ಗ್ಯಾರಂಟಿ ಯೋಜನೆಗಳನ್ನು ದೇಶದ ಇತರೆ ರಾಜ್ಯಗಳು ನಕಲು ಮಾಡುತ್ತಿವೆ: ಮಂಕಾಳ ವೈದ್ಯ

2 months ago

ಗ್ಯಾರಂಟಿ ಯೋಜನೆಯಿಂದ ಜಿಲ್ಲೆಗೆ ವಾರ್ಷಿಕ 1500 ಕೋಟಿ ನೆರವು

ಕಾರವಾರ: ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸಾರ್ವಜನಿಕರಿಗೆ ಪ್ರತಿ ವರ್ಷ ರೂ 1,500 ಕೋಟಿ ಹಾಗೂ ರಾಜ್ಯದಲ್ಲಿ ರೂ 50 ಸಾವಿರ ಕೋಟಿಯ ಪ್ರಯೋಜನವನ್ನು ಪಡೆಯುತ್ತಿದ್ದು, ಜನತೆ ಸಂತಸದಲ್ಲಿದ್ದಾರೆ. ಸಾಮಾನ್ಯ ಜನತೆ ಸಂತೋಷದಲ್ಲಿದ್ದಾರೆ ಎಂದರೆ ಅದೇ ಅಭಿವೃಧ್ದಿಯ ಸೂಚಕ ಎಂದು ಮೀನುಗಾರಿಕೆ  ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.

ಹೊನ್ನಾವರದ ಗುಣವಂತೆಯ ಕೆಳಗಿನೂರು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತದ ವತಿಯಿಂದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಗಾರ- ಗ್ಯಾರಂಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸಾಮನ್ಯ ಬಡ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಯೋಜನೆಗಳ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಜೊತೆಗೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ದೇಶದ ಇತರೆ ರಾಜ್ಯಗಳು ನಕಲು ಮಾಡಿಕೊಳ್ಳುತ್ತಿವೆ. ರಾಜ್ಯದ ಈ ಯೋಜನೆಗಳು ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ತೆರಿಗೆ ಹಣವನ್ನು ಪುನಃ ಜನರಿಗೆ ನೀಡುವುದರ ಮೂಲಕ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಲಾಗಿದೆ. ಬಡ ಜನರಿಗೆ 5 ಗ್ಯಾರಂಟಿ ಯೋಜನೆ ಪೂರಕವಾಗಿದ್ದು, ಈ ಯೋಜನೆಗಳು ಮುಂದುವರೆಯಲಿವೆ. ಈ ಬಾರಿ ರಾಜ್ಯದಲ್ಲಿ 4 ಲಕ್ಷ 50 ಸಾವಿರ ಕೋಟಿಯ ಬಜೆಟ್ ಮಂಡನೆಯಾಗಲಿದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ರಾಜ್ಯ ಗ್ಯಾರಂಟಿ ಪ್ರಾಧಿಕಾರದಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ನ್ಯೂನತೆಗಳು ಮತ್ತು ಅವುಗಳ ವಿಶ್ಲೇಷಣೆ ನಡೆಸಲಾಗುತ್ತಿದ್ದು, ಯೋಜನೆಯ ಪ್ರಯೋಜನ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ನಿಗಾ ಇಡಲಾಗಿದೆ. ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದು ಗ್ಯಾರಂಟಿ ಯೋಜನೆಗಳನ್ನು ಯಥಾವತ್ತಾಗಿ ಅನುಷ್ಠಾನ ಮಾಡಿದೆ ಎಂದರು.

ಗ್ಯಾರಂಟಿ ಯೋಜನೆಯ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮೀಡಿಯಾ ಸೆಲ್ ರಚಿಸಲಾಗಿದ್ದು, ಯೋಜನೆಯ ಬಗ್ಗೆ ವ್ಯಾಪಕ ಫಲಾನುಭವಿಗಳಿಂದಲೇ ಸಂತಸ ವ್ಯಕ್ತಪಡಿಸಲು ಮನೆಗೆ 5 ಗ್ಯಾರಂಟಿ ಮನೆ ಮುಂದೆ ರಂಗೋಲಿ ಎಂಬ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಲಾಗುವುದು ಎಂದ ಅವರು, ಈ ಯೋಜನೆಗಳು ಬಿಟ್ಟಿ ಭಾಗ್ಯ ಎನ್ನುವವರಿಗೆ, ಇದು ಜನಪರ ಕಾರ್ಯಕ್ರಮವಾಗಿದ್ದು, ನಮ್ಮ ಹಕ್ಕು ನಮಗೆ ತಲುಪಿದೆ ಎಂದು ಫಲಾನುಭವಿಗಳು ಹೇಳಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್ ಆರ್ ಪಾಟೀಲ್ ಮಾತನಾಡಿ, ಜಿಲ್ಲೆಯು ಬಹುತೇಕ ಗುಡ್ಡಗಾಡು ಪ್ರದೇಶ ಹೊಂದಿದರೂ ಕೂಡ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರು ಸ್ವಾಭಿಮಾನದ ಬದಕು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ ಮಾತನಾಡಿ, ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಪಲಾನುಭವಿಗಳ ತಲುಪಿಸಲು ಅಧಿಕಾರಿಗಳ ಸಹಕಾರ ಮಹತ್ವದ್ದಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಶೇ.99 ರಷ್ಟು ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯವಾಗಿದೆ. ಮಹಿಳೆಯರ ಬದುಕಿಗೆ ಸ್ವಾವಲಂಬನೆ ದೊರೆತಿದ್ದು, ಗ್ಯಾರಂಟಿಗಳು ಬದುಕಿನ ಭರವಸೆಗಳಾಗಿವೆ ಎಂದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ಜಿಲ್ಲಾ ಉಸ್ತುವರಿ ಸಚಿವರ ಮಾರ್ಗದರ್ಶನದಲ್ಲಿ ಕೇವಲ 15 ದಿನದಲ್ಲಿ ಜಿಲ್ಲೆಯ 12 ತಾಲೂಕುಗಳಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಕಚೇರಿಗಳನ್ನು ಆರಂಭಿಸಿ, ಅನೇಕ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾದವರಿಗೆ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷರು, ಸದಸ್ಯರು ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡುವ ಮೂಲಕ ಗ್ಯಾರಂಟಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಯ ಸಭೆಯನ್ನು ಜಿಲ್ಲೆಯಲ್ಲಿ ಹಾಗೂ ಎಲ್ಲಾ ತಾಲೂಕು ಹಾಗೂ ಹಳ್ಳಿ ಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದು, ಗ್ಯಾರಂಟಿ ಯೋಜನೆ ಆರಂಭಗೊಂಡು ಇಲ್ಲಿಯವರಿಗೆ 300ಕ್ಕೂ ಹೆಚ್ಚು ಸಭೆ ಮತ್ತು ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 17 ಕೋಟಿ ಫಲಾನುಭವಿಗಳು ಪ್ರಯೋಜನೆಗಳು ಪಡೆದುಕೊಂಡಿದ್ದಾರೆ. 500.23 ಕೋಟಿ ವೆಚ್ಚದ ಉಚಿತ ಟಿಕೆಟ್ ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,95,381 ಫಲಾನುಭವಿಗೆ ವಿದ್ಯುತ್ ಉಚಿತವಾಗಿ ನೀಡಲಾಗಿದ್ದು, ಸುಮಾರು 511 ಕೋಟಿ, ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ 2,36,000 ಅರ್ಹ ಫಲಾನುಭವಿಗಳಿಗೆ 2,000 ರೂ ಪ್ರತಿ ಫಲಾನುಭವಿಗಳಿಗೂ ನೀಡಲಾಗಿದೆ. ಯುವನಿಧಿ ಯೋಜನೆಯಡಿ 8,000 ಯುವಕರು ನೋಂದಣಿ ಮಾಡಿಕೊಂಡಿದ್ದು, 7,000 ಫಲಾನುಭವಿಗಳಿಗೆ 18 ಕೋಟಿ ನೇರವು ನೀಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 53 ಸಾವಿರ ಕ್ವಿಂಟಲ್ ಅಕ್ಕಿಯನ್ನು ಬಡವರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಉಪನ್ಯಾಸ ನೀಡಿದ ಮೋಹನ್ ಮೈಸೂರು, ಕಳೆದ 2.5 ವರ್ಷದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ 1 ಲಕ್ಷದ ಹತ್ತು ಸಾವಿರ ಕೋಟಿ ಮೊತ್ತದ ನೆರವನ್ನು ನೇರವಾಗಿ ರಾಜ್ಯದ ಸಾರ್ವಜನಿಕರಿಗೆ ತಲುಪಿಸಲಾಗಿದೆ. ಈ ಯೋಜನೆಗಳು ನಿಜವಾದ ಅಭಿವೃದ್ಧಿ ಯೋಜನೆಗಳಾಗಿದ್ದು, ಈ ಯೋಜನೆಗಳನ್ನು ಆರ್ಥಿಕ ತಜ್ಞರು ಸಿದ್ದಪಡಿಸಿದ್ದು, ಯೋಜನೆ ಅನುಷ್ಠಾನದಿಂದ ರಾಜ್ಯ ದಿವಾಳಿಯಾಗಿಲ್ಲ, ಬದಲಾಗಿ ಜನರ ಕೊಳ್ಳುವ ಸಾಮರ್ಥ್ಯ ಅಧಿಕಗೊಂಡಿದೆ, ತಲಾ ಆದಾಯ ದೇಶದಲ್ಲೇ ಅಧಿಕವಾಗಿದ್ದು, ಜಿ.ಎಸ್.ಟಿ ಸಂಗ್ರಹಣೆಯಲ್ಲಿ ರಾಜ್ಯ 2 ನೇ ಸ್ಥಾನದಲ್ಲಿದೆ. ಮಹಿಳಾ ಸಬಲೀಕರಣವಾಗಿದ್ದು ಮಾದರಿ ಸಮಾಜ ನಿರ್ಮಾಣಕ್ಕೆ ನೆರವಾಗಿದೆ. ಗ್ಯಾರೆಂಟಿ ಯೋಜನೆಗಳ ಜೊತೆಗೆ ರಾಜ್ಯದಲ್ಲಿ ಇತರೇ ಅಭಿವೃದ್ಧಿ ಕಾರ್ಯಗಳು ಕೂಡಾ ನಡೆಯುತ್ತಿವೆ ಎಂದರು.

ಜಿಲ್ಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿ ಅನಿತಾ ಮಾತನಾಡಿ, ಈ ಐದು ಯೋಜನೆಯಿಂದ ಪ್ರತಿ ತಿಂಗಳು ನನ್ನ ಕುಟುಂಬಕ್ಕೆ 10 ರಿಂದ 12 ಸಾವಿರ ಉಳಿತಾಯವಾಗುತ್ತಿದ್ದು, ಈ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದಿಲೀಶ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಜನಾರ್ಧನ ಕುಪ್ಪ ದೇವಾಡಿಗ, ಪುರುಷೋತ್ತಮ ದೇವಪ್ಪ ನಾಯ್ಕ, ಸುಭಾಸ್ ಮಹಾಬಲೇಶ್ವರ ಕೋರ್ವೇಕರ್, ದತ್ತಾತ್ರೇಯ ನಾರಾಯಣ ಗಾಂವಕರ, ನಾಗರಾಜ ಮುರ್ಡೇಶ್ವರ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜೇಂದ್ರ ಹಾಡು ರಾಣೆ, ಪಾಂಡುರಂಗ ಗೌಡ, ಅಶೋಕ ಗೌಡ, ಅಣ್ಣಪ್ಪ ಎಮ್ ನಾಯ್ಕ, ರಾಜು ನಾಯ್ಕ, ಸುಮಾ ರಾಜು ಉಗ್ರಾಣಕರ, ಕೆ.ಜಿ. ನಾಗರಾಜ, ದೇವಿದಾಸ ನಾಗೇಶ ಶಾನಭಾಗ, ರಾಜಶೇಖರ ಹಿರೇಮಠ, ಕುಮಾರ ಏಕನಾಥ ಜಾವಳೇಕರ, ಪುರುಷೋತ್ತಮ ಸೀತಾರಾಮ ಕಾಮತ, ರಿಯಾಜ ಅಹ್ಮದ ಸೈಯದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply