ಗೂಢಚಾರಿಕೆ ಪತ್ರಕರ್ತರಿಗೆ ಆಹ್ವಾನ ಆರೋಪ: ನಿರಾಧಾರವೆಂದ ಹಮೀದ್ ಅನ್ಸಾರಿ

4 years ago

ದೆಹಲಿ: ಐಎಸ್ಐ ಪರ ಭಾರತದಲ್ಲಿ ಗೂಢಚಾರಿಕೆ ನಡೆಸುವ ಪಾಕ್ ಪತ್ರಕರ್ತರನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಹ್ವಾನಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ವಕ್ತಾರ ಗೌರವ್ ಭಾಟೀಯ, ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿಕೆಗಳನ್ನು ಉಲ್ಲೇಖಿಸಿ, ಅನ್ಸಾರಿಯವರು ಹಲವು ಸೂಕ್ಷ್ಮ ಹಾಗೂ ಅತ್ಯಂತ ಗೌಪ್ಯ ಮಾಹಿತಿಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದರು ಎಂದಿರುವುದರ ಆಧಾರದಲ್ಲಿ ಆರೋಪ ಮಾಡಿದ್ದಾರೆ.

ಇರಾನ್ ನಲ್ಲಿ ಅನ್ಸಾರಿ ಅವರು ದೂತವಾಸ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ದೇಶದ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂದು ರಾ ಮಾಜಿ ಕಾರ್ಯಕಾರಿ ಅವರ ಹೇಳಿಕೆಯನ್ನೂ ಭಾಟಿಯಾ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದರು.

ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಹಮೀದ್ ಅನ್ಸಾರಿ, ನನ್ನ ಮೇಲಿನ ಆರೋಪ ಶುದ್ಧ ಸುಳ್ಳು. ಪಾಕಿಸ್ತಾನದ ಗೂಢಚಾರಿಕೆ ಸಂಸ್ಥೆ ISI ಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಭೇಟಿಯಾಗಿರುವ ಅಥವಾ ಆಹ್ವಾನಿಸಿರುವ ಆರೋಪ ನಿರಾಧಾರ ಎಂದಿದ್ದಾರೆ.

ಇರಾನ್‌ನಲ್ಲಿ ಭಾರತದ ರಾಯಭಾರಿಯಾಗಿ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬ ಮಾಜಿ ಬೇಹುಗಾರಿಕಾ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಅಧಿಕಾರಿಯ ಆರೋಪಗಳ ಆಧಾರದಲ್ಲಿ ಬಿಜೆಪಿ ಮಾಡಿರುವ ಆರೋಪಗಳನ್ನು ಅವರು ತಿರಸ್ಕರಿಸಿದ್ದಾರೆ.

ನನ್ನ ಮೇಲೆ ವೈಯಕ್ತಿಕವಾಗಿ ಮಾಧ್ಯಮಗಳ ವಿಭಾಗಗಳಲ್ಲಿ ಮತ್ತು ಬಿಜೆಪಿಯ ಅಧಿಕೃತ ವಕ್ತಾರರಿಂದ ಸುಳ್ಳು ಹೇಳಲಾಗಿದೆ. ಭಾರತದ ಉಪ ರಾಷ್ಟ್ರಪತಿಗಳಿಂದ ವಿದೇಶಿ ಗಣ್ಯರಿಗೆ ಆಹ್ವಾನವು ಸಾಮಾನ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸರ್ಕಾರದ ಸಲಹೆಯ ಮೇರೆಗೆ ನಡೆಯುತ್ತದೆ ಎಂಬುದು ತಿಳಿದ ಸಂಗತಿ ಎಂದಿದ್ದಾರೆ.

ಭಯೋತ್ಪಾದನೆ ಕುರಿತು ದೆಹಲಿಯಲ್ಲಿ ನಡೆದ ಸಭೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಆಹ್ವಾನಿಸಲಾಗಿತ್ತು ಎಂಬುದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಉಪ ರಾಷ್ಟ್ರಪತಿ ವಿದೇಶಿ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸುವುದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ. ಸಂಘಟಕರು ಈ ಪಟ್ಟಿ ಪಡೆಯುವುದು ಸಾಮಾನ್ಯ ಸಂಗತಿ. ನಾನು ಅವರನ್ನು ಯಾವತ್ತೂ ಆಹ್ವಾನಿಸಲಿಲ್ಲ ಅಥವಾ ಭೇಟಿ ಮಾಡಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

Leave a Reply