ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ನಾನು ಕೂಡ ಇದ್ದೇನೆ: ಪರಮೇಶ್ವರ್

6 months ago

ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ನಾನು ಕೂಡ ಇದ್ದೇನೆ ಎಂದು ಹೇಳಿದ್ದಾರೆ. 

ಮತ್ತೊಂದೆಡೆ ಶಾಸಕರ ಬೆಂಬಲ ಇಲ್ಲದೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಇದರ ಜೊತೆಗೆ ಹೈಕಮಾಂಡ್ ಆಶೀರ್ವಾದ ಕೂಡ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು ತೀವ್ರ ಕುತೂಹಲ ಮೂಡಿಸಿದೆ. 

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನವೆಂಬರ್ ನಲ್ಲಿ ಎರಡೂವರೆ ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸುತ್ತಿದ್ದು, ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ ರಚನೆ ವಿಚಾರ ಕುತೂಹಲ ಮೂಡಿಸಿದೆ. 

ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಸಮಯದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿದೆ. ಅದರಂತೆ ಉಳಿದಿರುವ ಎರಡೂವರೆ ವರ್ಷಗಳ ಅಧಿಕಾರ ಅವಧಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಇದರ ನಡುವೆ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟಕ್ಕೆ ಹೊಸ ರೂಪ ನೇತೃ ತೀರ್ಮಾನಿಸಿದ್ದು, ದೊಡ್ಡ ಮಟ್ಟದಲ್ಲಿ ಸರ್ಜರಿಗೆ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಹೊದ್ಯೋಗಿಗಳಿಗೆ ಭೋಜನಕೂಟ ಏರ್ಪಡಿಸಿದ್ದು ಕುತೂಹಲ ಮೂಡಿಸಿದೆ.

ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನಡೆಯುವ ಗೃಹಮಂತ್ರಿ ಡಾ. ಜಿ ಪರಮೇಶ್ವರ್ ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ. ಆದರೆ, ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ನಾನು ಎರಡನೇ ಸ್ಥಾನದಲ್ಲಿದ್ದೇನೆ ಎಂದರು.

ನಾನೇಕೆ ಮುಖ್ಯಮಂತ್ರಿಯಾಗಬಾರದು ಎಂದು ಸಹಜವಾಗಿ ಕೇಳಿದ್ದೇನೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಬಹಳಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ ಎಂದರು.

ಸದ್ಯಕ್ಕೆ ಮುಖ್ಯಮಂತ್ರಿಯ ಹುದ್ದೆಯ ಸ್ಪರ್ಧೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಇಷ್ಟಾಗಿಯೂ ಹೈಕಮಾಂಡ್ ಯಾರನ್ನೇ ಮುಖ್ಯಮಂತ್ರಿ ಮಾಡಿದ್ದರೂ ನಾವೆಲ್ಲಾ ಅವರಿಗೆ ಜೈ ಎನ್ನುತ್ತೇವೆ ಎಂದರು.

ಪಕ್ಷ ಅಧಿಕಾರಕ್ಕೆ ಬಂದಾಗ ಶಾಸಕರ ಅಭಿಪ್ರಾಯ ಪಡೆದು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಯಾರಿಗೆ ಹೆಚ್ಚಿನ ಬೆಂಬಲವಿದೆಯೋ ಅವರು ಮುಖ್ಯಮಂತ್ರಿಯಾಗುತ್ತಾರೆ. ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ಅವರನ್ನು ಇದೇ ರೀತಿ ಆಯ್ಕೆ ಮಾಡಲಾಗಿದೆ ಎಂದರು.

ಒಂದು ವೇಳೆ ಶಾಸಕರ ಅಭಿಪ್ರಾಯ ಪಡೆಯುವುದಿಲ್ಲ, ನೇರವಾಗಿ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಹೈಕಮಾಂಡ್‍ನ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ. ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಒಪ್ಪಿಕೊಳ್ಳುತ್ತೇವೆ ಎಂದರು.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ತಮ್ಮ ನಿವಾಸದಲ್ಲಿ ಮಂತ್ರಿಗಳಿಗೆ ಭೋಜನಕೂಟ ಏರ್ಪಡಿಸಿರುವುದಕ್ಕೆ ವಿಶೇಷವಾದ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

ದೀಪಾವಳಿಯ ಹಿನ್ನೆಲೆಯಲ್ಲಿ ಎಲ್ಲರಿಗೂ ಭೋಜನಕ್ಕೆ ಆಹ್ವಾನಿಸಿದ್ದೇನೆ ಸಹಜವಾಗಿ ಇದರಲ್ಲಿ ಅಭಿವೃದ್ಧಿಯು ಸೇರಿದಂತೆ ಹಲವಾರು ವಿಚಾರಗಳು ಚರ್ಚೆಗೆ ಬರುತ್ತದೆ ಎಲ್ಲರೂ ಮುಕ್ತವಾಗಿ ಮಾತನಾಡಲಿದ್ದಾರೆ ಎಂದರು.
 
ಭೋಜನಕೂಟದಲ್ಲಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಶಾಸಕರ ಬೆಂಬಲ ಇದ್ದವರು ಮುಖ್ಯಮಂತ್ರಿ ಆಗುತ್ತಾರೆ. ಜೊತೆಗೆ ಹೈಕಮಾಂಡ್ ಕೂಡ ಬೆಂಬಲಿಸಬೇಕು ಎಂದರು.

Leave a Reply