ಧರ್ಮಸ್ಥಳ ಬಸ್ ನಿಲ್ದಾಣದ ಸ್ವಚ್ಛತೆ ಹೊಣೆಯನ್ನು ಶ್ರೀ ಮಂಜುನಾಥನಿಗೆ ವಹಿಸಲಾಗಿದೆಯೇ?

2 years ago

ಧರ್ಮಸ್ಥಳ ಕನ್ನಡಿಗರ ಶ್ರದ್ಧಾಕೇಂದ್ರ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಕಾಲ್ನಡಿಗೆ, ಸೈಕಲ್, ವೈಯಕ್ತಿಕ, ಬಾಡಿಗೆ ವಾಹನ, ಸಾರ್ವಜನಿಕ ಸಂಚಾರ ಸೇವೆಗಳನ್ನು ಬಳಸಿಕೊಂಡು ಪ್ರತಿದಿನ ಸಾವಿರಾರು ಜನ, ಭಕ್ತರು, ವ್ಯಾಪಾರಿಗಳು ಸಂಚರಿಸುತ್ತಾರೆ. ಇಂತಹ ಶ್ರದ್ಧಾಕೇಂದ್ರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ.

ಬಸ್ ನಿಲ್ದಾಣದ ಸುತ್ತಮುತ್ತೆಲ್ಲ ಎಲ್ಲೆಂದರಲ್ಲಿ ಪೇಪರ್, ಕಸ, ನೀರಿನ ಬಾಟಲ್, ತಂಪು ಪಾನೀಯಗಳ ಪ್ಲಾಸ್ಟಿಕ್ ಮತ್ತು ತಗಡಿನ ಬಾಟಲ್ ಗಳು ಚೆಲ್ಲಾಡಿದ ದೃಶ್ಯ ಕಂಡುಬರುವುದು ಇಲ್ಲಿ ಸಾಮಾನ್ಯವಾಗಿದೆ. ಬಸ್ ನಿಲ್ದಾಣದಲ್ಲಿ ಎತ್ತ ನೋಡಿದರೂ ಇವೇ ದೃಶ್ಯಗಳು ಕಂಡುಬರುತ್ತವೆ.

ಕ್ಯಾಂಟೀನ್ ನಲ್ಲಿಲ್ಲ ಸ್ವಚ್ಛತೆ, ರುಚಿಯ ಸುಳಿವು: ಧರ್ಮಸ್ಥಳಕ್ಕೆ ಉಡುಪಿ, ಮಂಗಳೂರು ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಇಲ್ಲಿನ ಬಸ್ ನಿಲ್ದಾಣದಲ್ಲಿಯೇ ರಾತ್ರಿ ಊಟಕ್ಕೆ ನಿಲ್ಲಿಸುತ್ತಾರೆ. ಊಟದಲ್ಲಿ ಉಪ್ಪು, ಹುಳಿ, ಖಾರ ಇರುವುದಿಲ್ಲ. ಸ್ವಚ್ಛತೆ ಎಂದರೆ ಏನೆಂದೇ ಈ ಕ್ಯಾಂಟೀನ್ ನಲ್ಲಿ ಗೊತ್ತಿಲ್ಲ. ದರ ಕೈಗೆಟುತ್ತದೆ ಎಂಬುದನ್ನು ಬಿಟ್ಟರೆ, ಶುಚಿ, ರುಚಿಯ ಕುರಿತು ಅಆಇಈ ಕೂಡ ಇಲ್ಲಿ ಗೊತ್ತಿಲ್ಲವೆಂದೇ ಹೇಳಬೇಕು.

ಇನ್ನು ಈ ಹೋಟೆಲ್ ನಲ್ಲಿ ಹಳೆಯ ಪ್ರಯಾಣಿಕರು ತಿಂದು ಬಿಟ್ಟಿರುವ ತಟ್ಟೆಗಳನ್ನು ಹೊಸ ಪ್ರಯಾಣಿಕರು ಸರಿಸಿ ತಾವೇ ಜಾಗ ಹೊಂದಿಸಿಕೊಂಡು ಊಟ, ಉಪಾಹಾರ ಮಾಡಿ ತೆರಳಬೇಕಾದ ಪರಿಸ್ಥಿತಿ ಇದೆ. ಸಕಾಲಕ್ಕೆ ಟೇಬಲ್ ಸ್ವಚ್ಛಗೊಳಿಸುವ ಕೆಲಸಕ್ಕೆ ಕೆಲಸಗಾರರೇ ಇಲ್ಲವೇನೋ ಎಂಬ ಶಂಕೆ ಮೂಡುತ್ತದೆ.

ಮೇ 15, 2024ರಂದು ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ

ಹೋಟೆಲ್ ನಲ್ಲಿರುವ ಸ್ವಚ್ಛತೆಯ ಕೊರತೆ, ರುಚಿಯ ಕುರಿತು ಅಸಮಾಧಾನಗೊಂಡ ಪ್ರಯಾಣಿಕರು ನಿರ್ವಾಹಕರ ಬಳಿ ಕೇಳಿದಾಗ, ‘ಏನು ಮಾಡುವುದು ಸಾರ್. ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ ಹೀಗಾಗಿದೆ. ಎಲ್ಲಿ ನೋಡಿದರೂ ಜನ, ಎಷ್ಟು ಅಂತ ಮೇಂಟೇನ್ ಮಾಡ್ತಾರೆ?’ ಎಂದು ಮರು ಪ್ರಶ್ನೆ ಹಾಕಿದರು. ‘ಈ ನಿಲ್ದಾಣ ಬಿಟ್ಟು ಹೊರಗೆ ಊಟಕ್ಕೆ ನಿಲ್ಲಿಸಬಹುದಲ್ಲಾ?’ ಎಂದರೆ ‘ನೀವು ಹೀಗೆ ಹೇಳ್ತೀರಿ. ಕೆಲವರು ಸೆಕ್ಯುರಿಟಿ ಪ್ರಾಬ್ಲಂ, ಹೆಚ್ಚು ಹಣ ಎಂಬ ಕಾರಣದಿಂದ ಖಾಸಗಿ ಹೋಟೆಲ್ ಗಳಲ್ಲಿ ನಿಲ್ಲಿಸಿದರೆ ತಕರಾರು ತೆಗೆಯುತ್ತಾರೆ. ನಾವೇನು ಮಾಡೋಣ ನೀವೇ ಹೇಳಿ ಸಾರ್’ ಎನ್ನುತ್ತಾರೆ.

ಮೇ 15, 2024ರಂದು ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ

ಮಹಿಳಾ ಶೌಚಾಲಯದಲ್ಲಿ ಚಿಲಕಗಳೇ ಇಲ್ಲ: ಹೌದು. ಇಲ್ಲಿನ ಮಹಿಳಾ ಶೌಚಾಲಯದಲ್ಲಿ ನೀರು ಮತ್ತು ಚಿಲಕ ಎರಡೂ ಇಲ್ಲ. ಆದರೆ ಹಣ ಸುಲಿಗೆಯಲ್ಲಿ ಮಾತ್ರ ಇಲ್ಲಿನ ನೌಕರ ಎತ್ತಿದ ಕೈ. ದೂರದೂರಿನಿಂದ ಪ್ರಯಾಣಿಸಿ ದಣಿದು ಆಗಮಿಸಿರುವ ಪ್ರಯಾಣಿಕರು ಬಸ್ ನಿಲ್ಲಿಸಿದ ತಕ್ಷಣ, ಉಪಾಹಾರ, ಊಟ ಮುಗಿಸಿ ಮತ್ತು ಶೌಚಾಲಯಕ್ಕೆ ಹೋಗಿ ವಾಪಸ್ ಬಸ್ ಹಿಡಿಯುವ ಧಾವಂತದಲ್ಲಿರುತ್ತಾರೆ.

ಧರ್ಮಸ್ಥಳದಲ್ಲಿನ ಶೌಚಾಲಯ ನಿರ್ವಹಣೆಯನ್ನು ಯಾವುದೋ ಉತ್ತರ ಭಾರತದ ಕಂಪನಿಗೆ ನೀಡಲಾಗಿದೆ ಎನಿಸುತ್ತದೆ. ಇಲ್ಲಿ ಕೆಲಸ ಮಾಡುವ ನೌಕರನಿಗೆ ಸಮವಸ್ತ್ರವಿಲ್ಲ. ಆತನಿಗೆ ಕನ್ನಡವೂ ಬರುವುದಿಲ್ಲ. ದಿನಾಂಕ 15.04.2024ರಂದು ರಾತ್ರಿ ವಯಸ್ಸಾದ ಇಬ್ಬರು ಹೆಣ್ಣುಮಕ್ಕಳು ಶೌಚಾಲಯ ಪ್ರವೇಶಿಸುವ ವೇಳೆ ಒಳಗೆ ಹೋಗುವ ಮುನ್ನ ಹಣ ನೀಡಿಯೇ ಹೋಗಬೇಕು ಎಂದು ಪ್ರವೇಶ ದ್ವಾರದಲ್ಲೇ ನೌಕರ ತಕರಾರು ತೆಗೆದು ನಿಲ್ಲಿಸಿದ್ದ. ಸಹ ಪ್ರಯಾಣಿಕರಲ್ಲಿ ಕೆಲವರು, ಶುಗರ್ ಕಂಪ್ಲೆಂಟ್ ಇರುವ ಹಿರಿಯ ನಾಗರಿಕರನ್ನು  ಹೀಗೆ ತಡೆದು ನಿಲ್ಲಿಸುವುದು ಮಾನವೀಯತೆಯಲ್ಲ ಎಂದು ತಕರಾರು ತೆಗೆದರು. ಆದರೆ ಪ್ರಯಾಣಿಕರ ತಕರಾರು ಅವನಿಗೆ ಅರಿವಾದರೆ ತಾನೇ? ಇಂತಹ ಪರಿಸ್ಥಿತಿ ಧರ್ಮಸ್ಥಳದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಶೌಚಾಲಯದ್ದಾಗಿದೆ.

ಇನ್ನು ಹೇಗೋ ಕಷ್ಟಪಟ್ಟು ನೌಕರನ ಚಕ್ರವ್ಯೂಹವನ್ನು ಹಣಕಟ್ಟಿ ಭೇದಿಸಿ ಒಳಪ್ರವೇಶಿಸಿದ ಹೆಣ್ಣುಮಕ್ಕಳಿಗೆ ಅಲ್ಲಿಗೆ ಯಾಕಾದರೂ ಬಂದೆವೋ ಎಂಬಂತಹ ಉಸಿರುಗಟ್ಟಿಸುವ ವಾತಾವರಣ. ಸ್ವಚ್ಛತೆಗೂ ಈ ಶೌಚಾಲಯಕ್ಕೂ ಯಾವುದೇ ಸಂಬಂಧವೇ ಇಲ್ಲ. ಕಡೆಗೆ ಹೇಗಾದರೂ ಕೆಲಸ ಮುಗಿಸಿಕೊಂಡು ತೆರಳೋಣವೆಂದು ಶೌಚಾಲಯದ ಒಳಗೆ ಹೋದರೆ, ಬಾಗಿಲನ್ನು ಹಾಕಿಕೊಳ್ಳಲು ಚಿಲಕಗಳೇ ಇಲ್ಲ. ಇದನ್ನೂ ಮೀರಿ ಹೇಗಾದರೂ ಮಾಡಿ ಕೆಲಸ ಮುಗಿಸಿ ಹೊರಡೋಣವೆಂದರೆ ನೀರೂ ಇಲ್ಲ. ಇಂತಹ ಪರಿಸ್ಥಿತಿಯನ್ನು ಮಹಿಳಾ ಪ್ರಯಾಣಿಕರು ಎದುರಿಸಬೇಕಿದೆ.

ಶೌಚಾಲಯ ಪ್ರವೇಶಿಸಿ ಅಸಹ್ಯಪಟ್ಟುಕೊಂಡು ಬಂದ ಹೆಣ್ಣಮಗಳೊಬ್ಬರು, ನೀರು ಇಲ್ಲ, ಬಾಗಿಲಿಗೆ ಚಿಲಕವೂ ಇಲ್ಲ. ನಾವು ಹಣವನ್ನೇಕೆ ಕೊಡಬೇಕು? ಎಂದು ಶೌಚಾಲಯದ ನೌಕರನನ್ನು ಪ್ರಶ್ನಿಸಿದರೆ ಮತ್ತದೆ ಭಾಷೆಯ ಸಮಸ್ಯೆ. ಹೆಣ್ಣುಮಕ್ಕಳು ಕೇಳುವ ಪ್ರಶ್ನೆಗೆ ಆತ ಕೊಡುವ ಉತ್ತರ ಅರ್ಥವಾಗುವುದಿಲ್ಲ, ಇವರ ಗೋಳು ಅವನಿಗೆ ಅರಿವಾಗುವುದಿಲ್ಲ. ಇನ್ನು ಪುರುಷರ ಶೌಚಾಲಯದಲ್ಲಿ ಕೂಡ ಇಂತದ್ದೆ ಪರಿಸ್ಥಿತಿ ಇದ್ದು ನೀರು ಸರಬರಾಜಾಗುತ್ತದೆ ಎಂಬುದೊಂದು ಸಮಾಧಾನಕರ ಅಂಶವಾಗಿದೆ.

ಮೇ 15, 2024ರಂದು ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ

ಧರ್ಮದರ್ಶಿ, ರಾಜ್ಯಸಭೆ ಸದಸ್ಯ ವೀರೇಂದ್ರ ಹೆಗಡೆಯವರು ಕುಡಿಯುವ ನೀರಿನ ವ್ಯವಸ್ಥೆಯನ್ನು ಇದೇ ಬಸ್ ನಿಲ್ದಾಣದಲ್ಲಿ ಮಾಡಿದ್ದಾರೆ. ನೀರಿನ ಘಟಕದ ಸುತ್ತಮುತ್ತ ಸ್ವಚ್ಛತೆಯ ಕೊರತೆ ಇದ್ದು, ಇಲ್ಲಿ ಯಾರಿಗೂ ನೀರು ಕುಡಿಯುವ ಮನಸೇ ಆಗದಂತಹ ಪರಿಸ್ಥಿತಿ ಇದೆ.

ಪ್ರತಿದಿನ ಕೆ.ಎಸ್.ಆರ್.ಟಿ.ಸಿ ಮತ್ತು ರಾಜ್ಯ ಸರ್ಕಾರ ಹಾಗೂ ಧರ್ಮಸ್ಥಳದ ಶ್ರೀಮಂಜುನಾಥನ ಸನ್ನಿಧಿಗೆ ಲಕ್ಷಾಂತರ ರೂ. ಆದಾಯವನ್ನು ತರುವ ಧರ್ಮಸ್ಥಳದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲೇ ಇಂತಹ ಅವ್ಯವಸ್ಥೆ ಇದ್ದರೆ, ಇನ್ನು ಯಾವುದೇ ಆದಾಯ ಇಲ್ಲದಂತಹ ನಿಲ್ದಾಣಗಳ ಪಾಡೇನು?

  • ಮಾಲ್ಗುಡಿ ಎಕ್ಸ್ಪೆಸ್ ಡೆಸ್ಕ್

Leave a Reply