ವಿಜಯನಗರ: ಪ್ರತೀ ವರ್ಷ ಮಳೆಗೆ ಗಣಿಗಾರಿಕೆಯ ತ್ಯಾಜ್ಯಮಣ್ಣು ಕೊಚ್ಚಿಕೊಂಡು ಬಂದು ನೂರಾರು ಎಕರೆ ಪ್ರದೇಶದ ಬೆಳೆ ಹಾನಿಯಾಗುತ್ತಿದ್ದರೂ ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದರೂ ರೈತರ ಗೋಳು ಯಾರೂ ಕೇಳದೇ ಅವರ ಕೂಗು ಅರಣ್ಯರೋದನವಾಗಿದೆ.
ಹೌದು ಮರಿಯಮ್ಮನಹಳ್ಳಿ ಹೋಬಳಿಯ ನಾಗಲಾಪುರ ಗ್ರಾಮಪಂಚಾಯಿತಿ ಕಂದಾಯ ಗ್ರಾಮ ನಾಗಲಾಪುರ ವ್ಯಾಪ್ತಿಯ ಗುಂಡಾ ಗ್ರಾಮದ ರೈತರ ಗೋಳು ನಿರಂತರವಾಗಿದೆ. ಇಲ್ಲಿನ ಜನರು ಒಂದೆಡೆ ಕಾರ್ಖಾನೆಗಳ ವಿಷಾನಿಲ, ಹೊಗೆ, ಧೂಳಿನಿಂದ ತತ್ತರಿಸಿದರೆ. ಮತ್ತೊಂದೆಡೆ ಸಮೀಪದ ಗಣಿಗಾರಿಕೆ ಗುಡ್ಡಗಳಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ಕೆಂಪು ಮಣ್ಣಿನ ಹೊಂಡು ಹರಿದುಬಂದು ಭೂಮಿಯೆಲ್ಲಾ ಕೆಂಪಾಗಿ ರೈತರ ಬೆಳೆಗಳನ್ನು ಬೆಳೆಯುವ ಹಂತದಲ್ಲೇ ನೆಲಕಚ್ಚುವಂತೆ ಮಾಡುತ್ತಿದೆ.
ಸ್ವಂತ ಭೂಮಿಯಿದ್ದರೂ ಬೆಳೆ ಕೈಗೆ ಸಿಗದೇ ಪರಿತಪಿಸುವಂತಾಗಿದೆ. ಗುಡ್ಡದಲ್ಲಿ ಗಣಿಗಾರಿಕೆ ಅದಿರು ತೆಗೆಯುವ ಗುತ್ತಿಗೆ ಹಿಡಿಯುವ ಗಣಿಗಾರಿಕೆ ಕಂಪನಿಯವರು ವರ್ಷಕ್ಕೊಮ್ಮೆ ಎಕರೆಗೆ 2,500 ರಿಂದ 7,000 ರೂಪಾಯಿಗಳವರೆಗೆ ಬಿಡಿಗಾಸು ಪರಿಹಾರ ಧನ ನೀಡಿ ಕೈತೊಳೆದುಕೊಳ್ಳುತ್ತಿವೆ. ಈ ಪರಿಹಾರ ಧನ ಬಿತ್ತನೆಯ ವೆಚ್ಚಕ್ಕೂ ಸಾಲದೇ ರೈತರು ಸಾಲದ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾರೆ.
ಸ್ಮಯೋರ್ ಕಂಪನಿ ಮತ್ತು ಜೀನತ್ ಕಂಪನಿಯವರು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಸ್ಮಯೋರ್ ಕಂಪನಿಯವರು 2,500 ರೂ. ಮತ್ತೊಂದು ಕಂಪನಿ 5,000 ರೂಪಾಯಿ ಬೆಳೆ ಹಾನಿ ಪರಿಹಾರ ನೀಡುತ್ತಾ ಬಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜೀನತ್ ಕಂಪನಿಯವರು ಪರಿಹಾರ ನೀಡುವುದನ್ನು ನಿಲ್ಲಿಸಿದ್ದಾರೆ. ಕಾರಣ ಅವರ ಗಣಿಗಾರಿಕೆ ಗುತ್ತಿಗೆ ಅವಧಿ ಮುಗಿದಿದ್ದು ಈಗ ಜಿಂದಾಲ್ ನವರು ಗಣಿಗಾರಿಕೆ ಮಾಡುತ್ತಿದ್ದಾರೆ. ಜಿಂದಾಲ್ ನವರು ಗಣಿಗಾರಿಕೆ ತ್ಯಾಜ್ಯ ಮಣ್ಣನ್ನು ಇತ್ತ ಹಾಕುತ್ತಿಲ್ಲವೆಂದು ಯಾವ ಪರಿಹಾರವನ್ನೂ ನೀಡಲು ಮುಂದಾಗುತ್ತಿಲ್ಲ. ಆದರೆ ಗಣಿ ತ್ಯಾಜ್ಯ ಕೆಂಪುಮಣ್ಣು ಹರಿದುಬರುವುದು ನಿಂತಿಲ್ಲ. ಇದು ನಮ್ಮ ಪ್ರತೀವರ್ಷದ ಗೋಳು ಎಂದು ಯುವ ರೈತ ಕುಮಾರಸ್ವಾಮಿ ಅಳಲು ತೋಡಿಕೊಂಡರು.
ಇಲ್ಲಿನ ಸುಮಾರು 80 ರೈತ ಕುಟುಂಬಗಳು ನೂರಾರು ಎಕರೆ ಕೃಷಿ ಭೂಮಿಯಲ್ಲಿ ಕಬ್ಬು, ಬಾಳೆ, ಮೆಕ್ಕೆ ಜೋಳ ಬೆಳೆಯುತ್ತಾರೆ. ಗಣಿಗಾರಿಕೆಯ ತ್ಯಾಜ್ಯ ಕೆಂಪುಮಣ್ಣಿನಿಂದ ಈ ಎಲ್ಲಾ ಬೆಳೆಗಳು ನಾಶವಾಗುತ್ತಿವೆ.
ಒಂದು ಎಕರೆ ಮೆಕ್ಕೆ ಜೋಳ ಬೆಳೆದ ರೈತ ಕನಿಷ್ಠ ಎಕರೆಗೆ 40,000 ರೂಪಾಯಿಗಳಷ್ಟು, ಕಬ್ಬು ಬೆಳೆದ ರೈತ ಎಕರೆಗೆ 80,000 ರೂಪಾಯಿಗಳು, ಬಾಳೆ ಬೆಳೆಯುವ ರೈತ ಎಕರೆಗೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸಬಹುದು. ಆದರೆ ಗಣಿ ತ್ಯಾಜ್ಯದ ಕೆಂಪು ಮಣ್ಣು ಈ ಹೊಲದಲ್ಲಿ ಹರಿದು ಬಂದು ಬಿಡಿಗಾಸೂ ನಮಗೆ ಸಿಗುತ್ತಿಲ್ಲ ಎಂದು ಸತ್ಯಪ್ಪ ಹೇಳುತ್ತಾರೆ.
ಗಣಿಗಾರಿಕೆಯ ತ್ಯಾಜ್ಯ ಮಣ್ಣು ಹರಿದು ಬಂದು ಗುಂಡಾ ಕೆರೆಯಲ್ಲಿ ದೊಡ್ಡಪ್ರಮಾಣದಲ್ಲಿ ಹೂಳುತುಂಬಿದೆ. ರೈತರ ಕೃಷಿಹೊಂಡಗಳಲ್ಲಿಯೂ ಹೂಳು ತುಂಬಿ ನೀರಿನ ಶೇಖರಣೆಯ ಪ್ರಮಾಣ ಕಡಿಮೆಯಾಗಿದೆ. ಬೆಳೆ ಹಾನಿಯ ಜೊತೆಗೆ ಕಾರ್ಖಾನೆಯ ಹೊಗೆ ಧೂಳಿನಿಂದ ರೈತರ ಇಲ್ಲಿನ ಜನರ ಆರೋಗ್ಯವೂ ಹಾಳಾಗುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ರೈತ ಮುಖಂಡ ಅಂಜಿನಪ್ಪ ನೋವು ತೋಡಿಕೊಂಡರು.
ವಿಶೇಷ ವರದಿ: ಎಂ.ಸೋಮೇಶ್ ಉಪ್ಪಾರ




