ರಾಯಚೂರು: ಕರ್ನಾಟಕ ರೈತ ಸಂಘ (KRS) ತಾಲೂಕು ಸಮಿತಿ ಸಿಂಧನೂರು ನೇತೃತ್ವದಲ್ಲಿ ಸಿಂಧನೂರು ತಹಶೀಲ್ದಾರ್ ಕಾರ್ಯಾಲಯದ ಮುಂದೆ ದಿನಾಂಕ 19/7/2022 ರಿಂದ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಆರ್.ಎಸ್. ಹೇಳಿದೆ.
ಧರಣಿ ಯಶಸ್ಸುಗೊಳಿಸುವ ಸಲುವಾಗಿ ಸಿಂಧನೂರು ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಅಭಿಯಾನ ನಡೆಸಲಾಗಿದೆ. ಹಿರೇ ಬೆರಗಿ, ಚಿಕ್ಕಬೆರಗಿ, ಹಂಚಿನಾಳಕ್ಯಾಂಪ್, ಉಪ್ಪಳ ವೆಂಕಟೇಶ್ವರ್ ಕ್ಯಾಂಪ್, ಬೆಳಗುರ್ಕಿ ಉದ್ಭಳ್ ಬೂದಿಹಾಳ್ ಕ್ಯಾಪ್, ಅಮರಪೋರ್ ವಿರಾಪುರ್ ಮತ್ತು ಮಸ್ಕಿ ವಿಧಾನಸಭಾ ಕ್ಷೆತ್ರದ ಭೋಗಪುರ, ಗುಂಡ ಬೊಮ್ಮನಾಲ್, ರತ್ನಾಪುರಹಟ್ಟಿ, ವಗರ್ನಾಳ್, ಗಂಟೆರಟ್ಟಿ, ಗೊರ್ಲೊಟಿ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಲಾಗಿದೆ.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್, ಅನೇಕ ಸಭೆಗಳಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಪ್ರಮುಖ ವಿಷಯಗಳ ಕುರಿತು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯಾರದಿಹಾಳ್. ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ್, ಬೆರಗಿ ತಾಲೂಕು ಉಪಾಧ್ಯಕ್ಷ ಚಿಟ್ಟಿಬಾಬು ನೇತೃತ್ವ ವಹಿಸಿದ್ದರು.
ಕಂದಾಯ ಸಚಿವ ಆರ್.ಅಶೋಕ್, ಸರಕಾರಿ ಜಮೀನನ್ನು ಸಾಗುವಳಿ ಮಾಡುವ ಭೂ ಹೀನ ಬಡ ರೈತರಿಗೆ ಭೂ ಮಂಜೂರಾತಿ ಕೊಡುವುದಿಲ್ಲ. ಸರ್ಕಾರಕ್ಕೆ ಗುತ್ತಿಗೆ ರೂಪದಲ್ಲಿ ಹಣ ಕೊಡಲು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ ಎಂದು ಕೆ.ಆರ್.ಎಸ್ ಆರೋಪಿಸಿದೆ.
ಮಸ್ಕಿ, ಸಿಂಧನೂರು ಶಾಸಕರು, ಈ ಭೂ ಗುತ್ತಿಗೆ ಕಾಯ್ದೆ ತಿದ್ದುಪಡಿಗೆ ವಿರೋಧ ಮಾಡುವಂತೆ ಒತ್ತಾಯಿಸಲು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಪ್ರಶ್ನೆ ಮಾಡಲು, ಭ್ರಷ್ಟಾಚಾರ, ದುರಾಡಳಿತವನ್ನು ತಡೆಯುವಂತೆ ಜನರಲ್ಲಿ ಮನವಿ ಮಾಡಿದರು.
ಜೊತೆಗೆ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲು ಕರೆನೀಡಿದರು.



