ಬೆಂಗಳೂರು: ರಾಜ್ಯದಲ್ಲಿ ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚಾಗಿದ್ದು ಬಿಟಿಎಂ ಲೇಔಟ್ನಲ್ಲೂ ಹನಿ ಟ್ರ್ಯಾಪ್ ಪ್ರಕರಣ ದಾಖಲಾಗಿದೆ. ದಿಲೀಪ್ ಕುಮಾರ್ ಎಂಬಾತ ಪ್ರಿಯಾ ಎಂಬ ಯುವತಿಯ ಗಾಳಕ್ಕೆ ಬಿದ್ದು ವಂಚನೆ ಗೊಳಗಾಗಿ ಪೊಲೀಸರಿಗೆ ದೂರು ನೀಡಿದ್ದಾನೆ.
ಅಪರಿಚಿತ ಯುವತಿಯು ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ದಿಲೀಪ್ಗೆ ಮೆಸೇಜ್ ಮಾಡಿದ್ದು ಅದನ್ನು ನಂಬಿ ಯುವತಿ ಭೇಟಿಯಾಗಲು ಹೋದವನ ವಿಡಿಯೋ ಚಿತ್ರೀಕರಿಸಿ ಸುಲಿಗೆ ಮಾಡಿದ್ದಾಳೆ.
ಮೊದಲಿಗೆ ದಿಲೀಪ್ ಕುಮಾರ್ ಗೆ ಮೆಸೇಜ್ ಮೂಲಕ ಪರಿಚಯವಾಗಿದ್ದ ಪ್ರಿಯಾ ಅ. 27ರಂದು ಭೇಟಿಯಾಗುವುದಾಗಿ ಒತ್ತಾಯಿಸಿ ಮನೆಗೆ ಕರೆಸಿಕೊಂಡಿದ್ದಳು. ಇದಕ್ಕೆ ಒಪ್ಪಿ ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿದ್ದ ಪ್ರಿಯಾಳ ಮನೆಗೆ ದಿಲೀಪ್ ಹೋಗಿದ್ದ. ದಿಲೀಪ್ ಮನೆ ಒಳಗೆ ಹೋಗುತ್ತಿದ್ದಂತೆ ನಾಲ್ವರು ಯುವಕರು ಮುಂದೆ ಬಂದು ಚಾಕು ತೋರಿಸಿ ಹಣ ಮೊಬೈಲ್ ಕೊಡುವಂತೆ ಬೆದರಿಸಿದ್ದರು.
ಅಲ್ಲದೇ ದಿಲೀಪ್ ಕುಮಾರ್ ಪಕ್ಕ ಯುವತಿಯನ್ನು ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿ ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ದಿಲೀಪ್ ಕುಮಾರ್ ತನ್ನ ಬಳಿ ಇದ್ದ 26 ಸಾವಿರ ನಗದು, ಐಫೋನ್, ಕಾರ್ ಕೀ ನೀಡಿದ್ದಾರೆ.
25 ಸಾವಿರ ರೂ ಹಣವನ್ನ ಸಹೋದರನಿಂದ ಯುಪಿಐ ಮೂಲಕ ವರ್ಗಾವಣೆ ಮಾಡಿಸಿದ್ದಾರೆ. ಕಾರ್ ಬೇಕೆಂದರೆ 60 ಸಾವಿರ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ.
ಅವರಿಂದ ತಪ್ಪಿಸಿಕೊಂಡು ದಿಲೀಪ್ ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದಾರೆ ಹನಿ ಟ್ರ್ಯಾಪ್ ಹಿಂದಿನ ಯುವತಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದು ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.




