ಕೊರೊನಾ ಕಾರಣದಿಂದ ಅಲ್ಪಸಂಖ್ಯಾತರ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಅನುದಾನ ನೀಡಿಲ್ಲ: ಬೊಮ್ಮಾಯಿ

3 years ago

ಬೆಳಗಾವಿ: ಕೊರೋನಾದಿಂದ ಉಂಟಾದ ಆರ್ಥಿಕ ಸಂಕಷ್ಟದಿಂದಾಗಿ, ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆ ಮಾಡಲಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಿಗೆ ಸೌಲಭ್ಯ ಒದಗಿಸಲು 2018-19 ರಲ್ಲಿ 500 ಕೋಟಿ ರು., 2019-20ರಲ್ಲಿ 500 ಕೋಟಿ ರು. ಅನುದಾನವನ್ನು ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ನೀಡಲಾಗಿತ್ತು. ಆದರೆ, ಕೊರೋನಾ ಕಾರಣದಿಂದ ಎರಡು ವರ್ಷದಿಂದ ಅನುದಾನ ಬಿಡುಗಡೆ ಆಗಿರಲಿಲ್ಲ. ಇನ್ನು 2018-19, 2019-20ನೇ ಸಾಲಿನಲ್ಲಿ ಮಂಜೂರಾಗಿರುವ ಅನುದಾನ ಬಿಡುಗಡೆಯೂ ಬಾಕಿ ಇದೆ ಎಂದು ಹೇಳಿದರು.
ಚಾಲಕರ ನೇಮಕ: ಬಿಜೆಪಿಯ ಸಿದ್ದು ಸವದಿ ಅವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೆಎಸ್ ಅರ್ ಟಿ ಸಿ ಯಲ್ಲಿ ಖಾಲಿ ಇರುವ ಚಾಲಕರ ಹುದ್ದೆ ನೇಮಕಾತಿಗೆ   ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲೇ ಎರಡು ಸಾವಿರ ಚಾಲಕರನ್ನು ನೇಮಕಮಾಡಿಕೊಳ್ಳಲಾಗುವುದು ಎಂದು  ಹೇಳಿದರು.
ಏಮ್ಸ್ ಸ್ಥಾಪನೆ: ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ರಾಯಚೂರು ಮತ್ತು ಧಾರವಾಡದಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸ್ಥಾಪನೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ರಾಮನಗರ, ವಿಜಯಪುರ, ಧಾರವಾಡದಲ್ಲಿ  ಏಮ್ಸ್ ಸ್ಥಾಪನೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ರಾಜ್ಯದ ಶಿಫಾರಸ್ಸು ಆಧರಿಸಿ ಕೇಂದ್ರದ ತಂಡ ಈಗಾಗಲೇ ಧಾರವಾಡದ ಇಟಗಟ್ಟ ಗ್ರಾಮದ ಬಳಿ ಗುರುತಿಸಲಾದ ಭೂಮಿ ಪರಿಶೀಲನೆ ಮಾಡಿಕೊಂಡು ಹೋಗಿದೆ ಎಂದು ಹೇಳಿದರು.
ಈ ಮಧ್ಯೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಬಂದ ಕಾರಣ ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆಗೆ 2021 ಏ.9ರಂದು ಪತ್ರ ಬರೆಯಲಾಗಿದೆ. ಹೀಗೆಯೇ ಧಾರವಾಡ ಮತ್ತು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾದ ಭೂಮಿ, ನೀರು,ವಿದ್ಯುತ್ ಮತ್ತು ರಸ್ತೆ ಸಂಪರ್ಕ ಇರುವುದಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

Leave a Reply