ರಾಹುಲ್ ಗಾಂಧಿಯವರಿಗೆ ಅನುಸರಿಸಿದ ಮಾನದಂಡವನ್ನು  ವಿಧಾನಸಭಾಧ್ಯಕ್ಷರು ಏಕೆ ಅನುಸರಿಸುತ್ತಿಲ್ಲ?

3 years ago

ಯಾವುದೇ ವಿಚಾರಣಾ ನ್ಯಾಯಾಲಯಗಳು ಅಪರಾಧ / ಸಿವಿಲ್ ಸ್ವರೂಪದ ವ್ಯಾಜ್ಯಗಳಲ್ಲಿ ನೀಡಿದ ತೀರ್ಪು ಅಂತಿಮವಲ್ಲ. ಅವುಗಳ ಕುರಿತಾಗಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಬಾಧಿತ ವ್ಯಕ್ತಿಗೆ ಅವಕಾಶವಿದೆ. ಆ ಸಂದರ್ಭದಲ್ಲಿ ಮೇಲ್ಮನವಿ ನ್ಯಾಯಾಲಯಗಳು ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪಿಗೆ ತಡೆಯಾಜ್ಞೆಯನ್ನು ನೀಡಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸುತ್ತವೆ, ಇವೆಲ್ಲವೂ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪದ್ಧತಿ ಮತ್ತು ಬಾಧಿತ ವ್ಯಕ್ತಿಯ ಹಕ್ಕು, ಈ ಹಕ್ಕನ್ನು ಯಾರೂ ದಮನಿಸಲು ಸಾಧ್ಯವಿಲ್ಲ.

ಸುಪ್ರೀಂಕೋರ್ಟ್ ನ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು, ಡಾ.ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯ ಜನಪ್ರತಿನಿಧಿಯೊಬ್ಬನಿಗೆ ಅಪರಾಧ ಪ್ರಕರಣದಲ್ಲಿ ಎರಡು ವರ್ಷಕ್ಕೂ ಹೆಚ್ಚಿನ ಶಿಕ್ಷೆ ವಿಧಿಸಿದ್ದರೆ, ಜನಪ್ರತಿನಿಧಿ ಕಾಯ್ದೆ 1951 ರ ಅನ್ವಯ ಆತನ ಪ್ರಾತಿನಿಧ್ಯ ರದ್ದಾಗುತ್ತದೆ ಎಂದು ತೀರ್ಪು ನೀಡಿತ್ತು. ಇದರಿಂದ ಬಾಧಿತನ ಮೇಲ್ಮನವಿ ಸಲ್ಲಿಸುವ ಹಕ್ಕು ಹರಣವಾಗುತ್ತದೆಯಾದ್ದರಿಂದ ಮೇಲ್ಮನವಿ ಅರ್ಜಿ ವಿಲೇವಾರಿಯಾಗಿ ಅಂತಿಮ ತೀರ್ಪು ಬರುವವರೆಗೆ ಆತನ ಜನಪ್ರತಿನಿಧಿ ಸ್ಥಾನಕ್ಕೆ ಅನರ್ಹತೆ ಉಂಟಾಗದಂತೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರವು ಸಿದ್ಧತೆ ನಡೆಸಿತ್ತು.

ಈ ಸುಗ್ರೀವಾಜ್ಞೆಯ ಪ್ರತಿಯನ್ನು ಸಂಸದರೂ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯ ಪುತ್ರನ ಸ್ಥಾನಮಾನ ಬಲದಿಂದ ರಾಹುಲ್ ಗಾಂಧಿಯವರು ಸಾರ್ವಜನಿಕವಾಗಿ ಹರಿದುಹಾಕಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಹೀಗೆ ಬಹಿರಂಗವಾಗಿ ಡಾ.ಮನಮೋಹನ್ ಸಿಂಗ್ ಅವರ ಸರ್ಕಾರ ಮತ್ತು ಮಂತ್ರಿ ಮಂಡಲಕ್ಕೆ ಮುಜುಗರ ಉಂಟು ಮಾಡಿದ್ದರು. ಪರಿಣಾಮವಾಗಿ ಸರ್ಕಾರ ಈ ಸುಗ್ರೀವಾಜ್ಞೆಯನ್ನು ಹಿಂಪಡೆಯಿತು. ಕಾನೂನು, ನ್ಯಾಯ ಶಾಸ್ತ್ರ,ನ್ಯಾಯಾಂಗದ ಕುರಿತು ಅನನುಭವಿ ರಾಹುಲ್ ಗಾಂಧಿ ಅಂದು ಬಹಿರಂಗವಾಗಿ ತೋರಿದ ಹುಚ್ಚಾಟದ ಪರಿಣಾಮವಾಗಿ ಜನ ಪ್ರತಿನಿಧಿಗಳಿಗೆ ಸ್ಥಳೀಯ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲ್ಪಟ್ಟರೆ ಸಾಕು ಅವರ ಸ್ಥಾನಕ್ಕೆ ಚ್ಯುತಿ ಬಂದಿತೆಂದೇ ಅರ್ಥ. ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಸಹ ಅವರ ಸ್ಥಾನಮಾನ ಉಳಿಯುವುದಿಲ್ಲ.

ಕರ್ನಾಟಕದ ಇಬ್ಬರು ಬಿಜೆಪಿ ಶಾಸಕರಿಗೆ ಇತ್ತೀಚೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಶಿಕ್ಷೆಯನ್ನು ಲಂಚ ಭ್ರಷ್ಟಾಚಾರದ ಪ್ರಕರಣದಲ್ಲಿ ವಿಧಿಸಿದೆ. ರಾಹುಲ್ ಗಾಂಧಿಯವರಿಗೆ ಅನುಸರಿಸಿದ ಮಾನದಂಡವನ್ನು ಇಲ್ಲಿನ ವಿಧಾನಸಭಾಧ್ಯಕ್ಷರು / ವಿಧಾನಸಭಾ ಕಾರ್ಯದರ್ಶಿಗಳ ಕಛೇರಿ ಏಕೆ ಅನುಸರಿಸುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ. ಈ ಕುರಿತು ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಸ್ವಯಂ ವಕೀಲರೂ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ವಿಧಾನಸೌಧದ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸುತ್ತಿಲ್ಲ ಎಂಬುದು ಸಹ ನಿಗೂಢವಾಗಿದೆ.

– ಜಿ.ಟಿ.ನರೇಂದ್ರ ಕುಮಾರ್, ವಕೀಲರು ಹಾಗೂ ಕಾನೂನು ಸಲಹೆಗಾರರು, ಬೆಂಗಳೂರು

Leave a Reply