ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗೆದ್ದರೆ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ: ಕೆ.ಎನ್.ರಾಜಣ್ಣ

3 years ago

#Congress #LokSabha #elections #existence #stategovernment #threatened #KNRajanna

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮೂವರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂದು ಪ್ರತಿಪಾದಿಸಿ ಸಂಚಲನ ಮೂಡಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಮ್ಮ ಪ್ರತಿಪಾದನೆಗೆ ಹಲವು ಸಕಾರಣ ನೀಡಿದ್ದು, ಇದು ಅಗತ್ಯ ಎಂದಿದ್ದಾರೆ.

ನಾನು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಯಾವುದೋ ನಾಯಕರಿಗೆ ಅವಕಾಶ ಕೊಡಿಸಲು ನಾನು ಪ್ರಯತ್ನಿಸುತ್ತಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹುದ್ದೆಯ ಪ್ರಾಬಲ್ಯವನ್ನು ಕಡಿಮೆ ಮಾಡುವ ಸಲುವಾಗಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗೆದ್ದರೆ ರಾಜ್ಯಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಶತಾಯಗತಾಯ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಈ ನಿಟ್ಟಿನಲ್ಲಿ ಜಾತಿವಾರು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು ಎಂಬುದು ತಮ್ಮ ಪ್ರತಿಪಾದನೆ. ಇದರ ಹಿಂದೆ ಯಾರನ್ನೋ ದುರ್ಬಲಗೊಳಿಸುವ ಉದ್ದೇಶ ಇಲ್ಲ ಎಂದು  ತಿಳಿಸಿದರು.

ಈಗಿನ ಚುನಾವಣಾ ರಾಜಕೀಯ ಜಾತಿ ಮತ್ತು ಹಣದ ಮೇಲೆಯೇ ನಿಂತಿದೆ. ಹಿಂದುಳಿದ ವರ್ಗದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಪರಿಶಿಷ್ಟ, ಅಲ್ಪಸಂಖ್ಯಾತ ಮತ್ತು ಲಿಂಗಾಯತ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಆದ್ಯತೆ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೆ, ಸರ್ಕಾರ ಜನಮನ್ನಣೆ ಕಳೆದುಕೊಂಡರೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಬರುವ ರಾಜಕೀಯ ಅಂದಾಜು ತಮ್ಮದಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬಿ.ಡಿ.ಜತ್ತಿ ಅವರ ಅವಧಿಯಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿಲ್ಲ ಎಂಬ ಕಾರಣಕ್ಕಾಗಿ ಆಗಿನ ಪ್ರಧಾನಿ ಚರಣ್‍ಸಿಂಗ್ 6 ರಾಜ್ಯಗಳ ಕಾಂಗ್ರೆಸ್ ಆಡಳಿತವನ್ನು ವಜಾಗೊಳಿಸಿದ್ದರು. 1985 ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿಲ್ಲ ಎಂಬ ಕಾರಣಕ್ಕೆ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿಧಾನಸಭೆ ವಿಸರ್ಜನೆ ಮಾಡಿ ಹೊಸದಾಗಿ ಜನಾದೇಶ ಪಡೆದುಕೊಂಡರು. ಇತಿಹಾಸ ಮರುಕಳಿಸಬಾರದು ಎಂಬ ಕಾಳಜಿಯಿಂದ ತಾವು ಸಲಹೆ ನೀಡಿದ್ದಾಗಿ ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ದೇಶದ ಹಿತದೃಷ್ಟಿಯಿಂದ ಅತ್ಯಗತ್ಯ. ರಾಜ್ಯದಲ್ಲೂ ಹೆಚ್ಚು ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ ಎಂದರು.

ತಮ್ಮ ಹೇಳಿಕೆಗಳನ್ನು ಅನಗತ್ಯವಾಗಿ ದಾರಿ ತಪ್ಪಿಸಲಾಗುತ್ತಿದೆ. ಯಾರನ್ನೂ ವೈಭವೀಕರಿಸಲು ಅಥವಾ ಮತ್ತ್ಯಾರನ್ನೂ ದುರ್ಬಲಗೊಳಿಸಲು ನಾನು ಮಾತನಾಡುತ್ತಿಲ್ಲ. ಸಮುದಾಯವಾರು ಆದ್ಯತೆ ನೀಡಬೇಕೆಂಬುದು ತಮ್ಮ ಒತ್ತಡ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್‍ನನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ತಿಳಿಸಿದರು.

Leave a Reply