ಬೆಂಗಳೂರು: ಚುನಾವಣೆ ಸಮೀಪಿಸಿರುವ ಹಂತದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಪತ್ರ ನಕಲಿ ಎಂದು ಸಿದ್ದರಾಮಯ್ಯ ಆರಂಭದಲ್ಲೇ ಟ್ವೀಟ್ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಂತೆ ನಕಲಿ ಪತ್ರವನ್ನು ಸೃಷ್ಟಿಸಲಾಗಿದೆ. ಅದರಲ್ಲಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಧಾನ ಹೊರ ಹಾಕಿ, ದೂರು ನೀಡಿದಂತೆ ಬರೆಯಲಾಗಿದೆ.
ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದ್ದೇನೆ. ಈ ಮೊದಲು 2013ರಲ್ಲಿ ಕಾಂಗ್ರೆಸ್ ಅನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತಂದು ನನ್ನ ಸಾಮರ್ಥ್ಯ ಸಾಬೀತುಪಡಿಸಿದ್ದೇನೆ. ಈ ಬಾರಿಯೂ ರಾಹುಲ್‍ಗಾಂಧಿ ಅವರ ತಂಡದ ಮಾರ್ಗದರ್ಶನದಂತೆ ಪ್ರಚಾರ ನಡೆಸುತ್ತಿದ್ದೇನೆ. ಆದರೆ ಕೆಪಿಸಿಸಿ ಅಧ್ಯಕ್ಷರು ನನ್ನ ವಿರುದ್ಧ ಸಂಚು ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದಂತೆ ಚಿತ್ರಿಸಲಾಗಿದೆ.
ಈ ನಕಲಿ ಪತ್ರವನ್ನು ಬಿಜೆಪಿಯ ಬಹಳಷ್ಟು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಅವರು ಇದು ನಕಲಿ ಪತ್ರ ಎಂದು ಟ್ವೀಟ್ ಮಾಡಿದ ಮೇಲೆ ಡಿಲಿಟ್ ಮಾಡಿದ್ದಾರೆ.
ಶಕ್ತಿ ಪ್ರದರ್ಶನ: ಈ ಪತ್ರ ಬಹಿರಂಗಗೊಂಡ ನಂತರ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆಯಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನನ್ನ ಮತ್ತು ಡಿ.ಕೆ. ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ. ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣಲಾರದು. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡಿ ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಿದ್ದೇನೆ ಎಂದು ಅವರು ಹೇಳಿದರು.
ಡಿಕೆ ಶಿವಕುಮಾರ್ ಮಾತನಾಡಿ, ಸಿದ್ದರಾಮಯ್ಯ ನನ್ನ ವಿರುದ್ಧ ಯಾಕೆ ಪತ್ರ ಬರೆಯುತ್ತಾರೆ? ಅವರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಮೊನ್ನೆಯಷ್ಟೇ ನಾವಿಬ್ಬರೂ ಸೇರಿ ಅಭಿಪ್ರಾಯ ಹಂಚಿಕೊಂಡಿದ್ದೇವೆ. ಈಗಲೂ ನಾವು ಚರ್ಚೆ ಮಾಡುತ್ತಿದ್ದೇವೆ. ಅವರಿಗೆ ಜನರ ಬಳಿ ಪ್ರಚಾರಕ್ಕೆ ಸಮಯ ಸಿಗುತ್ತಿಲ್ಲ. ಇನ್ನು ಈ ರೀತಿ ದೂರಲು ಎಲ್ಲಿ ಸಾಧ್ಯ? ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಅವರ ಹೆಸರಲ್ಲಿ ನಕಲಿ ಪತ್ರ ಬರೆದು ಹಂಚುತ್ತಿದ್ದಾರೆ. ಬಿಜೆಪಿಯಲ್ಲಿರುವ ಆಂತರಿಕ ಹುಳುಕು ಮುಚ್ಚಿಕೊಳ್ಳಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಮೋದಿ ಅವರು ಬಂದು ಬೀದಿ ಬೀದಿ ಅಲೆದಾಡಿದರು. ರೋಡ್ ಶೋ ಮಾಡಿದರು. ಅವರ ಜತೆ ಒಬ್ಬ ರಾಜ್ಯ ನಾಯಕನೂ ಇರಲಿಲ್ಲ. ಕನಿಷ್ಠ ಪಕ್ಷ ಆಯಾ ಕ್ಷೇತ್ರದ ಅಭ್ಯರ್ಥಿಯನ್ನಾದರೂ ಜತೆಯಲ್ಲಿ ಇಟ್ಟುಕೊಂಡು ರೋಡ್ ಶೋ ಮಾಡಬಾರದೇ? ಬೇರೆ ಯಾವುದೇ ನಾಯಕರು ಬೆಳೆಯಬಾರದೇ? ನೂತನ ಸಂಸತ್ ಭವನಕ್ಕೂ ಒಬ್ಬರೇ ಹೋಗುತ್ತಾರೆ. ರಾಮ ಮಂದಿರ ಪೂಜೆಗೂ ಒಬ್ಬರೇ ಕೂರುತ್ತಾರೆ. ಮತ ಕೇಳುವಾಗಲೂ ಒಬ್ಬರೇ ಇರುತ್ತಾರೆ. ನಾಯಕನಾದವ ನಾಯಕರನ್ನು ಸೃಷ್ಟಿ ಮಾಡಬೇಕು. ಈ ಸಮಯದಲ್ಲಿ ಅವರ ನಾಯಕರ ಶಕ್ತಿಯನ್ನು ಅವರೇ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಇದು ಅಚ್ಚರಿ ತಂದಿದೆ. ಸೋಲುವ ಭೀತಿಯಿಂದ ಇಷ್ಟು ಅಬ್ಬರದ ಪ್ರಚಾರ ಮಾಡಿದ್ದಾರೆ. ಅವರು ಎಷ್ಟೇ ಅಬ್ಬರದ ಪ್ರಚಾರ ಮಾಡಿದರೂ ರಾಜ್ಯದ ಜನ ಕೇಳುವುದಿಲ್ಲ. ಜನರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಹಾಗೂ ದಕ್ಷ ಆಡಳಿತ, ರಾಜ್ಯದ ಅಭಿವೃದ್ಧಿ ಬೇಕಾಗಿದೆ ಎಂದು ತಿಳಿಸಿದರು.



