ದೆಹಲಿ: ದೇಶದಲ್ಲಿ ಎಲ್ಲ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುವ ಪ್ರಯತ್ನ ಜಾರಿಯಲ್ಲಿದೆ. ಇದೀಗ ಹೆಲ್ತ್ ಮಿಷನ್ ಅಡಿಯಲ್ಲಿ ದೇಶದ ಸಮಸ್ತ ನಾಗರಿಕರಿಗೆ ಆರೋಗ್ಯ ಕಾರ್ಡ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದೆ. ಸರ್ಕಾರ ಪ್ರತಿ ವ್ಯಕ್ತಿಗೂ ವಿಶಿಷ್ಟ ಆರೋಗ್ಯ ಕಾರ್ಡ್ ನೀಡಲು ಸನ್ನದ್ಧವಾಗಿದೆ.
ಆರೋಗ್ಯ ಕಾರ್ಡ್ ಸಂಪೂರ್ಣ ಡಿಜಿಟಲ್ ಕಾರ್ಡ್ ಆಗಿರಲಿದ್ದು, ಆಧಾರ್ ಕಾರ್ಡ್ ಮಾದರಿಯಲ್ಲಿಯೇ ನಂಬರ್ ಮತ್ತು ವಿನ್ಯಾಸಗೊಳ್ಳಲಿದೆ. ಇದರಲ್ಲಿ ರೋಗಿಯ ಆರೋಗ್ಯದ ಕುರಿತ ಸಂಪೂರ್ಣ ಮಾಹಿತಿ ಸಿಗಲಿದೆ. ವಿಶಿಷ್ಟ ಕಾರ್ಡ್ ನಿಂದ ಯಾರಿಗೆ ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಲಿದೆ.
ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ವಿಶಿಷ್ಟ ಆರೋಗ್ಯ ಕಾರ್ಡ್ ನಲ್ಲಿ ದಾಖಲಿಸಲು ನುರಿತ ನಿಪುಣರ ತಂಡ ಸಕ್ರಿಯವಾಗಿದೆ. ಈ ಕಾರ್ಡ್ ಒಂದಿದ್ದರೆ ಸಾಕು ರೋಗಿ, ತನ್ನ ಹಿಂದಿನ ರೋಗಸಂಬಂಧಿ ದಾಖಲೆಗಳನ್ನು ಒಳಗೊಂಡ ಫೈಲ್ ಇತ್ಯಾದಿಗಳನ್ನು ಕೊಂಡೊಯ್ಯುವ ಅಗತ್ಯ ಕೂಡ ಇರುವುದಿಲ್ಲ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ರೋಗಿಯ ಆರೋಗ್ಯ ಐಡಿ ನೋಡುವ ಮೂಲಕವೇ ಎಲ್ಲ ಮಾಹಿತಿಯನ್ನು ಪಡೆಯಲು ಅನುಕೂಲವಾಗಲಿದೆ. ಇದರ ಆಧಾರದಡಿ ಚಿಕಿತ್ಸೆ ನೀಡಲು ವೈದ್ಯರಿಗೆ ಮಾಹಿತಿ ಸಿಗಲಿದೆ.
ಈ ಕಾರ್ಡ್ ನಲ್ಲಿ ವ್ಯಕ್ತಿಯು ತನಗೆ ಲಭ್ಯವಿರುವ ಸರ್ಕಾರಿಯೋಜನೆಗಳ ಕುರಿತು ಮಾಹಿತಿ ಪಡೆಯಬಹುದು. ಆಯುಷ್ಮಾನ್ ಭಾರತ್ ಅಡಿಯಲ್ಲಿ ರೋಗಿಯು ಚಿಕಿತ್ಸಾ ಸೌಲಭ್ಯಗಳ ಪ್ರಯೋಜನವನ್ನು ಪಡೆಯುತ್ತಾನೋ ಇಲ್ಲವೋ ಎಂಬುವುದನ್ನು ತಿಳಿಯಬಹುದು.



