರೆಹದ ಬಗ್ಗೆ “ನನಗೂ ಮಿತ್ರರಾಗಿರುವ ಅವರ ಮಿತ್ರ”ರೊಬ್ಬರು ತಮಗೆ ಹೀಗೆ ಬರೆದಿದ್ದಾರೆಂದು ತಿಳಿಸಿದರು. ಅದು ಹೀಗಿದೆ ;

“ಅಲ್ಲ ಕಣಯ್ಯ ಗತ ವೈಭವವನ್ನು ನೆನಪಿಸಿಕೊಳ್ಳಬಾರದೆ? ಸಂಭ್ರಮ ಪಡಬಾರದೆ? ಅಪ್ಪ ಅಮ್ಮನ ಫೋಟೋ ಇಟ್ಟು ಪೂಜೆ ಮಾಡಿದರೆ, ಅವರನ್ನು ನೆನಪಿಸಿಕೊಂಡರೆ ತಪ್ಪಾ? ದಸರಾನು ಹಾಗೆ ತಾನೆ? ಉಗಿ ಅವನಿಗೆ. ಅವರು ಮಸೀದಿಗೆ ಹೋದರೆ ಅವರ ದೇವರ ಆರಾಧಿಸಿದರೂ ಪ್ರಗತಿಪರರು. ನಾವು ದೇವರು ದಿಂಡರು ಅನ್ನಂಗಿಲ್ಲ. ಕುಂಕುಮ ಹಚ್ಕಳಂಗಿಲ್ಲ, ಕೋಮುವಾದಿಗಳು! ಇದೆಂಥ ನ್ಯಾಯ? ಅವನಿಗೆ ಉತ್ತರ ಕೊಡು”

ನಾನು ಬರೆದಿದ್ದು ಜನತಂತ್ರ ಮತ್ತು ರಾಜತಂತ್ರದ ಬಗ್ಗೆ. ಕವಿಗೋಷ್ಠಿ ಇತ್ಯಾದಿ ಬಗ್ಗೆ. ಆದರೆ ಈ ಮಹಾಶಯರು ಅಲವತ್ತು ಕೊಂಡಿರುವುದು ಗತವೈಭವ, ಅಪ್ಪ ಅಮ್ಮನ ಫೋಟೋ, ಪೂಜೆ, ಮಸೀದಿ, ಕುಂಕುಮ, ಕೋಮುವಾದಿ… ಇತ್ಯಾದಿ. ಇದನ್ನು ಓದಿದ ತಕ್ಷಣ ಇವರ ಮೆದುಳಿನಲ್ಲಿ ತುಂಬಿಕೊಂಡಿರುವ ನಂಜು ಅರ್ಥವಾಗಿಬಿಡುತ್ತದೆ. ಮೈಸೂರು ದಸರಾ ಉತ್ಸವದಲ್ಲಿ ಯಾರ ಅಪ್ಪ ಅಮ್ಮನ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ…? ನನಗೆ ಗೊತ್ತಿಲ್ಲ. ಯಾರ ಅಪ್ಪ ಅಮ್ಮ ಮತ್ತು  ದೇವರ ಪೂಜೆಗಳಿಗೂ ನಾನು ಯಾವತ್ತೂ ವಿರೋಧಿಸಿಲ್ಲ. ಆದರೆ ನಾನು ದಸರಾ ಬಗ್ಗೆ ಪ್ರಶ್ನೆ ಮಾಡಿದರೆ ಇವರು ನನಗೆ ಮಸೀದೆಯನ್ನೇಕೆ ತೋರಿಸಿ ತಮ್ಮ ಸುಪ್ತ ಕ್ರೌರ್ಯಕ್ಕೆ ಸಮರ್ಥನೆ ತಂದುಕೊಳ್ಳುತ್ತಿದ್ದಾರೆ? ಪೀರ್ ಬಾಷ ಎಂಬ ಹೆಸರಿನ ಮೂಲಕ ಹೇಳಿದ್ದನ್ನೇ ಬೇರೊಂದು ಹೆಸರಿನ ಮೂಲಕ ಹೇಳಿದ್ದರೆ ಹೀಗೆ ಇವರು ಪ್ರತಿಕ್ರಿಯಿಸುತ್ತಿದ್ದರೆ? ನಾನು ಆಡದೇ ಇರುವ ಮಾತನ್ನು ನನ್ನ ಹೆಸರಿಗೆ ಲಗತ್ತಿಸಿ “ಹಣಿಯಲು” ಹೊಂಚು ಹಾಕುವ ಇವರು ಮಿತ್ರರಾಗಿರಲು ಸಾಧ್ಯವೇ? ಇದು ಕೇವಲ ನನ್ನ ವೈಯಕ್ತಿಕ ಪ್ರಶ್ನೆಯಾಗಿ ಇದನ್ನು ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಈ ಹೊತ್ತಿಗೂ ವೈಚಾರಿಕ ಸಂವಾದವೊಂದು ಸಾಧ್ಯವಾಗದ, ಸುಪ್ತ ಮತೀಯ ಪರಿಸರವೊಂದು ಮಿತ್ರರೆಂಬ ಸ್ಪೇಸನ್ನೂ ಹೇಗೆ ಆಕ್ರಮಿಸಿದೆ ಎಂಬುದನ್ನು ಹೇಳುವುದಕ್ಕಾಗಿ.

ಇದಕ್ಕಿಂತಲೂ ನೋವು ನೀಡಿದ್ದು ನನ್ನ ಜಿಲ್ಲೆಯ ಮಾಜಿ ಹೋರಾಟಗಾರ ಪಿ.ಆರ್.ವೆಂಕಟೇಶ್ ಅವರ ಬರೆಹ. ಕಳೆದ 30 ವರ್ಷಗಳಿಂದ ಇವರನ್ನು ಗೌರವಿಸುತ್ತಿದ್ದೇನೆ. ಈ ಗೌರವ ನೀಡುತ್ತಿರುವುದು ಹಿಂದೊಂದು ಕಾಲಘಟ್ಟದಲ್ಲಿ ಇವರು ರೈತ ಚಳುವಳಿಯನ್ನು ಸಂಘಟಿಸಿದ್ದರು ಎಂಬ ಕಾರಣಕ್ಕೆ. ಇವರ ಮನಸ್ಸಿನಲ್ಲಿ ತುಂಬಿಕೊಂಡಿರುವ ನಂಜಂತೂ ಘಾಸಿಗೊಳಿಸುವಂಥಾದ್ದು. ಸಂದರ್ಭವಿದ್ದಾಗ ಅತ್ಯಂತ ಪ್ರೀತಿ ತೋರುವವರಂತೆ ಅಸಹಜ ಆಪ್ತತೆಯನ್ನು, ನಾಟಕೀಯವಾಗಿ ಪ್ರದರ್ಶಿಸುವ ಈ ಮನುಷ್ಯ ತಾನು ಈಗಲೂ ” ಕಮ್ಯೂನಿಸ್ಟ್‌ ” ಎಂದೂ, ನೆರೋದನನ್ನು ಸಾಕಷ್ಟು ಓದಿಕೊಂಡವರೆಂತಲೂ‌ ನಮ್ಮಂತಹ ಹಲವರಿಂದ ಅಭಿಮಾನ ದಕ್ಕಿಸಿಕೊಂಡವರು. ಇಂಥವರಲ್ಲಿಯೂ ಈ ಬಗೆಯ ದ್ವೇಷ, ಅಸೂಯೆ ತುಂಬಿಕೊಂಡಿದೆ ಎಂದರೆ ಇನ್ನೇನು?

ನಾನು  ಸಿಂಡಿಕೇಟ್ ಸದಸ್ಯನಾಗಿ, ಘಟಿಕೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದನ್ನು ಇವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಮುಂದುವರೆದು ನಮ್ಮೂರಿನ “ಉರುಸು” ಉತ್ಸವದಲ್ಲಿ ನಾನು ಭಾಗವಹಿಸುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಮತ್ತದೇ ಮನಸ್ಥಿತಿ ಮರುಕಳಿಸಿದೆ. ನಾನು  ಅರಮನೆಯ ದಸರಾ ಪ್ರಶ್ನಿಸಿದರೆ, ಉರುಸಿನ ಮೂಲಕ ನನ್ನ ಧಾರ್ಮಿಕ ಅನನ್ಯತೆಯನ್ನು ಸಮೀಕರಿಸಿ “ಹಣಿಯುವ” ಸುಪ್ತ ಕ್ರೌರ್ಯ! ನನ್ನನ್ನು ಒಂದು‌ ಧರ್ಮದ ಅನನನ್ಯತೆಯಲ್ಲಿ  ಸಿಕ್ಕಿಸಲು ಇವರಿಗೆ ಸಾಧ್ಯವಾಗಿರುವುದು ಇವರುಗಳು ತಾವು ಇನ್ನೊಂದು ಧರ್ಮದಲ್ಲಿ ಸಿಕ್ಕಿಸಿಕೊಳ್ಳುವ ಮೂಲಕವೇ ಅಲ್ಲವೇ? ಪೀರ್ ಬಾಷನನ್ನು ಇದಿರುಗೊಳ್ಳುವ ಇವರ “ಮತೀಯ” ಉನ್ಮಾದ ನನ್ನಲ್ಲಿ ವೈಯಕ್ತಿಕ ವಾಗಿ ಕಿಂಚಿತ್ತೂ ಭಯವಿಲ್ಲದ ಸಾಮುದಾಯಿಕ ನೆಲೆಯ ವಿಷಾದವನ್ನು ಸಾಮಾಜಿಕವಾದ ಆತಂಕವನ್ನು ಮೂಡಿಸಿದೆ. ಈ ಇಬ್ಬರದು ಇಲ್ಲಿ ಪ್ರಾತಿನಿಧಿಕತೆ ಮಾತ್ರ ಎಂದು ಗ್ರಹಿಸಿದರೆ ಮಾತ್ರ ನಮ್ಮ ಸಮಾಜದ ಪದರುಗಳಲ್ಲಿ ಅಡಗಿರುವ ನಂಜಿನ‌ ಬೀಜ ಬೇರುಗಳ ಅರಿವಾದೀತು.

ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿರುವುದು: ಪೀರ್ ಬಾಷ ಆದ ನಾನು ಅರಮನೆ ದಸರಾ ಪ್ರಶ್ನಿಸಿದರೆ ನನ್ನನ್ನು ಮಸೀದಿಯ ಮೂಲಕ ನನ್ನನ್ನು ಗ್ರಹಿಸಿ, ಇಡೀ ಚರ್ಚೆಯನ್ನೇ ಕದಡುವುದು, ಹಾಗೂ “ನನ್ನಂಥವರು” ವೈಚಾರಿಕ ವಾಗ್ವಾದ ಮಾಡಲಾರದಂತೆ ಮನಸ್ಥೈರ್ಯ ಕುಗ್ಗಿಸುವುದು.

ನಿಜವೆಂದರೆ, ನಾನು ಎಲ್ಲಿಯೂ ಜನ ಸಾಮಾನ್ಯರು ಆಚರಿಸುವ ದಸರಾವನ್ನು ವಿರೋಧಿಸಿದವನಲ್ಲ, ಮಾತ್ರವಲ್ಲ ಈತನಕವೂ ವಿಜಯದಶಮಿಯ ದಿನ “ಬನ್ನಿ ವಿನಿಮಯ”ಯದ ಆಚರಣೆಯನ್ನು ಸಾಮುದಾಯಿಕ ಬದುಕಿನ ಸೌಹಾರ್ದ ನೆಲೆಯಲ್ಲಿ ಆಚರಣೆಯಲ್ಲಿಟ್ಟಿದ್ದೇನೆ. ರಕ್ಷಾಬಂಧನವನ್ನು ಕೋಮುವಾದೀಕರಣಗೊಳಿಸುವ ಎಲ್ಲ ಹಿನ್ನೆಲೆ ಗೊತ್ತಿದ್ದೂ, ಈತನಕವೂ ನನ್ನ ಹಲವರು ಭಾವ-  ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡಿದ್ದೇನೆ. ಅಂದರೆ ಇದೆಲ್ಲವೂ ಸಹಜ ಸಂಬಂಧಗಳ ನನ್ನ ಸಾಮುದಾಯಿಕ ಜೀವನ ಕ್ರಮವೇ ಆಗಿದೆ. ಅಷ್ಟಾಗಿಯೂ ಒಂದು ಚರ್ಚೆಯನ್ನು ತಾತ್ವಿಕವಾಗಿ ಮುಂದುವರೆಸುವ ಯೋಗ್ಯತೆಯಿಲ್ಲದ ಹೇಡಿಗಳು ನಮ್ಮಂಥವರನ್ನು ಬಾಯಿಮುಚ್ಚಿಸಲು ಎಂತಹ ಹತ್ಯಾರಗಳನ್ನು ಬಳಸುತ್ತಾರೆ ಎಂಬುದರ ಚಾಲ್ತಿಯಲ್ಲಿರುವ ವಿಧಾನ ಇದು.

ಸೈದ್ಧಾಂತಿಕ/ ತಾತ್ವಿಕ ಸಂವಾದಗಳನ್ನು ಕೂಡ, ” ಮುಸ್ಲಿಂ” ಹಿನ್ನೆಲೆಯ ಅನನ್ಯತೆಯಲ್ಲಿರುವವರು ಮುಂದುವರೆಸಲಾಗದ ಬಿಕ್ಕಟ್ಟು ಇದು. ಇದು ನಮ್ಮ ಬೌದ್ಧಿಕ ಜಗತ್ತಿನಲ್ಲಿಯೂ ಮರೆಮಾಚಿ ಬೆನ್ನಿಗೆ ಬಿಡಲಾಗುತ್ತಿರುವ ಮಾರಕಾಸ್ತ್ರ. ಇಷ್ಟು ಹೇಳಿದ್ದೇನೆ. ಹೆದರಿದ್ದೇನೆ ಎಂದಲ್ಲ. ವಾಗ್ವಾದ ಮುಂದುವರೆಸಲಾರೆ ಎಂದಲ್ಲ. ಮಿತ್ರರು, ಒಡನಾಡಿಗಳು ಎಂಬವರ ಮೆದುಳಿನಲ್ಲಿಯೂ ಹೇಗೆ ನಂಜು ತುಂಬಿಕೊಂಡಿದೆ ಎಂಬುದನ್ನು ಹೇಳಲಷ್ಟೆ.

ಜನರ ಎಲ್ಲ ಹಬ್ಬಗಳೂ ನನ್ನ ಹಬ್ಬಗಳೆ. ನಮ್ಮ ಜನ ಹಳ್ಳಿಹಳ್ಳಿಗಳಲ್ಲಾಚರಿಸುವ ದಸರಾ, ಯುಗಾದಿ, ಉರುಸು, ಜಾತ್ರೆ… ಎಲ್ಲವೂ ನನ್ನ ಉತ್ಸವಗಳೆ. ಆದರೆ ಯಾವ ಹಬ್ಬಗಳಲ್ಲಿ ಊರ ಧಣಿಯಾದಿಯಾಗಿ, ನಾಡಿನ ಮೃತದೊರೆಯ ಅವಶೇಷವೂ ನಮ್ಮ ಜನರ ವಿವೇಕವನ್ನು ತೊತ್ತಾಗಿಟ್ಟು ಮೆರೆವ ಯಾವ ಉತ್ಸವವೂ ನನ್ನ ಉತ್ಸವವಲ್ಲ. ಅದು ನಮ್ಮ ನಯವಾದ ಸಾಂಸ್ಕೃತಿಕ ಅಸ್ತ್ರಗಳಿಂದ ನಮ್ಮ ಜನ ಸಮುದಾಯಗಳ ಬದುಕನ್ನು ಈಡು ಮಾಡುವ ಬೇಟೆ ಎಂಬ ಅರಿವು ಇದ್ದೇ ಇದೆ. ಈ ಅರಿವು ಇರುವವರು ನನ್ನ ಸಂಗಾತಿಗಳು. ಸಾಂಸ್ಕೃತಿಕ ಪ್ರಭುತ್ವದ ತೊತ್ತುಗಳಾಗುವವರಿಗೆ, ಜನದ್ರೋಹವೆಸಗುವ ಸ್ವಾತಂತ್ರವೂ ಈ ಜನತಂತ್ರದಲ್ಲಿ ಇದ್ದೇ ಇದೆ.

– ಪೀರ್ ಭಾಷಾ, ಸಾಮಾಜಿಕ ಹೋರಾಟಗಾರರು

Leave a Reply