ಬೆಂಗಳೂರು: ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗುತ್ತಿರುವುದು ಮತ್ತು ರಾಜ್ಯದ ಯುವಜನ ಉದ್ಯೋಗ ಕಳೆದುಕೊಳ್ಳುತ್ತಿರುವ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಕ್ತಪಡಿಸಿರುವ ಕಳವಳ ರಾಜ್ಯದ ಆರುವರೆ ಕೋಟಿ ಜನತೆಯ ಕೊರಳ ದನಿಯಾಗಿದೆ. ಕಳೆದ ಏಳು ವರ್ಷಗಳಿಂದ ನಾನು ಇದನ್ನು ಹೇಳುತ್ತಲೇ ಬಂದಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಮಾಧುಸ್ವಾಮಿ ಕೇಂದ್ರದ ಸರ್ವಾಧಿಕಾರಿ ಹೇಳಿಕೆ ಕುರಿತು ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹೊಂದಿರುವ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿರುವುದಕ್ಕೆ ಇತ್ತೀಚೆಗೆ ಜಾರಿಗೊಳಿಸಿರುವ ರೈತರ ಪಾಲಿನ ಮರಣಶಾಸನಗಳಾಗಿರುವ ಕೃಷಿ ಕಾಯ್ದೆ ತಿದ್ದುಪಡಿಗಳೇ ಸಾಕ್ಷಿಯಾಗಿವೆ ಎಂದಿದ್ದಾರೆ.
ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಕಾನೂನುಗಳಿಗೆ ಏಕಪಕ್ಷೀಯವಾಗಿ ತಿದ್ದುಪಡಿ ಮಾಡಿ ಅದನ್ನು ಅಂಗೀಕರಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರುತ್ತಿರುವ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗಲು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ಅವರು ಕಿಡಿಕಾರಿದ್ದಾರೆ.
2020-21ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ರೂ.8538 ಕೋಟಿ ತೆರಿಗೆ ಪಾಲು ಮತ್ತು ರೂ.1310 ಕೋಟಿ ಕೇಂದ್ರ ಅನುದಾನ ಬಂದಿಲ್ಲ. ಇದರ ಜೊತೆ ರೂ.5495 ಕೋಟಿ ವಿಶೇಷ ಅನುದಾನಕ್ಕೂ ಕೊಕ್ಕೆ ಹಾಕಲಾಗಿದೆ. ನಮ್ಮ 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ ಎಂದು ಹೇಳಿದ್ದು #ಸರ್ವಾಧಿಕಾರಿಮೋದಿ ಪೋಸ್ಟ್ ಮಾಡಿದ್ದಾರೆ.



