ಸಂವಿಧಾನ ನೀಡಿದ ಅಧಿಕಾರ ಸೌಲಭ್ಯವನ್ನು ಪಡೆದು ಸಂವಿಧಾನದ ಆಶಯಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪ್ರಧಾನಿಗಳು ತಮ್ಮ ಸ್ಥಾನದ ಘನತೆ ಮತ್ತು ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದ್ದಾರೆ.
ಎಲ್ಲ ಧರ್ಮಗಳು ಮತ್ತು ಆಚರಣೆಗಳನ್ನು ಗೌರವಿಸುವುದು ಮತ್ತು ಎಲ್ಲ ಧರ್ಮೀಯರ ಧಾರ್ಮಿಕ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ್ದು
ಸಂವಿಧಾನ ರಕ್ಷಕರಾದ ಪ್ರಧಾನ ಮಂತ್ರಿಗಳ ಆದ್ಯ ಜವಾಬ್ದಾರಿ.
ಆದರೆ ನಮ್ಮ ಪ್ರಧಾನಿಗಳು ತಾವು ಪ್ರಧಾನಿ ಎಂಬುದನ್ನು ಮರೆತು ತಾವೇ ಒಂದು ನಿರ್ದಿಷ್ಟ ಧರ್ಮದ ಪರಿಚಾರಕರಂತೆ ವರ್ತಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
ವರ್ಷವಿಡೀ ಕಾರ್ಪೊರೇಟ್ ಮಂದಿಯ ಸೇವೆ ಮಾಡಿ ಅವರನ್ನು ಶ್ರೀಮಂತರನ್ನಾಗಿಸುವ ಇವರು ಗುಜರಾತ್ ಚುನಾವಣೆ ಸಮಯದಲ್ಲಿ ಮಾತ್ರ ದೇವಾಲಯ ಸೇವೆಗೆ ಬರುವುದು ಹಾಸ್ಯಾಸ್ಪದ ಸಂಗತಿ.
ಪ್ರಧಾನಿ ಮೋದಿಯವರು ದೇಶದ ಜನರಿಗೆ ಒಳಿತಾಗಲಿ ಎಂದು ಮಹಾಕಾಲ ದೇವರ ಪೂಜೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿಸಿ, ಅಡುಗೆ ಸಿಲಿಂಡರ್ ಬೆಲೆಯನ್ನು 400 ರಿಂದ 1000 ರೂಪಾಯಿ ಗಡಿ ದಾಟಿಸಿ, ದೇಶದ ಜಿಡಿಪಿಯನ್ನು 8.5% ನಿಂದ 5.6% ಗೆ ಇಳಿಸಿ, ಜನರ ಕೊಳ್ಳುವ ಶಕ್ತಿಯನ್ನೇ ನಾಶ ಮಾಡಿರುವ ಇವರು ಜನರಿಗೆ ಒಳ್ಳೆದಾಗಲಿ ಎಂದು ಪ್ರಾರ್ಥಿಸಿದರೆ, ಅದನ್ನು ಕಂಡು ನಗಬೇಕೋ ಅಳಬೇಕೋ?
ಪ್ರಧಾನಿಗಳೇ,
ಜನರಿಗೆ ಒಳಿತಾಗಬೇಕು ಎಂಬುದೇ ನಿಮ್ಮ ಉದ್ದೇಶವಾಗಿದ್ದರೆ ಮೊದಲು ನಿಮ್ಮ ಕಚೇರಿಗೆ ಹೋಗಿ ಬೆಲೆ ಏರಿಕೆ ಕಡಿಮೆ ಮಾಡಿ, ಒಂದಷ್ಟು ಜನಪರ ಯೋಜನೆ ಹಾಗೂ ಆಡಳಿತಾತ್ಮಕ ನೀತಿಗಳನ್ನು ರೂಪಿಸಿ.
ಆಗ ನಿಮ್ಮ ಪೂಜೆಯ ಉದ್ದೇಶ ಸಾರ್ಥಕಗೊಳ್ಳಲಿದೆ.
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ



