ಬೆಂಗಳೂರು: ಅಬಕಾರಿ ಪರವಾನಗಿದಾರರು ಮೃತಪಟ್ಟ ಬಳಿಕ ಅವರ ಕಾನೂನುಬದ್ಧ ವಾರಸುದಾರರಿಗೆ ಲೈಸೆನ್ಸ್ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಸಂಬಂಧಿತ ನಿಯಮಗಳಿಗೆ ಸೂಕ್ತ ಸ್ಪಷ್ಟನೆ ಅಥವಾ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
- ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಸೈಬರ್ ರಕ್ಷಣೆ ದಳ ಸ್ಥಾಪನೆ
- ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ: ಡಾ.ಜಿ.ಪರಮೇಶ್ವರ್
- ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಜನವರಿಯಲ್ಲಿ ಚುನಾವಣೆ: ಈಶ್ವರ್ ಖಂಡ್ರೆ
- ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ತರಲು ಪ್ರಸ್ತಾವನೆ ಸಿದ್ಧ
- ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧ: ಡಿ.ಕೆ.ಶಿವಕುಮಾರ್
ಮೃತ ವಿ.ಪ್ರೇಮಮ್ಮ ಅವರ ಹೆಸರಿನಲ್ಲಿದ್ದ ಸಿಎಲ್-9 ಮದ್ಯದಂಗಡಿ ಪರವಾನಗಿ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿದೆ.
ಕರ್ನಾಟಕ ಅಬಕಾರಿ ಲೈಸೆನ್ಸ್ಗಳ (ಸಾಮಾನ್ಯ ಷರತ್ತುಗಳು) ನಿಯಮಗಳು-1967ರ ನಿಯಮ 17ಎ ಅಡಿಯಲ್ಲಿ, ಲೈಸೆನ್ಸ್ದಾರರು ಮೃತಪಟ್ಟರೆ ಅವರ ಕಾನೂನುಬದ್ಧ ವಾರಸುದಾರರಿಗೆ ಪರವಾನಗಿ ವರ್ಗಾಯಿಸಲು ಅವಕಾಶವಿದೆ. ಆದರೆ, ಉಯಿಲು ಇಲ್ಲದ ಉತ್ತರಾಧಿಕಾರದ ಆಧಾರದಲ್ಲಿ ಒಬ್ಬರು ಹಾಗೂ ನೋಂದಾಯಿತ ಉಯಿಲಿನ ಆಧಾರದಲ್ಲಿ ಮತ್ತೊಬ್ಬರು ಹಕ್ಕು ಮಂಡಿಸಿದರೆ ಯಾರನ್ನು ಕಾನೂನುಬದ್ಧ ವಾರಸುದಾರರೆಂದು ಪರಿಗಣಿಸಬೇಕು ಎಂಬುದರ ಕುರಿತು ನಿಯಮದಲ್ಲಿ ಸ್ಪಷ್ಟತೆ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಾರಸುದಾರರ ನಡುವಿನ ಒಪ್ಪಿಗೆ ಮತ್ತು ಭಿನ್ನಾಭಿಪ್ರಾಯಗಳು ಹಾಗೂ ಉಯಿಲಿನ ಆಧಾರದಲ್ಲಿ ಹಕ್ಕು ಮಂಡಿಸುವವರ ಆಕ್ಷೇಪಣೆಗಳನ್ನು ಪ್ರತ್ಯೇಕವಾಗಿ ಪರಿಗಣಿಸುವ ಅಗತ್ಯವಿದೆ. ಪ್ರತಿಯೊಂದು ಆಕ್ಷೇಪಣೆಯನ್ನೂ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವ ಪರಿಸ್ಥಿತಿ ಉಂಟಾಗಬಾರದು ಎಂದು ಪೀಠ ತಿಳಿಸಿದೆ.
ಸಿವಿಲ್ ನ್ಯಾಯಾಲಯಗಳಲ್ಲಿನ ಪ್ರಕರಣಗಳು ಹಲವು ವರ್ಷಗಳವರೆಗೆ ಮುಂದುವರಿಯಬಹುದು. ಈ ನಡುವೆ ಲೈಸೆನ್ಸ್ ನವೀಕರಣ ಮತ್ತು ಅವಧಿ ಮುಕ್ತಾಯಕ್ಕೆ ಸಂಬಂಧಿಸಿದ ನಿಯಮಗಳು ಅನ್ವಯವಾಗುತ್ತವೆ. 2025ರ ನವೆಂಬರ್ನಲ್ಲಿ ಜಾರಿಗೆ ತಂದ ತಿದ್ದುಪಡಿಗಳ ಪ್ರಕಾರ, ಅವಧಿ ಮುಗಿದ ಅಥವಾ ಮುಟ್ಟುಗೋಲು ಹಾಕಿಕೊಂಡ ಕೆಲವು ಲೈಸೆನ್ಸ್ಗಳನ್ನು ಹರಾಜಿಗೆ ಸೇರಿಸುವ ಅವಕಾಶವಿದೆ. ಹೀಗಾಗಿ, ವಾರಸುದಾರರ ನಡುವಿನ ವಿವಾದಕ್ಕೆ ಅಂತಿಮ ತೀರ್ಪು ಬರುವಷ್ಟರಲ್ಲಿ ವಿವಾದಿತ ಲೈಸೆನ್ಸ್ ಅಸ್ತಿತ್ವದಲ್ಲೇ ಇಲ್ಲದಿರುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
ಅದೇ ವೇಳೆ, ವಿವಾದಿತ ಉಯಿಲಿನ ಸತ್ಯಾಸತ್ಯತೆಯನ್ನು ನಿರ್ಧರಿಸುವ ಅಧಿಕಾರ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಇಲ್ಲ. ಈ ವಿಚಾರವನ್ನು ಸಕ್ಷಮ ಸಿವಿಲ್ ನ್ಯಾಯಾಲಯವೇ ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಿದೆ.
ಅಬಕಾರಿ ಪರವಾನಗಿ ಸಾಮಾನ್ಯ ವಾರಸುದಾರಿಕೆಯ ಆಸ್ತಿಯಲ್ಲ; ಅದು ಕಾನೂನಿನಡಿ ನೀಡಲಾಗುವ ವಿಶೇಷ ಅನುಮತಿಯಾಗಿದೆ. ಸಿವಿಲ್ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಲೈಸೆನ್ಸ್ ಸ್ವಯಂಚಾಲಿತವಾಗಿ ಮುಂದುವರಿಯುವುದಿಲ್ಲ. ಅದೇ ಕಾರಣಕ್ಕೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಸಾಧ್ಯವಿಲ್ಲ. ಲೈಸೆನ್ಸ್ನ ಮಾನ್ಯತೆ, ನವೀಕರಣ ಮತ್ತು ಅವಧಿ ಮುಕ್ತಾಯವನ್ನು ಸಂಬಂಧಿತ ನಿಯಮಗಳ ಪ್ರಕಾರವೇ ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ನಿಯಮ 17ಎಗೆ ಅಗತ್ಯ ಸ್ಪಷ್ಟನೆ ಅಥವಾ ತಿದ್ದುಪಡಿ ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಆದೇಶದ ಪ್ರತಿಯನ್ನು ಹಣಕಾಸು ಇಲಾಖೆಯ (ಅಬಕಾರಿ) ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲು ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.




