ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ ಎಸ್ ಡಿ ಎಲ್) ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ವ್ಯಾಪಾರ ಹಾಗೂ ಸ್ಪರ್ಧಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆಯೇ ಹೊರತು ಇದರಲ್ಲಿ ಯಾರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕೆ ಎಸ್ ಡಿ ಎಲ್ ರಾಜ್ಯದ ಅಸ್ಮಿತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ವಚನ ಪರಂಪರೆಯಿಂದ ಬಂದಿರುವ ನನಗೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಮೇಲೆ ಅಪಾರ ಗೌರವ ಮತ್ತು ಎಲ್ಲರಿಗಿಂತ ಹೆಚ್ಚಿನ ಬದ್ಧತೆ ಇದೆ. ಇಲ್ಲಿಯ ಕಲಾವಿದರ ಬಗ್ಗೆ ಅಭಿಮಾನವೂ ಇದೆ. ಆದರೆ, ವ್ಯಾಪಾರದ ಪ್ರಶ್ನೆ ಬಂದಾಗ ಇಲ್ಲಿಯ ಸ್ಪರ್ಧಾತ್ಮಕತೆಯನ್ನು ನೋಡಬೇಕು. ಹೀಗಾಗಿ ಪರಿಣತರ ತಂಡದ ತೀರ್ಮಾನದಂತೆ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದರು.
ಸ್ಪರ್ಧಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಯಾರೂ ಕೂಡ ನಕಾರಾತ್ಮಕವಾಗಿ ನೋಡಬಾರದು ಎಂದು ಮನವಿ ಮಾಡಿದರು.
ನಾವು ಕೆಎಸ್ ಡಿ ಎಲ್ ವಹಿವಾಟನ್ನು ಮುಂದಿನ ಮೂರು ವರ್ಷಗಳಲ್ಲಿ 5,000 ಕೋಟಿ ರೂ.ಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಆಗ ಬಾಲಿವುಡ್ ಅಲ್ಲ ಹಾಲಿವುಡ್ ನಟಿಯೊಬ್ಬರನ್ನೇ ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬರಲೆಂದು ನಾನು ಆಶಿಸುತ್ತೇನೆ ಎಂದರು.
ತಮನ್ನಾ ಅವರನ್ನು ನೇಮಿಸಿಕೊಳ್ಳುವ ಮೊದಲು ನಾವು ಕನ್ನಡದವರೇ ಆದ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದೆವು. ಜೊತೆಗೆ ಶ್ರೀಲೀಲಾ, ಪೂಜಾ ಹೆಗಡೆ, ಕಿಯಾರ ಅಡ್ವಾಣಿ ಅವರನ್ನೂ ಕೇಳಲಾಗಿದೆ. ದೀಪಿಕಾ ಅವರು ಅವರದೇ ಉತ್ಪನ್ನಗಳ ಪ್ರಚಾರದಲ್ಲಿ ಇದ್ದಾರೆ. ಹೀಗಾಗಿ ಬರಲಿಲ್ಲ. ಉಳಿದವರು ಬೇರೆಬೇರೆ ಸೌಂದರ್ಯವರ್ಧಕಗಳು, ಕ್ರೀಮುಗಳು ಮತ್ತು ಸಾಬೂನುಗಳಿಗೆ ರೂಪದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ವರ್ಷ ಅವರಾರೂ ತಮಗೆ ಬಿಡುವಿಲ್ಲ ಎಂದು ತಿಳಿಸಿದರು. ಹೀಗಾಗಿ, ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ 28 ಮಿಲಿಯನ್ ಫಾಲೋಯರ್ಸ್ ಹೊಂದಿರುವ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಯಿತು ಎಂದರು.
ಕೆ ಎಸ್ ಡಿ ಎಲ್ ಮೂಲಕ ಇತ್ತೀಚೆಗೆ 21 ಹೊಸ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ನಾವು ಪರಿಮಳಗಳ ಕ್ಷೇತ್ರಕ್ಕೂ ಕಾಲಿಡುತ್ತಿದ್ದೇವೆ. ಇದಕ್ಕೆಂದೇ ನಮ್ಮ ಅಧಿಕಾರಿಗಳನ್ನು ಅತ್ತರಿಗೆ ಹೆಸರಾಗಿರುವ ಉತ್ತರಪ್ರದೇಶದ ಕನೌಜ್ ಗೂ ಕಳಿಸಿಕೊಡಲಾಗಿತ್ತು. ವ್ಯಾಪಾರದ ಪ್ರಶ್ನೆ ಬಂದಾಗ ನಾವು ಅದಕ್ಕೆ ತಕ್ಕ ಕಾರ್ಯತಂತ್ರವನ್ನೇ ರೂಪಿಸಬೇಕಾಗುತ್ತದೆ. ಬ್ರ್ಯಾಂಡ್ ಅಂಬಾಸಿಡರ್ ನೇಮಕವನ್ನು ತಪ್ಪಾಗಿ ಭಾವಿಸಬಾರದು. ನಾವು ಅಧಿಕಾರಕ್ಕೆ ಬಂದಮೇಲೆ, ಕೆಎಸ್ಡಿಎಲ್ ವಹಿವಾಟು 1,700 ಕೋಟಿ ರೂ.ಗೂ ಹೆಚ್ಚಾಗಿದೆ. ಇದರ ಪೈಕಿ ರಾಜ್ಯದಲ್ಲಿ ನಡೆದಿರುವ ವಹಿವಾಟಿನ ಮೊತ್ತ 320 ಕೋಟಿ ರೂ. ಆಸುಪಾಸಿನಲ್ಲಿದೆಯಷ್ಟೆ ಎಂದರು.




