ಹಿಂದು ಪದ ವಿವಾದ: ತನಿಖಾ ತಂಡ ರಚಿಸುವಂತೆ ಸಿಎಂಗೆ ಪತ್ರ ಬರೆದ ಸತೀಶ್ ಜಾರಕಿಹೊಳಿ

3 years ago

ಬೆಳಗಾವಿ / ಬೆಂಗಳೂರು: ನಿಪ್ಪಾಣಿಯಲ್ಲಿ ಹಿಂದೂ ಪದದ ಕುರಿತು ಕೆಲವು ಅರ್ಥಗಳ ಕುರಿತು ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ಹೇಳಿಕೆಗೆ ಮಾಧ್ಯಮಗಳು ಮತ್ತು ಬಿಜೆಪಿ ಹಾಗೂ ಸಂಘ ಪರಿವಾರ ವಿವಾದದ ಬಣ್ಣ ಬಳಿದಿತ್ತು. ಈ ಹಿನ್ನೆಲೆಯಲ್ಲಿ ಅವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದು ವಿವಾದಾಸ್ಪದ ವಿಷಯದ ಕುರಿತು ತನಿಖಾ ತಂಡ ರಚಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಹೇಳಿಕೆ ತಿರುಚಿ ವಿವಾದದ ಸ್ವರೂಪ ನೀಡಿರುವುದರಿಂದ ಅನವಶ್ಯಕ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಹೇಳಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಅವರು ಬರೆದ ಪತ್ರದ ಪೂರ್ಣಪಾಠ ಇಲ್ಲಿದೆ.

“ದಿನಾಂಕ 06-11-2022ರಂದು ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಕೆಳಕಂಡ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.

ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕೆಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವುದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆ.

ಇದನ್ನು ನಾನು ವಿಕಿಪೀಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ. ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿವುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ.

ಮತ್ತೊಮ್ಮೆ ತಮ್ಮಲ್ಲಿ ಕೇಳಿಕೊಳ್ಳುವದೇನೆಂದರೆ, ಈ ಕುರಿತು ತಕ್ಷಣ ತನಿಖಾ ಸಮಿತಿ ರಚಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೂ ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕಿಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರಗೊಳಿಸುತ್ತಿರುವುದರಿಂದ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಮತ್ತು ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ.

  • – ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Leave a Reply