ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ

3 years ago

ಬೆಳಗಾವಿ: ವಿಧಾನ ಪರಿಷತ್ತಿನ  ಹಿರಿಯ ಸದಸ್ಯ ಬಿಜೆಪಿಯ ಬಸವರಾಜ ಹೊರಟ್ಟಿ ಅವರು ನಿರೀಕ್ಷೆಯಂತೆ  ನೂತನ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಪ್ರಸ್ತುತ ಮೂರನೇ ಬಾರಿಗೆ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ

ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ವಿಧಾನಪರಿಷತ್ತಿನ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು, 2018ರ ಜೂನ್‍ನಿಂದ ಡಿಸೆಂಬರ್ ರವರೆಗೆ ಮೊದಲ ಬಾರಿಗೆ ಸಭಾಪತಿಯಾಗಿದ್ದರು. ಬಳಿಕ 2021 ಫೆಬ್ರವರಿಯಿಂದ 2022ರ ಮೇ ವರೆಗೆ ಎರಡನೇ ಬಾರಿಗೆ ನಂತರ ಇದೀಗ ‌ಮೂರನೆ ಬಾರಿಗೆ ಆಯ್ಕೆಯಾಗಿದ್ದಾರೆ.

ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ‌ ಸಭಾಪತಿ ಪೀಠದಲ್ಲಿದ್ದ  ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆ ಅವರು ಸಭಾಪತಿ ಸ್ಥಾನದ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಿಜೆಪಿಯ ಡಾ.ವೈ.ಎ.ನಾರಾಯಣಸ್ವಾಮಿ, ಡಾ.ತೇಜಸ್ವಿನಿಗೌಡ, ಶಾಂತಾರಾಮ್ ಬುಡ್ನ ಸಿದ್ದಿ, ಅ.ದೇವೇಗೌಡ ಅವರು ಬಸವರಾಜ ಹೊರಟ್ಟಿ ಅವರನ್ನು ವಿಧಾನ ಪರಿಷತ್ತಿನ ಸಭಾಪತಿ ಅವರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು.

ಇದನ್ನು  ಆಯನೂರು ಮಂಜುನಾಥ್, ಎಸ್.ವಿ.ಸಂಕನೂರ ಹಾಗೂ ಪ್ರದೀಪ್ ಶೆಟ್ಟರ್ ಅವರು ಚುನಾವಣೆ ಪ್ರಸ್ತಾವನ್ನು ಅನುಮೋದಿಸಿದರು. ಸಭಾಪತಿ ರಘುನಾಥ್ ಮಲ್ಕಾಪುರೆ ಅವರು ಪ್ರಸ್ತಾವನೆಯನ್ನು ಮತಕ್ಕೆ ಹಾಕಿದಾಗ ಧ್ವನಿಮತ ಅಂಗೀಕಾರ ದೊರೆಯಿತು.

ಆಗ ಸಭಾಪತಿ ಅವರು ನೂತನ ಸಭಾಪತಿಯಾಗಿ ಹೊರಟ್ಟಿ ಅವರು ಸರ್ವಾನುಮತ ಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿ, ಮುಖ್ಯಮಂತ್ರಿ, ಸಭಾ ನಾಯಕರು ಹಾಗೂ ವಿರೋಪಕ್ಷದ ನಾಯಕರು ಮತ್ತು ಹಿರಿಯರು ಹೊರಟ್ಟಿ ಅವರನ್ನು ಪೀಠದ ಬಳಿಗೆ ಕರೆ ತರಬೇಕೆಂದು ಕೋರಿದರು.

ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭಾನಾಯಕ ಸಮಾಜಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ ಅವರು ನೂತನ ಸಭಾಪತಿ ಹೊರಟ್ಟಿ ಅವರನ್ನು ಸಭಾಪತಿ ಪೀಠದ ಬಳಿಗೆ ಸತ್ಸಂಪ್ರದಾಯದಂತೆ ಗೌರವ ಪೂರ್ವಕವಾಗಿ ಕರೆತಂದರು.

ಬಳಿಕ, ರಘುನಾಥ್ ಮಲ್ಕಾಪುರೆ ಅವರು ಬಸವರಾಜ ಹೊರಟ್ಟಿ ಅವರನ್ನು ಅಭಿನಂದಿಸಿ ಪೀಠದಲ್ಲಿ ಕೂರುವಂತೆ ಮನವಿ ಮಾಡಿ, ನಿರ್ಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾನಾಯಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವು ಸದಸ್ಯರು ಪಕ್ಷಭೇದ ಮರೆತು ನೂತನ ಸಭಾಪತಿಗಳ ಸೇವೆಯನ್ನು ಶ್ಲಾಘಿಸಿದರು.

ಯಾರೇ ಮುಖ್ಯಮಂತ್ರಿ ಆಗಲಿ, ಯಾವುದೇ ಪಕ್ಷ ಆಡಳಿತಕ್ಕೆ ಬರಲಿ ಕೆಲಸ ಹೇಗೆ ಮಾಡಿಸಬೇಕು ಎನ್ನುವ ಕಲೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಕಲಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ನೂತನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಮಗೆ ಎಲ್ಲರೂ ಪರಿಚಯಸ್ಥರೇ, ಆದರೆ, ವಿರೋಧ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಅವರಿಂದ ಹೇಗೆ ಕೆಲಸ ಮಾಡಿಸಬೇಕು ಎನ್ನುವುದು ಗೊತ್ತಿಲ್ಲ. ಆದರೆ, ಇದನ್ನು ಹೊರಟ್ಟಿ ಅವರಿಂದ ಕಲಿತುಕೊಳ್ಳಬೇಕು ಎಂದರು.

ಈ ಚುನಾವಣೆಯಲ್ಲಿ ಹೊರಟ್ಟಿ ಅವರು ತಮ್ಮ ಹಿರಿತನ, ಅನುಭವಕ್ಕೆ ತಕ್ಕಂತೆ ಸರ್ವಾನುಮತದಿಂದ ಆಯ್ಕೆಯಾಗಿರುವುದು ಸಂತಸ ತಂದಿದೆ. ಅವಿರೋಧ ಆಯ್ಕೆ ಮಾಡುವಲ್ಲಿ ಹಿರಿಯರು ಗೌರವ ತಂದಿದ್ದಾರೆ. ಇನ್ನೂ, ಶಿಕ್ಷಕ ವೃತ್ತಿಯಿಂದ ಆರಂಭಗೊಂಡ ಹೊರಟ್ಟಿ ಅವರ ಹಾದಿ, ಇದೀಗ ಸಭಾಪತಿ ಆಗಿ ತಲುಪಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

Leave a Reply