ಬೆಂಗಳೂರು: ಸಿ.ಟಿರವಿಯರೇ. ನಾನು ಸತ್ಯದ ಪರ. ಸಿ.ಟಿ.ರವಿ ಅವರೇ, ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು ಎಂದಿದ್ದೀರಿ. RSS ಬಗ್ಗೆ ಜ್ಞಾನಾರ್ಜನೆ, ಅಧ್ಯಯನ, ಸಂಶೋಧನೆ ಮಾಡಲು ಸಂಘದ ಶಾಖೆಗೆ ಬನ್ನಿ ಎಂದು ನನಗೆ ಆಹ್ವಾನ ಕೊಟ್ಟಿದ್ದೀರಿ. ನಾನು ಯಾವುದೇ ಸಂಘ, ಸಂಸ್ಥೆ ಅಥವಾ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಕೋರೋನ ಲಾಕ್ ಡೌನ್ ವೇಳೆಯಲ್ಲಿ ಹಲವಾರು ಲೇಖಕರು ಬರೆದ ಮಹತ್ವದ ಪುಸ್ತಕಗಳನ್ನು ಓದಿದೆ. ಇತಿಹಾಸದ ಕೆಲ ಅಂಶಗಳ ಬಗ್ಗೆಯೂ ಅಧ್ಯಯನ ಮಾಡಿದೆ. ಆ ಪುಸ್ತಕಗಳಲ್ಲಿ ಬರೆಯಲಾಗಿರುವ ಕೆಲ ಅಂಶಗಳನ್ನಷ್ಟೆ ನಾನು ಹೇಳಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ, ಮೋದಿ ಸರ್ಕಾರವಲ್ಲ. ಅಸ್ತಿತ್ವದಲ್ಲಿ ಇರುವುದು ಆರ್.ಎಸ್.ಎಸ್. ಸರ್ಕಾರ ಎಂದು ಕುಮಾರಸ್ವಾಮಿ ಹೇಳಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ಟ್ವಿಟರ್ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, ಪ್ರಸ್ತುತ ದೇಶ ಹೋಗುತ್ತಿರುವ ಹಾದಿ ನೋಡಿದರೆ ಜನರ ಮುಂದೆ ಸತ್ಯ ಇಡುವುದು ಅತ್ಯಂತ ಅಗತ್ಯವೆಂದು ನನಗೆ ಅನಿಸಿತು. ವಾಸ್ತವವಾಗಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ. ಸತ್ಯ ಮುಚ್ಚಿಟ್ಟರೆ ತಮ್ಮ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರಿಗೆ ಅಪಚಾರ ಮಾಡಿದಂತೆ ಆಗುತ್ತದೆ ಎಂದಿದ್ದಾರೆ.
ಯಾವತ್ತಿದ್ದರೂ ಜನರಿಗೆ ಸತ್ಯ ಗೊತ್ತಾಗಲೇಬೇಕು. ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ. ನನ್ನ ಹೇಳಿಕೆ ಯಾರ ಪರವೂ ಇಲ್ಲ ಅಥವಾ ವಿರೋಧವೂ ಇಲ್ಲ. ಸತ್ಯ ಚರ್ಚೆ ಆಗಬೇಕು ಎಂಬುದು ನನ್ನ ಅಭಿಲಾಷೆ. ನಾನು ಸತ್ಯದ ಪರ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ʼಆಪರೇಷನ್ ಕಮಲʼದಂಥ ʼಅನೈತಿಕʼ, ʼನಿರ್ಲಜ್ಜʼ, ʼನೀಚʼ ರಾಜಕಾರಣವನ್ನು RSS ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಸಿ.ಟಿ.ರವಿಯವರೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದಾರೆ. ಇವತ್ತಿನ ಪ್ರಜಾವಾಣಿ ಪತ್ರಿಕೆ ಓದಿ. ಅದರಲ್ಲಿ “ಬದುಕು ಸಾಕೆನಿಸಿದೆ-ಭಗವಂತನಿಗೂ ಕರುಣೆ ಇಲ್ಲ”ಎನ್ನುವ ವರದಿ ಇದೆ. ಬೆಂಗಳೂರಿನ ಶ್ರೀನಿವಾಸನಗರದ ಬಿ.ಆರ್.ವಾಸುದೇವ ಎಂಬ ಬೀದಿ ಬದಿ ವ್ಯಾಪಾರಿ ಹೇಳಿರುವ ಮಾತುಗಳನ್ನು ಒಮ್ಮೆ ಓದಿ. ಆಗಲಾದರೂ ನಿಮ್ಮ ಕಲ್ಲು ಹೃದಯ ಕರಗಬಹುದು ಎಂದು ಸಲಹೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ 2,000 ರೂ. ಪರಿಹಾರ ಪಡೆಯಲು 100 ರೂ. ಲಂಚ ಕೇಳಿದ ವರದಿಗಳು ಬಂದಿವೆ. ಇದಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ RSS ಶಾಖೆಗಳಲ್ಲಿ ನಿಮಗೆಲ್ಲರಿಗೂ ಏನನ್ನೂ ಹೇಳಿಕೊಡುವುದಿಲ್ಲವಾ ಸಿ.ಟಿ.ರವಿಯವರೇ? ಎಂದು ಕಾಲೆಳೆದಿದ್ದಾರೆ.
ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು. ಜನರ ಬವಣೆಗಳ ನಿವಾರಣೆ ನಿಟ್ಟಿನಲ್ಲಿ ದುಡಿಯಬೇಕೆ ಹೊರತು ಬದುಕಿಗೇ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು. RSS ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ ಎಂದಿದ್ದಾರೆ.
ಜನ ಪ್ರತಿನಿಧಿಗಳನ್ನು, ಸರಕಾರಗಳನ್ನು, ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ. ಅರ್ಥ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.




