ತಾಯಿ ಅನ್ನುತ್ತಾಳೆ. ಮಗುವಿನ ಯಶಸ್ಸಿಗೆ ನಾನೇ ಕಾರಣ ಹೆತ್ತವಳು ನಾನೆಂದು, ಅಪ್ಪ ಅನ್ನುತ್ತಾನೆ ಬಿತ್ತಿದವನು ನಾನೆಂದು, ಸಹಪಾಠಿಗಳು ಅನ್ನುತ್ತಾರೆ ಸಾಧನೆಗೆ ನಮ್ಮ ಸಹಕಾರವೇ ಕಾರಣವೆಂದು, ಪಾಠ ಹೇಳಿಕೊಟ್ಟ ಗುರುಗಳು ಹೇಳುತ್ತಾರೆ ಅವರ ಸಾಧನೆಗೆ ನಾನೇ ಕಾರಣನೆಂದು, ಇಲ್ಲಿ ವ್ಯಕ್ತಿಯೊಬ್ಬರ ಸಾಧನೆಗೆ ತಾಯಿಯು ಕಾರಣ, ತಂದೆಯು ಕಾರಣ, ಸಹಪಾಠಿಗಳು ಕಾರಣ, ಗುರುವು ಕಾರಣ ಅಂತೆಯೇ ದೇಶದ ಪ್ರಗತಿಗೆ 75 ವರ್ಷಗಳ ಹಿಂದೆ ಪಂಚವಾರ್ಷಿಕ ಯೋಜನೆಗಳ ಮೂಲಕ ಅಭಿವೃದ್ಧಿಯ ಬೀಜ ಬಿತ್ತಿದ ನೆಹರೂ ಕಾರಣ.
ನಂತರ ಹಲವಾರು, ಕ್ರಾಂತಿಕಾರಿ ನಿಲುವುಗಳನ್ನು ಕೈಗೊಂಡ ಶಾಸ್ತ್ರಿಯೂ ಕಾರಣ, 20 ಅಂಶಗಳ ಕಾರ್ಯಕ್ರಮಗಳ ಮೂಲಕ ವೈಜ್ಞಾನಿಕ ಸಂಶೋಧನೆಯ ಸಂಸ್ಥೆಗಳ ಮೂಲಕ, ದೇಶದ ಜನರ ಬದುಕು ಹಸಿರುಕ್ರಾಂತಿ, ಕ್ಷೀರಕ್ರಾಂತಿಗಳ ಮೂಲಕ ಕಟ್ಟಿಕೊಟ್ಟ ಶ್ರೀಮತಿ ಇಂದಿರಾಗಾಂಧಿರವರು ಕಾರಣ, ಮಾಹಿತಿ ತಂತ್ರಜ್ಞಾನದ ಕೊಡುಗೆಯನ್ನು ದೇಶಕ್ಕೆ ನೀಡಿದ ರಾಜೀವ್ ಗಾಂಧಿಯೂ ಕಾರಣ, ಹೆದ್ದಾರಿ ರಸ್ತೆಗಳ ಪರಿಚಯ ಮಾಡಿಕೊಟ್ಟ ಅಟಲ್ ಜೀರವರು ಕಾರಣ, ಆರ್ಥಿಕ ಕ್ರಾಂತಿಯ ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಪಿ.ವಿ. ನರಸಿಂಹರಾಯರು, ಮನಮೋಹನ್ ಸಿಂಗ್ ರವರು ದೇಶಕ್ಕೆ ಪ್ರಗತಿಗೆ ಕಾರಣ.
ಹೊಸ ಆರ್ಥಿಕ ನೀತಿಗಳು ಬಾರದಿದ್ದರೆ ಬಂಡವಾಳ ಹರಿದು ಬರುತ್ತಿರಲಿಲ್ಲ. ದೇಶದಲ್ಲಿ ಹಣದ ಹರಿವೇ ಇರುತ್ತಿರಲಿಲ್ಲ, ಅವರುಗಳ ಆರ್ಥಿಕ ಕ್ರಾಂತಿ ದೇಶವನ್ನು ಇಂದು ಆರ್ಥಿಕವಾಗಿ ಸದೃಢಗೊಳಿಸಿದೆ ಎಂಬುದನ್ನು ಮರೆಯದಿದ್ದರೆ ಒಳ್ಳೆಯದು. ಹುಟ್ಟಿದಾಗ ಮಗು ಅಷ್ಟಾಗಿ ಬೆಳಕಿಗೆ ಬರುವುದಿಲ್ಲ. ಬಾಲ್ಯದಲ್ಲಿ ಮತ್ತು ಪ್ರಾಯದಲ್ಲಿ ಹೆಚ್ಚು ಪರಿಚಿತವಾಗುತ್ತದೆ ಯೌವ್ವನ ಬಂದಾಗ ಆಕರ್ಷಣೆ ಮಿತಿ ಮೀರುತ್ತದೆ. ಆದರೆ ಪ್ರಗತಿಯೆಂಬುದು ರಾತ್ರಿ ಬೆಳಿಗ್ಗೆಯೊಳಗೆ ಆಗುವ ಕ್ರಿಯೆಯಲ್ಲ. ರಸ್ತೆಯೇ ಇಲ್ಲದ ಕಡೆ ಮಣ್ಣಿನ ರಸ್ತೆಯಾದ ಕಾರಣದಿಂದ ಮುಂದೆ ಕಾಂಕ್ರಿಟ್ ರಸ್ತೆಯಾಯಿತು. ಅದು ಬದಲಾಗಿ ಡಾಂಬರೀಕರಣವಾಯಿತು. ಎತ್ತಿನ ಗಾಡಿ ಬಂದ ನಂತರವೇ ದ್ವಿಚಕ್ರ ವಾಹನಗಳು, ಕಾರು, ಹೆಲಿಕಾಪ್ಟರ್, ವಿಮಾನಗಳು ಹಾರಲಾರಂಭಿಸಿದವು.
ವಿದ್ಯೆ ಇಲ್ಲದ ದೇಶದಲ್ಲಿ ಐಐಟಿ, ಐಐಎಂ ಸಂಶೋಧನೆಗಳ ಸಂಸ್ಥೆಗಳ ಮೂಲಕ ಜ್ಞಾನದ ಬೆಳಕು ಹರಿಸಿದ ಕಾರಣದಿಂದ ದೇಶ ಇಂದು ವೈಜ್ಞಾನಿಕವಾಗಿಯೂ ಜಗತ್ತಿನ ಎಲ್ಲಾ ದೇಶಗಳನ್ನು ಮೀರಿಸುತ್ತಿದೆ. ಆದುದರಿಂದ ಕಳೆದ 10 ವರ್ಷದಲ್ಲಿಯೇ ಎಲ್ಲವೂ ನನ್ನಿಂದಲೇ ಆಯಿತು ಎಂಬ ನಾನತ್ವ ನಿಮ್ಮ ಹಿಂಬಾಲಕರು, ಹೊಗಳಭಟ್ಟರು ಒಪ್ಪಬಹುದಷ್ಟೆ. ಕೆಲವೆ ಕೆಲವು ಲಕ್ಷ ಕೋಟಿ ರೂಪಾಯಿಗಳ ಮುಂಗಡ ಪತ್ರ ಇದ್ದ ಕಾಲದಲ್ಲೂ ಅಭಿವೃದ್ಧಿಯನ್ನು ಮಾಡಿದ್ದಾರೆ. ಹತ್ತಾರು ಲಕ್ಷ ಕೋಟಿ ರೂಪಾಯಿಗಳ ಮುಂಗಡ ಪತ್ರದ ಕಾಲದಲ್ಲಿಯೂ ಅಭಿವೃದ್ಧಿಯಾಗುತ್ತದೆ. ನಾಣ್ಯಗಳೆಲ್ಲ ಸೇರಿದರೆ ಮಾತ್ರವೆ ರೂಪಾಯಿಗಳು ಆಗುವುದು ಎಂಬುದು ನೆನಪಿರಲಿ. ದೇಶದ ಪ್ರಗತಿಯಲ್ಲಿ ಏಕವ್ಯಕ್ತಿಯ ಪಾತ್ರವಿದೆ ಎಂದು ಅಬ್ಬರಿಸುವುದು ಮೂರ್ಖತನದ ಪರಮಾವಧಿ. 75 ವರ್ಷದಲ್ಲಿ ಮತ್ತು ಅದರ ಹಿಂದೆ ದೇಶ ಏನಿತ್ತು, ಈಗ ಏನಾಗುತ್ತಿದೆ ಎನ್ನುವ ಸಂಗತಿಗಳು ಹೊಗಳಭಟ್ಟರು ಮರೆತಿರಬಹುದು. ಆದರೆ ಇತಿಹಾಸ ಸಾಯುವುದಿಲ್ಲ ಅದು ಉಳಿದಿರುತ್ತದೆ.
ಕೆ.ಎಸ್. ನಾಗರಾಜ್, ಬೆಂಗಳೂರು



