ಬೆಂಗಳೂರು: ಇಂದಿನ ಬೆಳಗಿನ ಶಾಕ್! 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 15 ರೂ. ಹೆಚ್ಚಳ. ಈ ಸಿಲಿಂಡರ್ ಬೆಲೆ ಈಗ 900 ರೂ. ಗಡಿಯಲ್ಲಿದೆ. 7 ವರ್ಷಗಳ ಅಚ್ಛೇದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಕೋವಿಡ್, ಬೆಲೆ ಏರಿಕೆಯಿಂದ ಜನಜೀವನ ಹಳ್ಳಹಿಡಿದು ಹೋಗಿದೆ. ಬಡ ಭಾರತದ ಜೀವ ಹಿಂಡುತ್ತಿರುವ ಶ್ರೀಮಂತ ಭಾರತದ ಸಾರಥ್ಯ ವಹಿಸಿರುವವರು ಒಂದಿಬ್ಬರು ಉದ್ಯಮಗಳ ಜೋಳಿಗೆ ತುಂಬಿ ಜನರ ಬಾಳಿಗೆ ಕೊಳ್ಳಿ ಇಡುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಅನಿಯಂತ್ರಿತ ಬೆಲೆ ಏರಿಕೆ ಮಾಪಿಯಾ ಹಿಂದೆ ಇರುವ ಶಕ್ತಿಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ ಎಂದು ಸವಾಲೆಸೆದಿದ್ದಾರೆ.
ದುಡಿಯುವ ಕೈಗಳಿಗೆ ಕೆಲಸವಿಲ್ಲ. ಅನ್ನಕ್ಕಾಗಿ ಹಾಹಾಕಾರವಿದೆ. ಸೇವೆ ಎಂದು ಸೋಗಲಾಡಿತನ ತೋರಿಸುವ RSS ಬೆಲೆ ಏರಿಕೆ ಬಗ್ಗೆ ಮಾತನಾಡಬೇಕು. ಬಡವರ ಭಾರತ, ಶ್ರೀಮಂತರ ಭಾರತದ ಬಗ್ಗೆ ಹೇಳಬೇಕು. ಅದಕ್ಕೆ ಕಾರಣವಾದ 7 ವರ್ಷಗಳ ಆಡಳಿತದ ಬಗ್ಗೆ ದನಿಯೆತ್ತಬೇಕು. ಇಲ್ಲವಾದರೆ ಬಡವರ ಭಾರತದ ಆಕ್ರೋಶಕ್ಕೆ ನೀವು ತುತ್ತಾಗುವುದು ತಪ್ಪುವುದಿಲ್ಲ. ಎಂದು ವಾಗ್ದಾಳಿ ನಡೆಸಿದ್ದಾರೆ.



