ಬೆಂಗಳೂರು: ರಾಜ್ಯದಲ್ಲಿರುವ ಕೈಗಾರಿಕೆಗಳು ಉದ್ಯೋಗ ನೀಡುವಾಗ ಪ್ರತಿಭಾವಂತ ಯುವ ಕನ್ನಡಿಗರಿಗನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಘಟಕಕ್ಕೆ ಭೇಟಿ ನೀಡಿ ಕಂಪನಿಯ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅವರು, ಕಂಪನಿಯಲ್ಲಿ ಸ್ಥಳೀಯ ಪ್ರತಿಭಾವಂತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಹಾಗೂ ಅನಗತ್ಯವಾಗಿ ಹೊರರಾಜ್ಯದವರನ್ನು ಕರೆತಂದು ತುಂಬಿಸಬಾರದು ಎಂದು ಸಲಹೆ ನೀಡಿದರು.
ಹೊಸ ಘಟಕ ಸ್ಥಾಪನೆ ಹಾಗೂ ನೇಮಕ ಸಂದರ್ಭದಲ್ಲಿ ಸ್ಥಳೀಯ ಯುವಕರನ್ನೇ ಪರಿಗಣಿಸಬೇಕು. ಕನ್ನಡಿಗರಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ. ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಇದ್ದು, ಪ್ರತಿಭಾವಂತ ಮಾನವ ಸಂಪನ್ಮೂಲ ಲಭ್ಯವಿದೆ. ಹೀಗಾಗಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಬೇಕು ಎಂದರು.
ಕಂಪನಿಯ ಅಧಿಕಾರಿಗಳ ಸಭೆಗೂ ಮುನ್ನ ಎಚ್.ಡಿ.ಕುಮಾರಸ್ವಾಮಿಯವರು, ಟೊಯೊಟಾ ಕಿರ್ಲೋಸ್ಕರ್ ಕಾರು ತಯಾರಿಕಾ ಘಟಕ ವೀಕ್ಷಿಸಿದರು. ಫಾರ್ಚುನರ್, ಇನ್ನೋವಾ ಹಾಗೂ ಟೊಯೊಟಾ ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಘಟಕಗಳಿಗೆ ಭೇಟಿ ನೀಡಿದರು. ಅಲ್ಲದೆ, ಅಲ್ಲಿನ ತಾಂತ್ರಿಕ ಮಾಹಿತಿ, ಉದ್ಯೋಗಿಗಳಿಗೆ ನೀಡಲಾಗಿರುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ವಿವರ ಪಡೆದುಕೊಂಡರು.
ಜೊತೆಗೆ, ಟೊಯೊಟಾ ಕಿರ್ಲೋಸ್ಕರ್ ಕೈಗಾರಿಕಾ ಕ್ಯಾಂಪಸ್ಸಿನಲ್ಲಿ ನಿರ್ಮಿಸಲಾಗಿರುವ ಇಕೋ ಝೋನ್, ಬಿಡದಿ ಕೈಗಾರಿಕೆ ಸಂಘದ ಕಚೇರಿಗೂ ಭೇಟಿ ನೀಡಿದರು. ಅಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರ ಜತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಮಂಜುನಾಥ್, ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಜು ಕೆರಕಲೆ, ಸ್ವಪ್ನೇಶ್ ಮಾರು, ಉಪಾಧ್ಯಕ್ಷ ಶಂಕರ್, ವಿನಯ್ ಹಾಗೂ ಕಾರ್ಯನಿರ್ವಾಹಕ ಸಲಹೆಗಾರ ಪರಶುರಾಮ್ ಮುಂತಾದವರು ಹಾಜರಿದ್ದರು.



