ಹನುಮಾನ್ ಚಾಲೀಸಾ ಪಠಿಸಿದ ಬಿಜೆಪಿ ನಾಯಕರು

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಕಾಂಗ್ರೆಸ್ಸಿನ ಬಜರಂಗದಳ ನಿಷೇಧ ಪ್ರಸ್ತಾವನೆ ವಿರೋಧಿಸುವ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಗಳಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಗಮನ ಸೆಳೆದರು.

ಪಕ್ಷದ ಹುಬ್ಬಳ್ಳಿಯ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖಂಡರೊಂದಿಗೆ ಹನುಮಾನ್ ಚಾಲೀಸಾ ಪಠಿಸಿದರೆ, ರಾಜ್ಯ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಡಿಸಿದರು.

ರಾಜ್ಯ ಚುನಾವಣಾ ಉಸ್ತುವಾರಿ ಸಂಚಾಲಕಿ ಶೋಭಾ ಕರಂದ್ಲಾಜೆ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹನುಮಾನ ಚಾಲೀಸಾ ಪಠಿಸಿದರು.

ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನ ಧೋರಣೆ ವಿರೋಧಿಸಿ ರಾಜ್ಯದ ಎಲ್ಲೆಡೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಹಿಂದು ಧರ್ಮ ರಕ್ಷಣೆಗೆ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತಿದ್ದೇವೆ. ಜತೆಗೆ ಬಹುಸಂಖ್ಯಾತ ಹಿಂದುಗಳ ನಂಬಿಕೆ, ಭಾವನೆಗಳ ರಕ್ಷಣೆಗಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಚುನಾವಣಾ ರಾಜಕೀಯ ಬೇರೆ‌. ಧಾರ್ಮಿಕ ಭಾವನೆ ಬೇರೆಯಾಗಿದೆ‌. ಕಿಷ್ಕಿಂಧೆ ಆಂಜನೇಯನ ಜನ್ಮ ಸ್ಥಳ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಂಜನೀ ಪುತ್ರನೆಂದು ಸಾರುವ ಪೌರಾಣಿಕ ಐತಿಹ್ಯಗಳಿವೆ. ಆದರೂ ಕಾಂಗ್ರೆಸ್ ನ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಜನ್ಮಸ್ಥಳ, ಭಗವಾನ್ ಆಂಜನೇಯನ ಕುರುಹುಗಳ ಬಗ್ಗೆ ಸಂದೇಹ ವ್ಯಕ್ತಪಡಿಸುವ ಜತೆಗೆ ಸೂರ್ಯಪುತ್ರ ಎನ್ನುವ ಮೂಲಕ ಅಪಮಾನಿಸಿದ್ದಾರೆ ಎಂದು ಕಿಡಿಕಾರಿದರು.

Leave a Reply