ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು: ವಿ.ಸೋಮಣ್ಣ

4 years ago

ಬೆಂಗಳೂರು: ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಪೋಲಿಯೋ ಒಂದು ಭಯಾನಕ ರೋಗ, ಈ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸೌಧ ಅವರಣದಲ್ಲಿ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ 5 ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೊಲಿಯೋ ಲಸಿಕೆ ಹಾಕುವ ಮೂಲಕ ಪಲ್ಸ್ ಪೊಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು 1995ರಲ್ಲಿ ಪ್ರಾರಂಭವಾದ ಪಲ್ಸ್ ಪೊಲಿಯೋ ಅಭಿಯಾನ ಬಹಳಷ್ಟು ಪ್ರಗತಿಯನ್ನು ಕಂಡಿದ್ದು ವಿಶ್ವ ಆರೋಗ್ಯ ಸಂಸ್ಥೆಯು 2014ರ ಮಾರ್ಚ್ 27ರಂದು ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದೆ ಎಂದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ಪೊಲಿಯೋ ವೈರಾಣು ಪತ್ತೆಯಾಗದಿರುವುದು ಬಹಳ ಸಂತಸದ ವಿಷಯ. ಪೊಲಿಯೋ ಲಸಿಕಾ ಅಭಿಯಾನ ನಡೆಯಲಿದ್ದು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ 2 ಹನಿ ಪಲ್ಸ್ ಪೊಲಿಯೋ ಲಸಿಕೆಯನ್ನು ಹಾಕಿಸಬೇಕು. ಈ ಲಸಿಕೆಯನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಲ್ಲ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ,  ಹಾಗೂ ಸಂಚಾರಿ ಘಟಕಗಳಲ್ಲಿ ಇಂದು ಬೆಳಿಗ್ಗೆ ಗಂಟೆ 8 ರಿಂದ ಸಂಜೆ 5ರ ವರೆಗೆ ನೀಡಲಾಗುವುದು. ಇದಾದ ಬಳಿಕ ಸ್ವಯಂಸೇವಕರು ಪ್ರತಿ ಮನೆಗೆ ಭೇಟಿ ಲಸಿಕೆ ಹಾಕಲಾಗುತ್ತದೆ. ಎರಡು ಹನಿ ಪೋಲಿಯೋ ಲಸಿಕೆ ಮಕ್ಕಳಿಗೆ ಹಾಕಿಸುವುದರಿಂದ ಮಕ್ಕಳ ಜೀವ ರಕ್ಷಣೆ ಸಿಗುವುದು ಎಂದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡ ಮತ್ತು ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply