ಹೆಬ್ಬಗೋಡಿ ರೇವ್ ಪಾರ್ಟಿ ಪ್ರಕರಣ: ಹೇಮಾ ಕಸ್ಟಡಿ ಅವಧಿ ವಿಸ್ತರಣೆ

2 years ago

ಬೆಂಗಳೂರು: ಬೆಂಗಳೂರು ನಗರದ ಹೊರವಲಯದ ಹೆಬ್ಬಗೋಡಿಯ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಬಂಧಿತರಾಗಿರುವ ತೆಲುಗು ನಟಿ ಹೇಮಾ ಅವರಿಗೆ ಹಲವಾರು ಡ್ರಗ್ಸ್ ಪೆಡ್ಲರ್ ಗಳ ಜೊತೆ ನಿಕಟವಾದ ಸಂಬಂಧ ಇರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ಮಾತ್ರವಲ್ಲದೆ ದೇಶದ ಹಲವೆಡೆ ನಡೆದ ಡ್ರಗ್ ಪಾರ್ಟಿಗಳಲ್ಲಿ ಇವರು ಪಾಲ್ಗೊಳ್ಳುತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೇಮಾ ಅವರನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕಸ್ಟಡಿಗೆ ಪಡೆದಿರುವ ನಟಿ ಹೇಮಾರನ್ನು ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಜನರ ರಕ್ತ ಪರೀಕ್ಷೆ ವೇಳೆ 86 ಜನ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದ್ದು,ಈ ಸಂಬಂಧ ಈಗಾಗಲೇ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದಲ್ಲದೆ, ಪಾರ್ಟಿಯಲ್ಲಿದ್ದ ಪ್ರಮುಖರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ.

ಮೊದಲ ದಿನವೇ ನಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಎಂದು ಸುಳ್ಳು ಹೇಳಿದ್ದ ಹೇಮಾ, ನಂತರ ಪೊಲೀಸರಿಗೆ ಹೆಸರು, ವಿಳಾಸ ತಪ್ಪು ವಿವರ ನೀಡಿ ತನಿಖೆ ದಾರಿ ತಪ್ಪಿಸಲು ನೋಡಿದ್ದರು. ವಿಚಾರಣೆಗೆ ಕರೆದಾಗಲೂ ಕೂಡ ಅನಾರೋಗ್ಯ ಸಮಸ್ಯೆ ನೆಪದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ ಎರಡು ದಿನಗಳ ಹಿಂದೆ ವಿಚಾರಣೆಗೆ ಬಂದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಪೊಲೀಸ್ ವಿಚಾರಣೆಯಲ್ಲಿ ಹೇಮಾ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಕೆಲ ಪೆಡ್ಲರ್ಗಳ ಜೊತೆಗೂ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಫಾರ್ಮ್ ಹೌಸ್ನಲ್ಲಿ ಡ್ರಗ್ಸ್ ಪಾರ್ಟಿ ಮಾತ್ರವಲ್ಲದೇ ಕೆಲ ಅಕ್ರಮ ಚಟುವಟಿಕೆಗಳು ಕೂಡ ನಡೆದಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ.

ಆಗಮಿಸಿದ ಯುವತಿಯರಿಗೆ ಅಲ್ಲಿ ಪರಿಚಯವೇ ಇರಲಿಲ್ಲ. ಅಷ್ಟೇ ಅಲ್ಲದೇ ಲಕ್ಷಾಂತರ ರೂ. ಪತ್ತೆಯಾಗಿರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಆನೇಕಲ್ ಜಿಲ್ಲಾ ಕೋರ್ಟ್ ಮುಂದೆ ಹೇಮಾ ಅವರನ್ನು ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು ಈ ಸಂಬಂಧ ಕೆಲ ದಾಖಲೆಗಳು, ವಿಚಾರಣೆಯಲ್ಲಿ ಸಿಕ್ಕ ಮಾಹಿತಿಯನ್ನು ಕೋರ್ಟ್ ಮುಂದಿಟ್ಟು ಇನ್ನೂ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

Leave a Reply