ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿ ಸೇರಿ ಗಡಿ ಜಿಲ್ಲೆಯ ಹಲವೆಡೆ ಕಳೆದ ಐವತ್ತು ವರ್ಷಗಳಿಂದ ಪುಂಡಾಟಿಕೆಯಲ್ಲಿ ತೊಡಗಿದೆ. ಅವರ ಪುಂಡಾಟಿಕೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಸಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಅವರಿಗೆ ಸೌಹಾರ್ದಯುತವಾಗಿ ಇರಲು ಗೊತ್ತಿಲ್ಲ ಎಂದರು.
ಮಹಾರಾಷ್ಟ್ರ- ಕರ್ನಾಟಕ ಮುಖ್ಯಮಂತ್ರಿಗಳ ಹಾಗೂ ಪ್ರಮುಖರ ಜೊತೆಗೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಭೆ ಮಾಡಿದ್ದಾರೆ. ಮಹಾರಾಷ್ಟ್ರ ಸಚಿವರಿಗೂ ತಾಕೀತು ಮಾಡಿದ್ದಾರೆ. ಇನ್ನು ಸಹ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕ್ಯಾತೆ ಮುಂದುವರಿದದ್ದು ಸರಿಯಲ್ಲ ಎಂದರು.
ಪೊಲೀಸರಿಗೆ ಸೂಚನೆ: ಈ ನಡುವೆ, ವಿಧಾನ ಮಂಡಲ ಅಧಿವೇಶನ ಸಮಯದಲ್ಲೇ ಎಂ.ಇ.ಎಸ್. ಮಹಾಮೇಳಾವ್ ನಡೆಸುವ ಮೂಲಕ ಶಾಂತಿಭಂಗಕ್ಕೆ ಯತ್ನಿಸುತ್ತಿದ್ದು, ಈ ಬಗ್ಗೆ ವ್ಯಾಪಕ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿದರು.
ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ 6 ಮಂದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 11 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 43 ಡಿವೈಎಸ್ಪಿಗಳು, 95 ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 241 ಪಿಎಸ್‌ಐ, 298 ಎಎಸ್‌ಐ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಕರೆಸಿದ 2,829 ಹೆಡ್‌ಕಾನ್‌ಸ್ಟೆಬಲ್‌ಗಳು, 800 ಸಿಬ್ಬಂದಿಯ ಕೆಎಸ್‌ಆರ್‌ಪಿ ತುಕಡಿಗಳು, 170 ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ (ಕ್ಯುಆರ್‌ಟಿ), 35 ಗರುಡಾ (ವಾಹನ ತಪಾಸಣೆ) ತಂಡ, 130 ಎಎಸ್‌ಸಿಗಳು, 100 ಮಂದಿ ವೈರ್‌ಲೆಸ್ ಸಿಬ್ಬಂದಿ, 100 ಹೋಮ್‌ಗಾರ್ಡ್‌ಗಳು ಶಸ್ತ್ರಸಜ್ಜಿತರಾಗಿ ನಿಲ್ಲಲಿದ್ದಾರೆ.
ಬೆಳಗಾವಿ ನಗರದ ಆಯಕಟ್ಟಿನ ಸ್ಥಳಗಳು, ಸೂಕ್ಷ್ಮ ಪ್ರದೇಶಗಳು, ಗ್ರಾಮೀಣ ಭಾಗ, ಸುವರ್ಣ ಸೌಧದ ಆವರಣ, ಸಮೀಪದಲ್ಲಿ ಮಾಡಿದ ಪ್ರತಿಭಟನಾ ಸ್ಥಳಗಳು, ಸೌಧದ ಸುತ್ತಲಿನ ಗ್ರಾಮಗಳು ಹೀಗೆ ಬೇರೆಬೇರೆ ಸ್ಥಳಗಳಿಗೆ ಆದ್ಯತೆ ಮೇರೆಗೆ ಸಿಬ್ಬಂದಿ ನಿಯೋಜನೆ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
26 ಕಡೆ ಚೆಕ್‌ಪೋಸ್ಟ್: ಕರ್ನಾಟಕ– ಮಹಾರಾಷ್ಟ್ರ ಗಡಿಗಳ ಮಧ್ಯೆ ಒಟ್ಟು 23 ಮಾರ್ಗಗಳು ಇವೆ. ಇದರೊಂದಿಗೆ ಮತ್ತೆ ಮೂರು ಸೇರಿ ಒಟ್ಟು 26 ಚೆಕ್‌ಪೋಸ್ಟ್ ತೆರೆಯಲಾಗಿದೆ. ಅಗ್ನಿಶಾಮಕ ದಳದ 12 ವಾಹನ, 16 ಆಂಬುಲೆನ್ಸ್, 1 ಗರುಡಾ ಪಡೆ, 60 ಸರ್ಕಾರಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.




