ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯ ಕಾಯ್ದೆ ಕೂಡಲೇ ಜಾರಿಯಾಗಬೇಕು
ಸರ್ಕಾರ ಈ ಬಾರಿ ಪಟ್ಟಭದ್ರರ ಒತ್ತಡಕ್ಕೆ ಮಣಿದರೆ ಅಭೂತಪೂರ್ವ ಪ್ರತಿರೋಧ ಎದುರಿಸಬೇಕಾಗುತ್ತದೆ
ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯ ಕಾಯ್ದೆ ಅಂಗೀಕಾರಗೊಂಡು ಜಾರಿಯಾಗಬೇಕು. ಇಲ್ಲವಾದಲ್ಲಿ, ಡಿಸೆಂಬರ್ 12ರಿಂದ ಕರ್ನಾಟಕ ರಕ್ಷಣಾ ವೇದಿಕೆ ಹಿಂದೆಂದೂ ಕಾಣದಂಥ ಚಳವಳಿಯನ್ನು ಹಮ್ಮಿಕೊಳ್ಳುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.
- ಬ್ಲಾಕ್ಮೇಲ್ ತಂತ್ರಗಳಿಗೆ ಹೆದರುವುದಿಲ್ಲ, ಪ್ರತಿಷ್ಠೆ ಬಿಡಿ
- ದರ್ಶನ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಗೆ ಕೋರ್ಟ್ ಅಸ್ತು
- ಸಂವಿಧಾನ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ಅಗತ್ಯ: ಸಿದ್ದರಾಮಯ್ಯ
- ಮಾಜಿ ಸಚಿವ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ
- ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಸೈಬರ್ ರಕ್ಷಣೆ ದಳ ಸ್ಥಾಪನೆ
ಬೆಂಗಳೂರಿನ ಗಾಂಧಿನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ಡಿಸೆಂಬರ್ 12ರಿಂದ ಕರವೇ ಹಮ್ಮಿಕೊಂಡಿರುವ ಚಳವಳಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡಿದರು.
ಇದು ಕರವೇ ಸಾರುತ್ತಿರುವ ಮಹಾಸಂಗ್ರಾಮ. ಈ ಸಂಗ್ರಾಮದಲ್ಲಿ ನಾವು ಸತ್ತರೂ ಚಿಂತೆಯಿಲ್ಲ, ಸೋಲುವ ಪ್ರಶ್ನೆಯೇ ಇಲ್ಲ. ಸರ್ಕಾರ ನಮ್ಮ ಚಳವಳಿಯನ್ನು ಲಘುವಾಗಿ ಪರಿಗಣಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಡೀ ರಾಜ್ಯಾದ್ಯಂತ ಚಳವಳಿಯ ಕಾವು ಹಬ್ಬುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ. ಇದಕ್ಕಾಗಿ ಯಾವುದೇ ಬಲಿದಾನಕ್ಕೂ ನೀವು ಸಿದ್ಧರಾಗಬೇಕು ಎಂದು ಕರವೇ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕರ್ನಾಟಕದ ಐಟಿ-ಬಿಟಿ ಸೇರಿದಂತೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈಗಾಗಲೇ ರೂಪಿಸಿರುವ ‘ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕ, 2024’ ಅನ್ನು ಕೂಡಲೇ ಜಾರಿಗೊಳಿಸಬೇಕು. ಸರ್ಕಾರ ಈಗಲೂ ಪಟ್ಟಭದ್ರರ ಒತ್ತಡಕ್ಕೆ ಮಣಿದರೆ, ಕನ್ನಡಿಗರ ಅಭೂತಪೂರ್ವ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವಿಧೇಯಕಕ್ಕೆ 2024ರ ಜುಲೈನಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದರೂ, ಇದುವರೆಗೂ ಜಾರಿಗೆ ಬಂದಿಲ್ಲ. ಇದರಿಂದ ರಾಜ್ಯದ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ದೊರೆಯುವ ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಚಳವಳಿ ನಡೆಸಬೇಕಾಗಿ ಬಂದಿದೆ. ಈ ಪ್ರತಿಭಟನೆಯ ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರ, ಪೊಲೀಸ್ ಇಲಾಖೆ ಇದಕ್ಕೆ ಅಡ್ಡಿಬರಬಾರದು. ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು ಎಂದು ಹೇಳಿದ ಅವರು, ನಮ್ಮ ಉದ್ದೇಶ ಶಾಂತಿಯುತ ಪ್ರತಿಭಟನೆ ನಡೆಸುವುದೇ ಆಗಿದೆ. ಪ್ರತಿಭಟಿಸುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು. ಅದನ್ನು ಯಾರೂ ಕಸಿಯಬಾರದು ಎಂದರು.
ಡಿಸೆಂಬರ್ 12ರಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು. ಈ ಪ್ರತಿಭಟನೆಗೆ ನಾಡಿನ ಸಾಹಿತಿಗಳು, ಕಲಾವಿದರು ಸೇರಿದಂತೆ ಎಲ್ಲರ ಬೆಂಬಲವನ್ನೂ ಕೋರುತ್ತೇವೆ. ಕನ್ನಡದ ಮಕ್ಕಳ ಹಕ್ಕಿನ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈ ಐತಿಹಾಸಿಕ ಪ್ರತಿಭಟನೆ ರಾಜ್ಯದ ಮೂಲೆಮೂಲೆಯಿಂದ ಕರವೇ ಕಾರ್ಯಕರ್ತರು ತಂಡೋಪತಂಡವಾಗಿ ಬರಲಿದ್ದಾರೆ. ಹೀಗಾಗಿ ಪ್ರತಿಭಟನೆ ಯಶಸ್ವಿಯಾಗಿ ನಡೆಯಲು ಬೆಂಗಳೂರಿನ ಪದಾಧಿಕಾರಿಗಳು, ಮುಖಂಡರ ಜವಾಬ್ದಾರಿ ಹೆಚ್ಚು. ಎಲ್ಲವೂ ಶಿಸ್ತುಬದ್ಧವಾಗಿ ನಡೆಯಬೇಕು. ಇದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿಕೊಳ್ಳಿ ಎಂದು ಕರೆ ನೀಡಿದರು.
ಇತ್ತೀಚಿಗೆ ಖಾಸಗಿ ಚಾನಲ್ ನ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲೂ ಸಹ ಕಾಯ್ದೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಅವರನ್ನು ಕೆಲವು ಬಾಹ್ಯ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ತಡೆಯುತ್ತಿರುವ ಶಂಕೆ ನಮ್ಮದು. ಈ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಕಾಲ ಕಾಯುವ ಪ್ರಶ್ನೆಯೇ ಇಲ್ಲ. ಕಾಯ್ದೆ ಜಾರಿಯಾಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಇದು ʻಮಾಡು ಇಲ್ಲವೇ ಮಡಿʼ ಹೋರಾಟ. ಈ ಚಳವಳಿಯಲ್ಲಿ ನಮ್ಮ ಪ್ರಾಣಗಳು ಹೋದರೂ ಸರಿ, ಕನ್ನಡದ ಮಕ್ಕಳ ಹಕ್ಕನ್ನು ರಕ್ಷಿಸೋಣ. ಇಲ್ಲವಾದಲ್ಲಿ ಕನ್ನಡದ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಹೀಗಾಗಿ ಈ ಐತಿಹಾಸಿಕ ಹೋರಾಟಕ್ಕೆ ಎಲ್ಲ ರೀತಿಯಲ್ಲೂ ಸಜ್ಜಾಗಿ ಎಂದು ಅವರು ಮುಖಂಡರಿಗೆ ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಷರುಗಳಾದ ಹಯಾತ್ ಕಾರ್ಗಲ್, ವೀರಭದ್ರ, ಪುಟ್ಟೇಗೌಡ, ರಾಜ್ಯ ಪ್ರಧಾನ ಸಂಚಾಲಕ ಮೋಹನ್ ಗೌಡ, ರಾಜ್ಯ ಕಾರ್ಯದರ್ಶಿ ಸುರೇಶ್, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಬೆಂಗಳೂರು ನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಗೌಡ ಸೇರಿದಂತೆ ಕರವೇ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.







