ಕನ್ನಡದಲ್ಲಿ ಬರೆಯುವ ಅವಕಾಶ ನೀಡದೆ ಕನ್ನಡಿಗರಿಗೆ ದ್ರೋಹ: ಟಿ.ಎ.ನಾರಾಯಣ ಗೌಡ

4 years ago

ಸ್ಟಾಫ್ ಸೆಲೆಕ್ಷನ್ ಕಮಿಟಿ ಡಿಸೆಂಬರ್ ನಲ್ಲಿ ನಡೆಸಲಿರುವ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ನೀಡದೆ ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ. ಇದು ಭಾರತ ಒಕ್ಕೂಟದಲ್ಲಿ ಕನ್ನಡಿಗರನ್ನು ತುಳಿಯುವ ಹುನ್ನಾರ. ಸರ್ಕಾರ ಕೂಡಲೇ ಪರೀಕ್ಷೆ ಸ್ಥಗಿತಗೊಳಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು.

ರೈಲ್ವೆ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆ, ಐಬಿಪಿಎಸ್ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳಲ್ಲೂ ಕನ್ಕಡಿಗರಿಗೆ ಅನ್ಯಾಯವಾಗಿದೆ. SSC ಪರೀಕ್ಷೆಗಳಲ್ಲೂ ಕನ್ನಡದಲ್ಲಿ ಪರೀಕ್ಷೆ ಇಲ್ಲದೆ ಗ್ರಾಮೀಣ ಭಾಗದ, ದುರ್ಬಲ ವರ್ಗಗಳ ಮಕ್ಕಳು ಪರೀಕ್ಷೆ ಎದುರಿಸದಂತೆ ಮಾಡಿರುವ ಹಿಂದಿನ ಕುತಂತ್ರವಾದರೂ ಏನು? ಯಾಕೆ ಈ ಮಲತಾಯಿ ಧೋರಣೆ?

20,000 ಬಿ ಮತ್ತು ಸಿ ದರ್ಜೆಯ ಹುದ್ದೆಗಳಿಗೆ SSC ಪರೀಕ್ಷೆ ನಡೆಸುತ್ತಿದೆ. ಕರ್ನಾಟಕದಲ್ಲಿ ನಡೆಯುವ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಿ, ಕನ್ನಡಿಗರಿಗೆ ಉದ್ಯೋಗ ನೀಡಲು ಏನು ಸಮಸ್ಯೆ? ಬೇರೆ ರಾಜ್ಯದವರನ್ನು ಅದರಲ್ಲೂ ವಿಶೇಷವಾಗಿ ಹಿಂದಿ ರಾಜ್ಯದವರನ್ನು ಕರ್ನಾಟಕದಲ್ಲಿ ತುರುಕುವ ಪ್ರಯತ್ನ ಇದಲ್ಲವೇ?

SSC ಪರೀಕ್ಷೆಗಳನ್ನು ಕೇವಲ ಹಿಂದಿ-ಇಂಗ್ಲಿಷ್ ನಲ್ಲಿ ನಡೆಸುತ್ತಿರುವುದನ್ನು ಗಮನಿಸಿದರೆ ಭಾರತದಲ್ಲಿ ಹಿಂದಿಯೇತರ ನುಡಿಗಳನ್ನು ಆಡುವವರು ಎರಡನೇ ದರ್ಜೆ ಪ್ರಜೆಗಳ ಹಾಗೆ ಒಕ್ಕೂಟ ಸರ್ಕಾರ ನೋಡುತ್ತಿದೆ ಎಂಬುದು ಅರಿವಾಗುತ್ತದೆ. ಇಂಥ ದ್ರೋಹವನ್ನು 75 ವರ್ಷಗಳಿಂದ ಸಹಿಸಿಕೊಂಡುಬಂದಿದ್ದೇವೆ. ಇನ್ನೆಷ್ಟು ಕಾಲ ಸಹಿಸಿಕೊಳ್ಳಬೇಕು?

ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ನಡೆಸಿದರೆ ಕನ್ನಡ ಮಾಧ್ಯಮದಲ್ಲಿ ಕಲಿತವರು ಏನು ಮಾಡಬೇಕು? ಅವರು ಹೇಗೆ ಪರೀಕ್ಷೆ ಬರೆಯಬೇಕು? ಹಿಂದಿ ತಾಯ್ನುಡಿ ಹೊಂದಿದವರಿಗೆ ಇರುವ ಅವಕಾಶ ಕನ್ನಡಿಗರಿಗೇಕೆ ಇಲ್ಲ? ಯಾಕಿಂಥ ತಾರತಮ್ಯ? ಭಾರತ ಒಕ್ಕೂಟದಲ್ಲಿ ಕನ್ನಡಿಗರು ಇಲ್ಲವೇ? ನಾವು ಮಾಡಿದ ತಪ್ಪಾದರೂ ಏನು?

ಒಕ್ಕೂಟ ಸರ್ಕಾರ ಈಗ ನಡೆಸುತ್ತಿರುವ ಪರೀಕ್ಷೆಗಳನ್ನು ಕೂಡಲೇ ರದ್ದುಮಾಡಬೇಕು. ಕನ್ನಡ ಸೇರಿದಂತೆ ಎಲ್ಲ ನುಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಹೊಸದಾಗಿ ಅಧಿಸೂಚನೆ ಹೊರಡಿಸಿ, ಹೊಸದಾಗಿ ಅರ್ಜಿ ಆಹ್ವಾನ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಿದೆ.

– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

Leave a Reply