‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ತರಲು ಪ್ರಸ್ತಾವನೆ ಸಿದ್ಧ 

10 hours ago

ಬೆಂಗಳೂರು: ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ ಧೂಮಪಾನ ಮಾಡುವ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಇದೀಗ ಪೊಲೀಸ್ ಇಲಾಖೆ ನೆರವಿನೊಂದಿಗೆ ಬೆಂಗಳೂರಿನಲ್ಲೂ ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ತರಲು ಮುಂದಾಗಿದೆ.

ಕೆಲವು ವಿದೇಶಿ ರಾಷ್ಟ್ರಗಳಲ್ಲಿ ಇಂತಹ ನಿಯಮ ಜಾರಿಯಲ್ಲಿದೆ. ಇದನ್ನು ಮಾನದಂಡವಾಗಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಚಿಂತನೆ ನಡೆಸಿದೆ. ವಿದೇಶಗಳಲ್ಲಿರುವ ನಿಯಮಗಳ ಮಾದರಿಯಲ್ಲಿ ಬೆಂಗಳೂರಿನಲ್ಲೂ ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸಿದೆ.

ಹೋಟೆಲ್ಗಳು, ಪಬ್ಗಳು, ಬಾರ್ಗಳು, ರೆಸ್ಟೋರೆಂಟ್ಗಳು ಮತ್ತು ಕ್ಲಬ್ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂಬ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಐಟಿ-ಬಿಟಿ ಕಂಪನಿಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ಜೋನ್ಗಳ ವ್ಯವಸ್ಥೆ ಇದ್ದರೂ, ಅವುಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿಯಮ ರೂಪಿಸಿದೆ.

ಧೂಮಪಾನ ಮಾಡುವವರ ಆರೋಗ್ಯದ ಮೇಲೆ ಮಾತ್ರವಲ್ಲದೆ, ಸುತ್ತಮುತ್ತಲಿರುವವರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದಾಗ, ಧೂಮಪಾನ ಮಾಡದವರೂ ತೊಂದರೆಗೆ ಸಿಲುಕುತ್ತಾರೆ.ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

Leave a Reply